ನವದೆಹಲಿ: ರಾಜ್ಯ ವಿಧಾನಸಭೆಗಳು ಅನುಮೋದನೆ ನೀಡುವ ಮಸೂದೆಗಳನ್ನು ತೀರ್ಮಾನ ಮಾಡಲು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ 3 ತಿಂಗಳ ಕಾಲಮಿತಿ ಹಾಕಿದೆ. ಈ ನಿಯಮ ಪ್ರಕಾರ ಇನ್ನು ಮುಂದೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸುವ ಬಗ್ಗೆ ಮೂರು ತಿಂಗಳೊಳಗೆ ತೀರ್ಮಾನ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.
ಇದುವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟವಾದ ನಿಯಮ ಇದ್ದಿರಲಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಈ ಹೊಸ ರೂಲ್ಸ್ನಿಂದ ಮಸೂದೆಗಳು ಬೇಗ ತೀರ್ಮಾನವಾಗಲಿದೆ. ಹಾಗೇ ರಾಜ್ಯ ಸರ್ಕಾರಗಳು ಪಾಸ್ ಮಾಡುವ ಮಸೂದೆಗಳು ಪೆಂಡಿಂಗ್ ಉಳಿಯುವುದು ತಪ್ಪುತ್ತದೆ. ಸುಪ್ರೀಂ ಕೋರ್ಟ್ನ ಈ ನಿಯಮ ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ಒಂದು ದೊಡ್ಡ ಬದಲಾವಣೆ ತರಲಿದೆ.
ತಮಿಳುನಾಡು ರಾಜ್ಯಪಾಲರನ್ನು ತರಾಟೆಗೆ ತೆಗದುಕೊಂಡ ಸುಪ್ರೀಂ : ಶುಕ್ರವಾರ ಮಧ್ಯರಾತ್ರಿ ವೇಳೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಅಪ್‌ಲೋಡ್ ಮಾಡಿದೆ. ಆ ತೀರ್ಪಿನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ನವೆಂಬರ್ 2023 ರಲ್ಲಿ 10 ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದು ಕಾನೂನುಬಾಹಿರ ಮತ್ತು ತಪ್ಪಾಗಿದೆ ಎಂದು ಘೋಷಿಸಿದೆ. ಈ 10 ಮಸೂದೆಗಳನ್ನು ರಾಜ್ಯ ವಿಧಾನಸಭೆಯು ಈಗಾಗಲೇ ಮರುಪರಿಶೀಲಿಸಿ ರಾಜ್ಯಪಾಲರಿಗೆ ಮರಳಿಸಿತ್ತು.
ಈ ನಿಯಮಕ್ಕೆ ರಾಷ್ಟ್ರಪತಿಗಳೂ ಹೊರತಲ್ಲ: ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, "ಯಾವುದೇ ಮಸೂದೆಯ ಮೇಲೆ 'ಸಂಪೂರ್ಣ ವೀಟೋ' ಅಧಿಕಾರವನ್ನು ಚಲಾಯಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲವೆಂದು ಹೇಳಿದೆ. ಅದೇ ಮಾನದಂಡವು ಆರ್ಟಿಕಲ್ 201ರ ಅಡಿ ರಾಷ್ಟ್ರಪತಿಗಳಿಗೂ ಅನ್ವಯಿಸುವುದಿಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ. ರಾಷ್ಟ್ರಪತಿಗಳೂ ಈ ನಿಯಮಕ್ಕೆ ಹೊರತಲ್ಲ. ನಮ್ಮ ಸಂವಿಧಾನದಾದ್ಯಂತ ವ್ಯಾಪಿಸಿರುವ ಈ ನಿಯಮಕ್ಕೆ ರಾಷ್ಟ್ರಪತಿಗಳು ಕೂಡಾ ಹೊರತಲ್ಲ. ಇಂತಹ ಅನಿಯಂತ್ರಿತ ಅಧಿಕಾರವು ಈ ಎರಡೂ ಸಾಂವಿಧಾನಿಕ ಹುದ್ದೆಗಳಲ್ಲಿ ಉಳಿಯಲು ಸಾಧ್ಯವಿಲ್ಲ" ಎಂದು 415 ಪುಟಗಳ ತೀರ್ಪಿನಲ್ಲಿ ಪೀಠ ಸ್ಪಷ್ಟವಾಗಿ ಹೇಳಿದೆ.
ಅಗತ್ಯಬಿದ್ದರೆ ನ್ಯಾಯಾಲಯಗಳ ಪ್ರವೇಶ: ಕೋರ್ಟ್ ತನ್ನ ತೀರ್ಪಿನಲ್ಲಿ ಈ ವಿಚಾರವನ್ನು ಉಲ್ಲೇಖಿಸಿದೆ. ರಾಷ್ಟ್ರಪತಿಯವರು ಮಸೂದೆಗಳನ್ನು ಪರಿಗಣಿಸಲು ಕಾಲಮಿತಿ ಇಲ್ಲದಿದ್ದರೂ, ಅನಿರ್ದಿಷ್ಟವಾಗಿ ವಿಳಂಬ ಮಾಡುವುದನ್ನು ಸುಪ್ರೀಂ ಕೋರ್ಟ್ ಒಪ್ಪುವುದಿಲ್ಲ. ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು, ಮತ್ತು ವಿಳಂಬವಾದರೆ ಸಮಂಜಸವಾದ ಕಾರಣಗಳನ್ನು ನೀಡಬೇಕು. ಹಾಗೆಯೇ, ಅಗತ್ಯಬಿದ್ದರೆ ನ್ಯಾಯಾಲಯಗಳು ಮಧ್ಯಪ್ರವೇಶಿಸಬಲ್ಲವು ಎಂದು ಇದೇ ವೇಳೆ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಎಫ್ಐಆರ್ ಮುನ್ನ ಆರೋಪದ ವಿವರಣೆ ನೀಡುವ ಹಕ್ಕು ಸರ್ಕಾರಿ ನೌಕರರಿಗಿಲ್ಲ: ಸುಪ್ರೀಂ ಕೋರ್ಟ್