ವರಂಗಲ್(ತೆಲಂಗಾಣ): ಜಿಲ್ಲೆಯ ಮಾಮುನೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ಸರ್ಕಾರ ಚುರುಕುಗೊಳಿಸಿದೆ. ಮಾಮುನೂರಿನ ವಿಮಾನ ನಿಲ್ದಾನವು ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಇರಬೇಕು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಪೇಕ್ಷಿಸಿದ್ದು, ಆ ನಿಟ್ಟಿನಲ್ಲಿ ನಿರ್ಮಾಣ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ವಿಮಾನ ನಿಲ್ದಾನ ನಿರ್ಮಾಣವಾಗಲಿದೆ. ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ನಡೆಸಿದ್ದು, 205 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದು ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಲಿದೆ.
ವರಂಗಲ್ ಜಿಲ್ಲಾ ಕೇಂದ್ರದಿಂದ ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್ ಮೂಲಕ ಒಂದು ರಾಷ್ಟ್ರೀಯ ಹೆದ್ದಾರಿ ಮತ್ತು ಚೆರಿಯಾಲ ಮಾರ್ಗವಾಗಿ ಇನ್ನೊಂದು ರಾಷ್ಟ್ರೀಯ ಹೆದ್ದಾರಿ ಇದೆ. ಈ ಎರಡು ಹೆದ್ದಾರಿಗಳ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಮಾಮುನೂರು ವಿಮಾನ ನಿಲ್ದಾಣ ಪೂರ್ಣಗೊಂಡರೆ ಈ ಹೆದ್ದಾರಿಗಳ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಉದ್ಯೋಗಾವಕಾಶಗಳು ಸೃಷ್ಟಿ: ಮಾಮುನೂರು ವಿಮಾನ ನಿಲ್ದಾಣ ಪ್ರಾರಂಭವಾದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಸಿದ್ದಿಪೇಟೆ ಜಿಲ್ಲಾ ಕೇಂದ್ರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಗಗಳು ಅಭಿವೃದ್ಧಿಯಾಗುತ್ತವೆ. ಹಲವು ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಮತ್ತು ಭೂಮಿಯ ಮೌಲ್ಯಗಳು ಹೆಚ್ಚಾಗುತ್ತವೆ. ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ.
ಸಿದ್ದಿಪೇಟೆ ಜಿಲ್ಲಾ ಕೇಂದ್ರದಿಂದ ಶಂಷಾಬಾದ್ ವಿಮಾನ ನಿಲ್ದಾಣವು 139 ಕಿ.ಮೀ ದೂರದಲ್ಲಿದೆ. ಮಾಮುನೂರಿಗೆ ಕೇವಲ 89 ಕಿ.ಮೀ ದೂರದಲ್ಲಿದೆ. ಸಿದ್ದಿಪೇಟೆ ಜಿಲ್ಲಾ ಕೇಂದ್ರದಿಂದ ಶಂಷಾಬಾದ್ ವಿಮಾನ ನಿಲ್ದಾಣ ದೂರವಾಗುತ್ತದೆ ಮತ್ತು ಟ್ರಾಫಿಕ್ ಸಮಸ್ಯೆ ಕೂಡ ಇರುತ್ತದೆ. ಅಲ್ಲಿಗೆ ತಲುಪಲು ಎರಡ್ಮೂರು ಗಂಟೆಗಳು ಬೇಕಾಗುತ್ತದೆ. ಮಾಮುನೂರು ಹತ್ತಿರದಲ್ಲಿರುವುದರಿಂದ ಒಂದು ಗಂಟೆಯೊಳಗೆ ವಿಮಾನ ನಿಲ್ದಾಣ ತಲುಪಬಹುದು.
ಪ್ರತಿ ವರ್ಷ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ವರಂಗಲ್‌ನಿಂದ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಮಾಮನೂರಿನಲ್ಲಿಯೇ ವಿಮಾನ ನಿಲ್ದಾಣ ಪ್ರಾರಂಭವಾದರೆ ಅರ್ಧದಷ್ಟು ಪ್ರಯಾಣಿಕರು ಇಲ್ಲಿಗೆ ಬರಲಿದ್ದಾರೆ.
ಸಮಯ, ಹಣ ಉಳಿತಾಯ: ಮಾಮುನೂರು ವಿಮಾನ ನಿಲ್ದಾಣ ಪ್ರಾರಂಭವಾದರೆ ಜಿಲ್ಲೆಯ ಜನರಿಗೆ ವಿಮಾನ ಸೇವೆಗಳು ಲಭ್ಯವಾಗುತ್ತದೆ. ಅಂತಾರಾಷ್ಟ್ರೀಯ ವಿಮಾನಗಳು ಓಡಾಟ ಆರಂಭವಾದರೆ ಇನ್ನಷ್ಟು ಅನುಕೂಲವಾಗಲಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಮಧ್ಯಮ ವರ್ಗದವರು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಎಂದು ಆರ್ ಆ್ಯಂಡ್ ಬಿ ನಿವೃತ್ತ ಅಧಿಕಾರಿ ಮುಸ್ತ್ಯಾಲ ಬಾಲನರಸಯ್ಯ ಹೇಳಿದರು.
ಸಿದ್ದಿಪೇಟೆ ಉದ್ಯಮಿ ಮಂಕಾಲ ನವೀನ್ ಪ್ರತಿಕ್ರಿಯಿಸಿ, "ವರಂಗಲ್ ಬಳಿಯ ಮಾಮುನೂರಿನಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾದರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ. ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳಸಲು ಅನುಕೂಲವಾಗುತ್ತದೆ. ಭವಿಷ್ಯದಲ್ಲಿ ಇದನ್ನು ಶಂಷಾಬಾದ್‌ಗೆ ಪರ್ಯಾಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು. ಪ್ರವಾಸಕ್ಕೆ ಹೋಗುವವರಿಗೆ ಮತ್ತು ಉದ್ಯಮಿಗಳಿಗೆ ಇದು ಉಪಯುಕ್ತ" ಎಂದರು.
ಇದನ್ನೂ ಓದಿ: ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ: ಕೇಂದ್ರ ತಂಡ 3 ಸ್ಥಳಗಳ ಪರಿಶೀಲನೆ ನಡೆಸಲಿದೆ: ಎಂ.ಬಿ.ಪಾಟೀಲ್
ಇದನ್ನೂ ಓದಿ: ಹೈದರಾಬಾದ್: ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ