ನವದೆಹಲಿ : ಶ್ರೀನಗರದಲ್ಲಿ ಗುರುವಾರ ತಾಪಮಾನವು 34.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುಮಾನದ ಸಾಮಾನ್ಯಕ್ಕಿಂತ ಒಂಬತ್ತು ಡಿಗ್ರಿ ಹೆಚ್ಚುವರಿಯಾಗಿದೆ ಎಂದು ಐಎಂಡಿ ದೃಢಪಡಿಸಿದೆ. ಸುಮಾರು ಅರವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.
1968 ರ ನಂತರ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನ ಇದಾಗಿದೆ. '133 ವರ್ಷಗಳ ಹಿಂದೆ ದಾಖಲೆಗಳು ಪ್ರಾರಂಭವಾದಾಗಿನಿಂದ ಮೇ ತಿಂಗಳಲ್ಲಿ ಶ್ರೀನಗರದಲ್ಲಿ ದಾಖಲಾದ ಮೂರನೇ ಅತ್ಯಧಿಕ ಗರಿಷ್ಠ ತಾಪಮಾನ ಇದು' ಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1968 ರ ಮೇ 24 ರಂದು 36.4 ° C ತಾಪಮಾನ ದಾಖಲಾಗಿದ್ದರೆ ಮತ್ತು 1956 ರ ಮೇ 31 ರಂದು 35 ° C ತಾಪಮಾನ ದಾಖಲಾಗಿತ್ತು. ಈ ಹಿಂದೆ ಮೂರನೇ ಅತಿ ಹೆಚ್ಚು ತಾಪಮಾನವಾದ 34.3°C ತಾಪಮಾನ ಮೇ 28, 1971 ರಂದು ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಇತರ ಸ್ಥಳಗಳು ಸಹ ತೀವ್ರ ತಾಪಮಾನವನ್ನು ಎದುರಿಸಿವೆ. ದಕ್ಷಿಣ ಕಾಶ್ಮೀರದ ಖಾಜಿಗುಂಡ್ 33.5 °C ತಾಪಮಾನ ದಾಖಲಿಸಿದೆ. ಇದು 1956 ರ ನಂತರದಲ್ಲಿ ದಾಖಲಾದ ಮೇ ತಿಂಗಳ ಮೂರನೇ ಹೆಚ್ಚಿನ ತಾಪಮಾನವಾಗಿದೆ. ಅನಂತ್‌ನಾಗ್ ಜಿಲ್ಲೆಯಲ್ಲೂ ಇರುವ ಕೋಕರ್‌ನಾಗ್ 33.3 °C ತಾಪಮಾನ ದಾಖಲಿಸಿದೆ. ಇದು 1978 ರಿಂದ ದಾಖಲೆಗಳು ಪ್ರಾರಂಭವಾದಾಗಿನಿಂದ ಮೇ ತಿಂಗಳಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ.
ಉತ್ತರ ಭಾರತದಾದ್ಯಂತ ಬಿಸಿ ಗಾಳಿ : ಕಾಶ್ಮೀರವು ಅಸಾಮಾನ್ಯ ಬಿಸಿ ಗಾಳಿಯಿಂದ ತತ್ತರಿಸಿದ್ದರೆ, ಉತ್ತರ ಭಾರತವು ಪ್ರಕ್ಷುಬ್ಧ ಹವಾಮಾನವನ್ನು ಕಂಡಿದ್ದು, ಗುಡುಗು ಸಹಿತ ಮಳೆ ಬಂದಿದೆ. ಹೀಗಾಗಿ, ಜನಜೀವನ ಮತ್ತು ಪ್ರಯಾಣ ಅಸ್ತವ್ಯಸ್ತವಾಗಿತ್ತು.
ಬುಧವಾರ, ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದೆಹಲಿಗೆ ತೆರಳುತ್ತಿದ್ದ ಕನಿಷ್ಠ 12 ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಯಿತು. ಜೈಪುರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
ಮಳೆ ಎಚ್ಚರಿಕೆ : ಶ್ರೀನಗರ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಗಳಿದ್ದು, ಬಿಸಿಲಿನ ಬೇಗೆಯಿಂದ ಬಿಡುವು ನಿರೀಕ್ಷಿಸಬಹುದು ಎಂದು ಐಎಂಡಿ ಹೇಳಿದೆ.
'ತಾಪಮಾನವು 26°C ಮತ್ತು 34°C ನಡುವೆ ಏರಿಳಿತಗೊಳ್ಳುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಚದುರಿದ ಮಳೆಯಾಗುವ ಸಾಧ್ಯತೆಗಳಿವೆ' ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಈ ತಿಂಗಳಲ್ಲಿ ದ್ವಿಗುಣಗೊಳ್ಳಲಿದೆ ರಣ ಬಿಸಿಲು: ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಿಗೆ ಕಾಡಲಿದೆ ತಾಪಮಾನ - DOUBLE HEATWAVE DAYS