ETV Bharat / bharat

ಹಾವು ಕಚ್ಚಿದ ತಕ್ಷಣ ಏನ್ ಮಾಡ್ಬೇಕು? 7,000ಕ್ಕೂ ಹೆಚ್ಚು ಹಾವುಗಳ ರಕ್ಷಕ ನೀಡಿದ ಅಮೂಲ್ಯ ಸಲಹೆಗಳು ಇಲ್ಲಿವೆ

ಕಳೆದ 20 ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡುತ್ತಿರುವ ರಮೇಶ್ ಕುಮಾರ್ ಮಹಾತೋ, ಇಲ್ಲಿಯವರೆಗೆ 7000ಕ್ಕೂ ಹೆಚ್ಚು ಹಾವುಗಳ ಜೀವ ಉಳಿಸಿದ್ದಾರೆ.

ಉರಗ ಪ್ರೇಮಿ ರಮೇಶ್ ಕುಮಾರ್
ಉರಗಪ್ರೇಮಿ ರಮೇಶ್ ಕುಮಾರ್ (ETV Bharat)
author img

By ETV Bharat Karnataka Team

Published : August 4, 2025 at 2:52 PM IST

|

Updated : August 4, 2025 at 2:57 PM IST

5 Min Read
Choose ETV Bharat

ರಾಂಚಿ(ಜಾರ್ಖಂಡ್): ಮಳೆಗಾಲದಲ್ಲಿ ಹಾವುಗಳು ಬಿಲಗಳಿಂದ ಹೊರಬರುವುದು ಸಹಜ. ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಅವು ಜನವಸತಿ ಪ್ರದೇಶಗಳತ್ತ ಬರುತ್ತವೆ. ತೇವಯುಕ್ತ ವಾತಾವರಣದಿಂದಾಗಿ ಬಿಲಗಳಿಂದ ಹೊರಬರುವ ಹಾವುಗಳು ಮನೆ, ಶಾಲೆ ಮತ್ತು ಆಸ್ಪತ್ರೆ, ಕಚೇರಿಯಂತಹ ಜನವಸತಿ ಪ್ರದೇಶಗಳಲ್ಲಿ ಸೇರಿಕೊಳ್ಳುತ್ತವೆ. ದೇಹದ ಉಷ್ಣತೆಯನ್ನು ಸರಿದೂಗಿಸಲು ಬೈಕ್‌ನೊಳಗೆ, ಶೂಗಳ ಒಳಗೆ ಅಡಗಿಕೊಳ್ಳುವ ಹಾವುಗಳನ್ನು ಕಂಡ ಎಷ್ಟೋ ಜನ ಭಯದಿಂದ ಅವುಗಳನ್ನು ಹೊಡೆದು ಕೊಲ್ಲುವುದುಂಟು. ಆದರೆ, ಅಂತಹ ಕೆಲಸಕ್ಕೆ ಮುಂದಾಗಬೇಡಿ ಎನ್ನುತ್ತಾರೆ ರಾಂಚಿಯ ಉರಗಪ್ರೇಮಿ ರಮೇಶ್ ಕುಮಾರ್ ಮಹಾತೋ.

ಕಳೆದ 20 ವರ್ಷಗಳಿಂದ ಹಾವುಗಳ ಬಗ್ಗೆ ಜನರಲ್ಲಿರುವ ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಹೊಡೆದೋಡಿಸುವ ಮೂಲಕ ಹಾಗೂ ಅವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಡುವ ಮೂಲಕ ಗಮನ ಸೆಳೆಯುತ್ತಿರುವ ಉರಗಪ್ರೇಮಿ ರಮೇಶ್ ಕುಮಾರ್, ಹಾವುಗಳು ಮನೆಗೇಕೆ ಬರುತ್ತವೆ, ಯಾವ ಜಾತಿಯ ಹಾವು ಎಷ್ಟು ವಿಷಕಾರಿ, ಹಾವುಗಳನ್ನು ಹಿಡಿಯುವುದು ಹೇಗೆ, ತಾವು ಹಾವುಗಳನ್ನು ಹಿಡಿಯುವ ವಿಧಾನ ಹೇಗಿರುತ್ತದೆ, ಇಲ್ಲಿಯವರೆಗೆ ಎಷ್ಟು ಹಾವುಗಳನ್ನು ಹಿಡಿಯಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಹಾವುಗಳ ರಕ್ಷಕ ರಮೇಶ್ ಕುಮಾರ್ ಮಹಾತೋ (ETV Bharat)

ವಿಷಯ ಇದಿಷ್ಟೇ ಅಲ್ಲ, ಹಾವುಗಳ ಬಗ್ಗೆ ಅವರಿಗಿರುವ ಕಾಳಜಿ ವಿಶೇಷವಾಗಿದೆ. ಹಾವು ಕಡಿತಕ್ಕೊಳಗಾದ ಅದೆಷ್ಟೋ ಜನರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಸಂಘಜೀವಿಯಾಗಿದ್ದಾರೆ. ಹಾವುಗಳನ್ನು ಹೆಚ್ಚಾಗಿ ಭಯದಿಂದ ಕೊಲ್ಲಲಾಗುತ್ತದೆ. ಹಾಗೆ ಮಾಡಬಾರದು, ಬದಲಾಗಿ ಅವುಗಳನ್ನು ಅರ್ಥಮಾಡಿಕೊಳ್ಳಬೇಕು. ಹೆಚ್ಚಿನ ಜೀವಗಳನ್ನು ಕೊಲ್ಲುವುದು ಭಯವೇ ಹೊರತು ವಿಷವಲ್ಲ ಎನ್ನುವ ರಮೇಶ್ ಕುಮಾರ್, ಇಲ್ಲಿಯವರೆಗೆ 7,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಅವುಗಳಿಗೆ ಮರುಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

SNAKE RESCUER RAMESH MAHTO
ಹಾವು (ETV Bharat)

ಯಾವ ಹಾವು ವಿಷಕಾರಿ, ಹಾವುಗಳ ವರ್ತನೆ, ಅವುಗಳ ಚಲನವಲನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ರಮೇಶ್ ಕುಮಾರ್, ಮೊದಮೊದಲು ಹಾವುಗಳ ಬಗ್ಗೆ ತಾವು ಹೊಂದಿದ್ದ ಗೊಂದಲ ಹಾಗೂ ಅನುಮಾನಗಳ ಕುರಿತು ಅವರು ವಿವರಿಸಿದರು.

SNAKE RESCUER RAMESH MAHTO
ಉರಗ ಪ್ರೇಮಿ ರಮೇಶ್ ಕುಮಾರ್ (ETV Bharat)

ಭಯವೇ ನನ್ನನ್ನು ಉರಗಪ್ರೇಮಿ ಮಾಡಿತು: 2004ರಲ್ಲಿ ಒಂದು ದಿನ ನಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಹಾವು ಕಾಣಿಸಿಕೊಂಡಿತು. ಗಾಬರಿಗೊಂಡು ಕೋಲಿನಿಂದ ಅದನ್ನು ಹೊಡೆದುಬಿಟ್ಟೆ. ಪೆಟ್ಟು ತಿಂದ ಹಾವು ಸತ್ತಿರಬಹುದೆಂದು ಭಾವಿಸಿದ್ದೆ. ಸ್ವಲ್ಪ ಸಮಯದ ನಂತರ ನೋಡಿದಾಗ ಹಾವು ಇನ್ನೂ ಜೀವಂತವಾಗಿರುವುದನ್ನು ಗಮನಿಸಿದೆ. ಅದು ಸಾವು-ಬದುಕಿನ ನಡುವೆ ಒದ್ದಾಡುತ್ತಿತ್ತು. ಜೀವದ ಉಳಿವಿಗಾಗಿ ಒದ್ದಾಡುತ್ತಿದ್ದ ದೃಶ್ಯ ನನಗೆ ಬೇಸರ ತರಿಸಿತು. ಈ ಕೃತ್ಯದಿಂದ ನಾನು ಪಾಠ ಕಲಿತೆ. ಆ ದಿನ ನನಗೆ ಮೊದಲ ಬಾರಿಗೆ ಒಂದು ಮುಗ್ಧ ಜೀವಿಯನ್ನು ಕೊಲ್ಲುವ ಪ್ರಯತ್ನ ಅಸಹ್ಯ ತರಿಸಿತು. ಅವತ್ತೇ ನಿರ್ಧಾರ ಮಾಡಿದೆ. ಭವಿಷ್ಯದಲ್ಲಿ ಯಾವತ್ತೂ ಹಾವನ್ನು ಕೊಲ್ಲುವುದಿಲ್ಲವೆಂದು ಶಪಥ ಮಾಡಿದೆ. ಅದನ್ನೇ ಜನರಿಗೆ ಹೇಳಿಕೊಂಡು ಬರುತ್ತಿದ್ದೇನೆ ಎನ್ನುತ್ತಾರೆ ರಮೇಶ್ ಕುಮಾರ್.

SNAKE RESCUER RAMESH MAHTO
ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಉರಗಪ್ರೇಮಿ ರಮೇಶ್ ಕುಮಾರ್ (ETV Bharat)

ಹಾವುಗಳ ರಕ್ಷಣೆ ಒಂದು ಸವಾಲು: ಸರಿಯಾದ ಸ್ಥಳದಲ್ಲಿ ಬಿಡುವುದಕ್ಕಿಂತ ಹಾವನ್ನು ಹಿಡಿಯುವುದು ಸವಾಲಿನ ಕೆಲಸ. ಹಾವು ಇರುವ ಬಗ್ಗೆ ನನಗೆ ಪ್ರತಿದಿನ ಸರಾಸರಿ 5-6 ಕರೆಗಳು ಬರುತ್ತವೆ. ಯಾವುದೋ ಒಂದು ಶಾಲೆಗೆ ಹಾವು ಬಂದಿದೆಯಂತೆ, ಎಲ್ಲೋ ಒಂದು ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆಯಂತೆ, ಎಲ್ಲೋ ಒಂದು ಚರಂಡಿಯಲ್ಲಿ ಹೆಬ್ಬಾವು ಅಡಗಿದೆಯಂತೆ ಎಂಬಂತಹ ಕರೆಗಳು ಬರುತ್ತವೆ. ಕರೆ ಬಂದ ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿದು ಕಾಡಿಗೆ ಬಿಡುತ್ತೇವೆ. ಆದರೆ, ಹಾವು ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ರಮೇಶ್ ಮಾತು.

SNAKE RESCUER RAMESH MAHTO
ರಕ್ಷಿಸಲ್ಪಟ್ಟ ಹಾವು (ETV Bharat)

ಜಾರ್ಖಂಡ್‌ನ ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ: ಯಾವ ಹಾವು ವಿಷಕಾರಿ ಮತ್ತು ಯಾವುದು ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಂಡರೆ, ಶೇ.80ರಷ್ಟು ಹಾವುಗಳ ಮರಣ ತಡೆದಂತೆ. ಜಾರ್ಖಂಡ್‌ನಲ್ಲಿ ಸುಮಾರು 26 ಜಾತಿಯ ಹಾವುಗಳು ಕಂಡುಬರುತ್ತವೆ. ಇವುಗಳಲ್ಲಿ ಕೇವಲ 5 ಜಾತಿಯ ಹಾವುಗಳು ಮಾತ್ರ ವಿಷಕಾರಿ. ಇಂಡಿಯನ್ ಕೋಬ್ರಾ, ಕಾಮನ್ ಕ್ರೈಟ್, ಬ್ಯಾಂಡೆಡ್ ಕ್ರೈಟ್, ರಸೆಲ್ ವೈಪರ್ (ಸರ್ಚಂಡಾ), ಪಿಟ್ ವೈಪರ್ (ಹಸಿರು, ಬಿಳಿ ತುಟಿ, ಬಿದಿರು) ಈ ಐದು ಹಾವುಗಳು ತುಂಬಾ ವಿಷಕಾರಿ. ಉಳಿದ ಹಾವುಗಳಾದ ಧಾಮಿನ್, ರೆಡ್ ಸ್ಯಾಂಡ್ ಬೋವಾ, Rat ಸ್ನೇಕ್, ಚೆಕರ್ಡ್ ಕೀಲ್‌ಬ್ಯಾಕ್ ಇತ್ಯಾದಿಗಳು ಬಹಳ ಪ್ರಯೋಜನಕಾರಿ ಮತ್ತು ವಿಷಕಾರಿಯಲ್ಲ. ಅವು ಹೊಲಗಳಲ್ಲಿ ಇಲಿ ಮತ್ತು ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಸಹಾಯ ಮಾಡುತ್ತವೆ. ಹಾಗಾಗಿ ಹಾವುಗಳ ಬಗ್ಗೆ ಅರ್ಥ ಮಾಡಿಕೊಂಡರೆ ಯಾರೂ ಕೊಲ್ಲಲಾರರು ಎಂದು ರಮೇಶ್ ಕುಮಾರ್ ಹೇಳುತ್ತಾರೆ.

SNAKE RESCUER RAMESH MAHTO
ರಮೇಶ್ ಕುಮಾರ್ ಅವರಿಂದ ಹಾವಿನ ರಕ್ಷಣೆ (ETV Bharat)

ಹಾವು ಕಚ್ಚಿದರೆ ಏನು ಮಾಡಬೇಕು? ರಮೇಶ್ ನೀಡುವ ಸಲಹೆಗಳಿವು: ದೇಶದಲ್ಲಿ ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾಯುತ್ತಾರೆ ಎಂಬ ವರದಿ ಇದೆ. ಅದರಲ್ಲಿ ಸರಾಸರಿ 1000ಕ್ಕೂ ಹೆಚ್ಚು ಸಾವುಗಳು ಜಾರ್ಖಂಡ್‌ನಲ್ಲೇ ದಾಖಲಾಗುತ್ತವೆ. ಹೆಚ್ಚಿನ ಸಾವುಗಳು ಪ್ಯಾನಿಕ್, ಮಾಟಮಂತ್ರ ಮತ್ತು ವಿಳಂಬವಾದ ಚಿಕಿತ್ಸೆಯಿಂದ ಸಂಭವಿಸುತ್ತವೆ ಎಂದು ಹೇಳುವ ರಮೇಶ್ ಕುಮಾರ್, ಹಾವು ಕಡಿತದ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಕರೆ ಮಾಡುವುದು ಅತ್ಯಂತ ಮುಖ್ಯವಾದ ಹಂತ. ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಸಹಾಯ ಪಡೆಯಬೇಕು. ಭಯ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಇದು ವಿಷವನ್ನು ವೇಗವಾಗಿ ಹರಡಲು ಕಾರಣವಾಗಬಹುದು. ಹಾಗಾಗಿ ಹಾವು ಕಡಿತಕ್ಕೊಳಗಾದ ವ್ಯಕ್ತಿ ಯಾವುದೇ ಒತ್ತಡಕ್ಕೆ ಒಳಗಾಗದೇ ಶಾಂತವಾಗಿರಬೇಕು. ಹಾವು ಕಚ್ಚಿದ ಅಂಗವನ್ನು ಚಲಿಸದಂತೆ ನೋಡಿಕೊಳ್ಳಬೇಕು. ಸಾಧ್ಯವಾದರೆ, ಕಚ್ಚಿದ ಪ್ರದೇಶವನ್ನು ಮೇಲಕ್ಕೆತ್ತಿ. ಹಾವಿನ ಚಿತ್ರವನ್ನು ತೆಗೆದುಕೊಳ್ಳಿ. ಆದರೆ, ಅದನ್ನು ಹಿಡಿಯಲು ಪ್ರಯತ್ನಿಸಬೇಡಿ. ಕಚ್ಚಿದ ಜಾಗವನ್ನು ಬ್ಲೇಡ್​ನಿಂದ ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರುವುದೆಲ್ಲ ಮಾಡಬೇಡಿ. ಮಾಟಮಂತ್ರ ಹಾಗೂ ವಿಳಂಬ ಮಾಡದೇ ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ. ವೈದ್ಯರ ಹೇಳಿದ ನೀಡಿದ ಚಿಕಿತ್ಸೆ ಪಡೆಯಿರಿ ಎಂಬುದು ರಮೇಶ್ ನೀಡುವ ಸಲಹೆ.

SNAKE RESCUER RAMESH MAHTO
ರಮೇಶ್ ಕುಮಾರ್ ಅವರಿಂದ ಹಾವಿನ ರಕ್ಷಣೆ (ETV Bharat)

ತರಬೇತಿ ಮತ್ತು ಸಂರಕ್ಷಣೆಯ ಅಗತ್ಯ: ಹಾವುಗಳ ವರ್ತನೆ ಮತ್ತು ಅವುಗಳ ಚಲನವಲನ ಬಗ್ಗೆ ಅರ್ಥೈಸಿಕೊಂಡಿದ್ದರಿಂದ ಸದ್ಯ ನಾನು ಯುವಕರಿಗೆ ತರಬೇತಿ ನೀಡುತ್ತಿದ್ದೇನೆ. ಶಾಲಾ, ಕಾಲೇಜು ಮತ್ತು ಪಂಚಾಯತ್ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದೇನೆ. ಇದರಲ್ಲಿ ಹಾವುಗಳ ಗುರುತಿಸುವಿಕೆ, ಅವುಗಳ ಪಾತ್ರ ಮತ್ತು ರಕ್ಷಣೆಯ ಬಗ್ಗೆ ಮೂಲಭೂತ ಮಾಹಿತಿಯನ್ನು ನೀಡಲಾಗುತ್ತದೆ. ಅರಣ್ಯ ಇಲಾಖೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಸಲಹೆಗಾರರಾಗಿಯೂ ಕೆಲಸ ಮಾಡುತ್ತೇನೆ. ಇದರ ಜೊತೆಗೆ, ಅವರು ದಕ್ಷಿಣ ಭಾರತದ ಅನೇಕ ನಗರಗಳಿಗೆ ಕಾಲಕಾಲಕ್ಕೆ ಭೇಟಿ ನೀಡುವ ಮೂಲಕ ಹೆಚ್ಚುವರಿ ತರಬೇತಿಯನ್ನೂ ಸಹ ಪಡೆಯುತ್ತಿರುವೆ. ಪ್ರತಿ ಹಳ್ಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಉರಗಪ್ರೇಮಿ ಇರಬೇಕು ಎಂಬುದು ನನ್ನ ಕನಸು ಎಂದು ರಮೇಶ್ ಹೇಳಿದ್ದಾರೆ.

SNAKE RESCUER RAMESH MAHTO
ಹಾವಿನ ರಕ್ಷಣೆ (ETV Bharat)

ಕಾನೂನು ಮತ್ತು ಪರಿಸರದ ಮಹತ್ವ ಅರಿಯಿರಿ: ಹಾವುಗಳನ್ನು ಕೊಲ್ಲುವುದು ಕಾನೂನುಬಾಹಿರ. ಭಾರತದಲ್ಲಿ ಈ ಅಪರಾಧವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಬರುತ್ತದೆ. ಸಿಕ್ಕಿಬಿದ್ದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಾವುಗಳು ಪ್ರಮುಖ ಪಾತ್ರವಹಿಸುತ್ತವೆ. ಅನೇಕ ರೀತಿಯ ಔಷಧಿಗಳು ಮತ್ತು ಲಸಿಕೆಗಳನ್ನು ಅವುಗಳ ವಿಷದಿಂದ ತಯಾರಿಸಲಾಗುತ್ತದೆ. ಇದಲ್ಲದೆ, ಅವು ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಬೆಳೆಗಳನ್ನು ರಕ್ಷಿಸುತ್ತವೆ. ಹಾಗಾಗಿ ಹಾವುಗಳನ್ನು ಕೊಲ್ಲಬೇಡಿ ಎನ್ನುವ ರಮೇಶ್, ಭಯದಿಂದ ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಮಳೆಗಾಲದಲ್ಲಿ ಸುತ್ತಲೂ ಹಸಿರು ತುಂಬಿರುವಾಗ, ಕೆಲವು ಸಿಳ್ಳೆ ಹಾವುಗಳು ಜನರನ್ನು ಹೆದರಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಭಯಕ್ಕಿಂತ ತಿಳುವಳಿಕೆ ಮತ್ತು ಸೂಕ್ಷ್ಮತೆ ಮುಖ್ಯ. ಹಾವನ್ನು ನೋಡಿದ ತಕ್ಷಣ ಕೋಲು ಎತ್ತುವ ಬದಲು ಉರಗ ಪ್ರೇಮಿಯನ್ನು ಸಂಪರ್ಕಿಸಿ. ಬಹುಶಃ ಒಂದು ಜೀವವನ್ನು ಉಳಿಸಬಹುದು, ಅದು ಮನುಷ್ಯನಾಗಿರಬಹುದು ಅಥವಾ ಹಾವಾಗಿರಬಹುದು. ಹಾಗಾಗಿ ಇದನ್ನು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

SNAKE RESCUER RAMESH MAHTOhttps://imgs.etvbharat.com/etvbharat/prod-images/04-08-2025/jh-ran-01-spsl-pkz-7212717_01082025125620_0108f_1754033180_787.jpg
ಹಾವಿನೊಂದಿಗೆ ರಮೇಶ್ ಕುಮಾರ್ (ETV Bharat)

ಇದನ್ನೂ ಓದಿ:

Last Updated : August 4, 2025 at 2:57 PM IST