ಹೈದರಾಬಾದ್: ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜಯಂತಿಯಂದು ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲಾತಿಯನ್ನು ತೆಲಂಗಾಣ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಎಸ್‌ಸಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ರಾಜ್ಯ ಎಂಬ ಅಭಿದಾನಕ್ಕೂ ಪಾತ್ರವಾಗಿದೆ.
ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ ಎಂದು ನೀರಾವರಿ ಸಚಿವ ಎನ್.ಉತ್ತುಮ್ಕುಮಾರ್ ರೆಡ್ಡಿ ತಿಳಿಸಿದರು. ಅಧಿಸೂಚನೆಯ ಪ್ರತಿಯನ್ನು ಸಿಎಂಗೆ ನೀಡಿದರು.
ಮೂರು ವರ್ಗಗಳಲ್ಲಿ ವಿಂಗಡಣೆ: ಒಳಮೀಸಲಾತಿ ಕುರಿತು ವರದಿ ನೀಡಲು ತೆಲಂಗಾಣ ಸರ್ಕಾರವು, ಈ ಹಿಂದೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳಲ್ಲಿ 59 ಉಪ ಜಾತಿಗಳನ್ನು ಗುರುತಿಸಿತ್ತು. ಅಸ್ತಿತ್ವದಲ್ಲಿರುವ ಶೇ.15ರಷ್ಟು ಮೀಸಲಾತಿಯೊಳಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವುಗಳನ್ನು I, II ಮತ್ತು III ಎಂದು ವರ್ಗೀಕರಿಸಲು ಶಿಫಾರಸು ಮಾಡಿತ್ತು.
ఇదొక చారిత్రక సందర్భం…
— Revanth Reddy (@revanth_anumula) April 14, 2025
మూడు దశాబ్దాల
కలను నిజం చేసిన సంకల్పం…
ఎస్సీ వర్గీకరణ పై…
నేడు ప్రజా ప్రభుత్వం
అధికారిక ఉత్తర్వులు జారీ చేసింది…
తొలి కాపీని అందుకోవడం…
గొప్ప అనుభూతిని మిగిల్చిన క్షణం.#SCCategorisation #Telangana#SocialJustice #CasteSurvey pic.twitter.com/4TRoE8iRL4
ಈ ಸಂಬಂಧ ತೆಲಂಗಾಣ ಸರ್ಕಾರ, ಪರಿಶಿಷ್ಟ ಜಾತಿಗಳ ಮೀಸಲಾತಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದ್ದು, ಇದಕ್ಕೆ ಏಪ್ರಿಲ್ 8, 2025ರಂದು ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇಂದು (ಏಪ್ರಿಲ್ 14) ಒಳಮೀಸಲಾತಿ ಜಾರಿ ಕುರಿತು ಸರ್ಕಾರಿ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಒಳಮೀಸಲಾತಿ ಉಪಸಮಿತಿಯ ನೇತೃತ್ವ ವಹಿಸಿದ್ದ ಸಚಿವರು ತಿಳಿಸಿದರು.
ದೇಶದ ಮೊದಲ ರಾಜ್ಯ: ಇಂದು ಬೆಳಿಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಸರ್ಕಾರಿ ಆದೇಶದ ಮೊದಲ ಪ್ರತಿಯನ್ನು ನೀಡಲಾಗಿದೆ. ಇಂದಿನಿಂದ, ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿಗೆ ಬಂದಿದೆ ಎಂದರು.
"ಸುಪ್ರೀಂ ಕೋರ್ಟ್‌ನ ತೀರ್ಪುಗಳ ನಂತರ ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ. ಹಿಂದಿನ ಸರ್ಕಾರಗಳು ಒಳ ಮೀಸಲಾತಿ ಕುರಿತು ನಿರ್ಣಯಗಳನ್ನು ಅಂಗೀಕರಿಸಿರಲಿಲ್ಲ. ಈ ಬಗ್ಗೆ ಯಾವುದೇ ಕ್ರಮವೂ ಕೈಗೊಂಡಿರಲಿಲ್ಲ" ಎಂದು ಟೀಕಿಸಿದರು.
"ಇನ್ನು ಮುಂದೆ, ಸರ್ಕಾರಿ ಎಲ್ಲಾ ಹುದ್ದೆಗಳನ್ನು ಎಸ್‌ಸಿ ಒಳ ಮೀಸಲಾತಿಯ ಪ್ರಕಾರ ಭರ್ತಿ ಮಾಡಲಾಗುವುದು. 2026 ರ ಜನಗಣತಿಯಲ್ಲಿ ಎಸ್‌ಸಿ ಜನಸಂಖ್ಯೆ ಹೆಚ್ಚಾದರೆ, ಅದಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಲಿದೆ" ಎಂದು ಹೇಳಿದರು.
ಯಾರಿಗೆ ಎಷ್ಟು ಮೀಸಲಾತಿ?: ಒಳಮೀಸಲಾತಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಈಗಿರುವ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ. ಆಯೋಗದ ವರದಿಯ ಪ್ರಕಾರ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ 15 ಎಸ್‌ಸಿ ಉಪ ಜಾತಿಗಳನ್ನು ಒಳಗೊಂಡಿರುವ ಗ್ರೂಪ್-I ಕ್ಕೆ ಶೇಕಡಾ 1 ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ.
ಮಧ್ಯಮ ಪ್ರಯೋಜನ ಪಡೆದ 18 ಉಪ ಜಾತಿಗಳನ್ನು ಗ್ರೂಪ್-II ಕ್ಕೆ ಸೇರಿಸಲಾಗಿದ್ದು, ಅವುಗಳಿಗೆ ಶೇಕಡಾ 9 ರಷ್ಟು ಕೋಟಾ ಒದಗಿಸಲಾಗಿದೆ. ಹೆಚ್ಚಿನ ಪ್ರಯೋಜನ ಪಡೆದ 26 ಉಪ ಜಾತಿಗಳನ್ನು ಗ್ರೂಪ್-IIIಕ್ಕೆ ಸೇರಿಸಿ, ಅವುಗಳಿಗೆ ಶೇಕಡಾ 5ರಷ್ಟು ಮೀಸಲಾತಿ ನೀಡಲಾಗಿದೆ.
ಇದನ್ನೂ ಓದಿ: ಉರ್ದು ಭಾಷೆಗೆ 'ರಾಮಾಯಣ'ವನ್ನು ಅನುವಾದಿಸಿದ ಹಿಂದೂ ವ್ಯಕ್ತಿ; ಇದು 14 ವರ್ಷಗಳ ಪರಿಶ್ರಮ