ನವದೆಹಲಿ: ಭಾರತ ಧರ್ಮಶಾಲೆಯಲ್ಲ ಅಥವಾ ಜಗತ್ತಿನೆಲ್ಲೆಡೆಯ ವಿದೇಶಿ ಪ್ರಜೆಗಳಿಗೆ ವಸತಿ ಕಲ್ಪಿಸುವ ಸಾರ್ವಜನಿಕ ಆಶ್ರಯ ತಾಣವೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಖಡಕ್ ಆಗಿ ಅಭಿಪ್ರಾಯಪಟ್ಟಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿ ದಾಖಲಾದ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಮುಗಿಸಿದ ನಂತರ ಶ್ರೀಲಂಕಾ ಪ್ರಜೆಯಾದ ಅರ್ಜಿದಾರನನ್ನು ದೇಶ ತೊರೆಯುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು.
"ಭಾರತ ಜಗತ್ತಿನೆಲ್ಲೆಡೆಯ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನರೊಂದಿಗೆ ಕಷ್ಟಪಡುತ್ತಿದ್ದೇವೆ. ಇದು ಪ್ರಪಂಚದ ವಿದೇಶಿ ಪ್ರಜೆಗಳಿಗೆ ಮನರಂಜನೆ ನೀಡುವ ಧರ್ಮಶಾಲೆಯಲ್ಲ" ಎಂದು ನ್ಯಾಯಪೀಠ ಹೇಳಿತು.
ಅರ್ಜಿದಾರ ಶ್ರೀಲಂಕಾ ಪ್ರಜೆಯ ಪರ ವಕೀಲರು ವಿಚಾರಣೆಯ ವೇಳೆ ವಾದಿಸಿ, ನಮ್ಮ ಕಕ್ಷಿದಾರರು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ)ನ ಮಾಜಿ ಸದಸ್ಯರು. ಹಾಗಾಗಿ ಅವರ ದೇಶದಲ್ಲಿ ಬಂಧನ ಮತ್ತು ಚಿತ್ರಹಿಂಸೆ ಭೀತಿ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಅವರ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಭಾರತದಲ್ಲಿ ನೆಲೆಸುವ ಮೂಲಭೂತ ಹಕ್ಕು ಅದರ ನಾಗರಿಕರಿಗೆ ಮಾತ್ರ ದೊರೆಯುತ್ತದೆ. ಅಷ್ಟೇ ಅಲ್ಲದೇ, ಸಂವಿಧಾನದ 21ನೇ ವಿಧಿ (ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆ) ಅಡಿಯಲ್ಲಿ ನಿಮ್ಮ ಅರ್ಜಿದಾರರ ಹಕ್ಕುಗಳು ಉಲ್ಲಂಘನೆಯಾಗಿಲ್ಲ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
"ಇಲ್ಲಿ ನೆಲೆಸಲು ನಿಮಗೆ ಏನು ಹಕ್ಕಿದೆ?. ಬೇರೆ ದೇಶಕ್ಕೆ ಹೋಗಿ" ಎಂದ ನ್ಯಾಯಪೀಠ, ನಿಮ್ಮ ಅರ್ಜಿದಾರರಿಗೆ ಯುಎಪಿಎ ಕಾಯ್ದೆಯ ಸೆಕ್ಷನ್ 10 (ಕಾನೂನುಬಾಹಿರ ಸಂಘದ ಸದಸ್ಯರಾಗಿದ್ದಕ್ಕಾಗಿ ದಂಡ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ ಎಂದು ನೆನಪಿಸಿತು.
ಮದ್ರಾಸ್ ಹೈಕೋರ್ಟ್ ದೂರುದಾರ ಮೇಲಿನ ಶಿಕ್ಷೆಯನ್ನು 10 ವರ್ಷಗಳಿಂದ ಏಳು ವರ್ಷಕ್ಕಿಳಿಸಿ, ತಕ್ಷಣವೇ ದೇಶ ಬಿಟ್ಟು ಹೋಗುವಂತೆ ನಿರ್ದೇಶಿಸಿತ್ತು.
ಮೇ 16ರಂದು, ಸುಪ್ರೀಂ ಕೋರ್ಟ್ ನ ಮತ್ತೊಂದು ಪೀಠ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 43 ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ಗಡಿಪಾರು ಮಾಡಲು ಅಂಡಮಾನ್ ಸಮುದ್ರದಲ್ಲಿ ಬಿಟ್ಟು ಬಿಡಲಾಗಿದೆ ಎಂದು ಆರೋಪಿಸಿದ್ದ ಅರ್ಜಿದಾರರೊಬ್ಬನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. "ದೇಶ ಕಠಿಣ ಪರಿಸ್ಥಿತಿಯಲ್ಲಿರುವಾಗ, ನೀವು ಕಾಲ್ಪನಿಕ ವಿಚಾರಗಳನ್ನು ಹೊತ್ತು ಇಲ್ಲಿ ಬರುತ್ತಿದ್ದೀರಿ" ಎಂದು ಗರಂ ಆಗಿತ್ತು.
ಮೇ 8ರಂದು ದೇಶದಲ್ಲಿರುವ ರೋಹಿಂಗ್ಯಾ ನಿರಾಶ್ರಿತರು ಭಾರತೀಯ ಕಾನೂನುಗಳ ಅಡಿಯಲ್ಲಿ ವಿದೇಶಿಯರೆಂದು ಕಂಡುಬಂದರೆ ಅವರನ್ನು ಗಡಿಪಾರು ಮಾಡಲೇಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ: ಹೈಕೋರ್ಟ್ನ ಎಲ್ಲ ಶ್ರೇಣಿಯ ನ್ಯಾಯಾಧೀಶರು ಪೂರ್ಣ ಪಿಂಚಣಿಗೆ ಅರ್ಹರು: ಸುಪ್ರೀಂ ಕೋರ್ಟ್ - HC JUDGES PENSION