ಸೋನಿಪತ್(ಹರಿಯಾಣ): ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾಲಿ ಬ್ಯಾಗ್ ಒಳಗೆ ಬಚ್ಚಿಟ್ಟು ಬಾಲಕರ ಹಾಸ್ಟೆಲ್‌ಗೆ ರಹಸ್ಯವಾಗಿ ಕರೆದೊಯುವ ವೇಳೆ ಸಿಕ್ಕಿಬಿದ್ದಿರುವ ಘಟನೆ ಪಾಣಿಪತ್‌ನಲ್ಲಿರುವ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿದ್ಯಾರ್ಥಿ ಹಾಸ್ಟೆಲ್ ಪ್ರವೇಶದ್ವಾರದ ಮೂಲಕ ಟ್ರಾಲಿ ಬ್ಯಾಗ್ ಅನ್ನು ಒಳಗೆ ತೆಗೆದುಕೊಂಡು ಹೋಗುತ್ತಿದ್ದಾಗ, ವಸ್ತುವೊಂದಕ್ಕೆ ಸೂಟ್‌ಕೇಸ್ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಲಿ ಬ್ಯಾಗ್ ಒಳಗಿದ್ದ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿ ಯುವತಿಯ ಶಬ್ದ ಕೇಳಿ ವಿದ್ಯಾರ್ಥಿಯನ್ನು ತಡೆದಿದ್ದಾರೆ.
ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದೆ. ಅದರಲ್ಲಿ, ಭದ್ರತಾ ಸಿಬ್ಬಂದಿ ಟ್ರಾಲಿ ಬ್ಯಾಗ್ ಸುತ್ತುವರೆದಿರುವುದು ಕಂಡು ಬರುತ್ತದೆ ಮತ್ತು ಟ್ರಾಲಿ ಬ್ಯಾಗ್ನಿಂದ ಯುವತಿ ಹೊರ ಬರಲು ಯತ್ನಿಸುತ್ತಿದ್ದು, ಈ ವೇಳೆ ಮಹಿಳಾ ಭದ್ರತಾ ಸಿಬ್ಬಂದಿ ಟ್ರಾಲಿ ಬ್ಯಾಗ್ನ ಜಿಪ್ ತೆಗೆದು ಯುವತಿ ಹೊರ ಬರಲು ಅನುವು ಮಾಡಿಕೊಡುತ್ತಾರೆ. ಅಷ್ಟು ಸಣ್ಣ ಟ್ರಾಲಿ ಬ್ಯಾಗ್ನಲ್ಲಿ ಯುವತಿ ಹೇಗೆ ಕುಳಿತಿದ್ದಳು ಎಂಬುದು ಎಲ್ಲರಲ್ಲಿ ಆಚ್ಚರಿ ಮೂಡಿಸಿದೆ. ಭದ್ರತಾ ಸಿಬ್ಬಂದಿಯಿಂದ ಜೋಡಿಯ ಕಳ್ಳಾಟ ಬಯಲಿಗೆ ಬಂದಿದ್ದು, ಇಡೀ ಕ್ಯಾಂಪಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿತು.
ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮೌನ: ಈ ವಿಷಯದ ಬಗ್ಗೆ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ಆಡಳಿತವು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ವಿಶ್ವವಿದ್ಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯು ವಿಶ್ವವಿದ್ಯಾಲಯದ ಮತ್ತು ಹಾಸ್ಟೆಲ್ ನಿಯಮಗಳು ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ನಡೆದಿದ್ದ ಘಟನೆ ನೆನಪಿಸುತ್ತಿದೆ: ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು, ಈ ಘಟನೆಯು ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಇದೇ ರೀತಿಯ ಪ್ರಕರಣವನ್ನು ನೆನಪಿಸುತ್ತಿದೆ. ಅಲ್ಲಿ ವಿದ್ಯಾರ್ಥಿಯೊಬ್ಬ ಸೂಟ್‌ಕೇಸ್ ಬಳಸಿ ತನ್ನ ಗೆಳತಿಯನ್ನು ಹಾಸ್ಟೆಲ್‌ಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದ. ಆದರೆ, ಸೂಟ್‌ಕೇಸ್ ಉಬ್ಬಿದ್ದರಿಂದ ಅನುಮಾನಗೊಂಡ ಹಾಸ್ಟೆಲ್ ವಾರ್ಡನ್ ಪರಿಶೀಲಿಸಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದ ಎಂದು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮಗಳ ಜೊತೆ ಮದುವೆ ನಿಶ್ಚಯಗೊಂಡ ಭಾವಿ ಅಳಿಯನೊಂದಿಗೆ ಅತ್ತೆ ಪರಾರಿ!
ಇದನ್ನೂ ಓದಿ: ಪ್ರಿಯಕರನ ಜೊತೆ ಪತ್ನಿಯ ವಿವಾಹಕ್ಕೆ ಒಪ್ಪಿದ ಪತಿ: ಉತ್ತರಪ್ರದೇಶದಲ್ಲಿ ಎರಡನೇ ಪ್ರಕರಣ!