ಖಮ್ಮಂ (ತೆಲಂಗಾಣ): ಓದಿಗೆ ವಯಸ್ಸಿನ ಮಿತಿ ಇಲ್ಲ. ಅದು ಜೀವನ ಪರ್ಯಂತ ಕಲಿಯುವ ಜ್ಞಾನ. ಓದಿಗೆ ಬಹುಮುಖ್ಯವಾಗಿ ಬೇಕಾಗಿರುವುದು ಆಸಕ್ತಿ, ಶ್ರದ್ಧೆ, ಕಠಿಣ ಶ್ರಮ. ಅದನ್ನೇ ಮಂತ್ರವಾಗಿಸಿಕೊಂಡ ವಿ ಸತ್ಯನಾರಾಯಣ 70ರ ಇಳಿವಯಸ್ಸಿನಲ್ಲಿಯೂ ಇಂಟರ್ಮೀಡಿಯೇಟ್ ಪರೀಕ್ಷೆ ಬರೆದಿದ್ದಾರೆ.
ವಯಸ್ಸು ಎಂಬುದು ಬರೀ ಸಂಖ್ಯೆಯಷ್ಟೇ. ಕಲಿಕೆಗೆ ವಯಸ್ಸೆಂಬುದಿಲ್ಲ ಎನ್ನುತ್ತಾ ಉರಿ ಬಿಸಿಲಿನಲ್ಲೂ ಬತ್ತದ ಉತ್ಸಾಹದಲ್ಲಿ ಹದಿ ಹರೆಯದವರು ನಾಚುವಂತೆ ಸತ್ಯನಾರಾಯಣ, ತೆಲಂಗಾಣದ ಸಾರ್ವತ್ರಿಕ ವಿದ್ಯಾಪೀಠ ನಡೆಸಿದ ಇಂಟರ್ ಮೀಡಿಯೇಡೆಟ್ ಪರೀಕ್ಷೆಗಾಗಿ ರಿಕ್ಕಾಬಜಾರ್ ಸರ್ಕಾರಿ ಪ್ರೌಢಶಾಲೆಗೆ ಪರೀಕ್ಷಾ ಪ್ಯಾಡ್ಹಿಡಿದು ಬಂದು ಗಮನ ಸೆಳೆದರು.
ನಿವೃತ್ತ ಶಿಕ್ಷಣ ಅಧಿಕಾರಿಯಾಗಿರುವ 70 ವರ್ಷದ ಸತ್ಯನಾರಾಯಣ, 1977-78ರಲ್ಲಿ ಶಿಕ್ಷಕರ ತರಬೇತಿ ಪೂರ್ಣಗೊಳಿಸಿದ್ದು, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ವೇಳೆಗೆ ಅನೇಕ ಪದವಿಗಳನ್ನು ಪಡೆದರು. ಗಣಿತ, ಅರ್ಥಶಾಸ್ತ್ರದಲ್ಲಿ ಬಿಎಯನ್ನು ಪಡೆದಿದ್ದಾರೆ. ಬಳಿಕ ಗಣಿತದಲ್ಲಿ ಬಿಎಡ್, ಎಂಎಸ್ಸಿ ಮತ್ತು ಎಂಎಡ್ ಪದವಿಯನ್ನೂ ಗಳಿಸಿದ್ದಾರೆ. 2013ರಲ್ಲಿ ಮಂಡಲ್ ಶಿಕ್ಷಣ ಅಧಿಕಾರಿಯಾಗಿ ನಿವೃತ್ತರಾದ ಇವರು, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದೀಗ ಇವರಿಗೆ ಇವರ ಕನಸು ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ಗೆ ಅರ್ಹತೆ ಪಡೆಯುವುದಾಗಿದೆ. ನೀಟ್ ಪರೀಕ್ಷೆಗೆ ಹಾಜರಾಗಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಈ ಹಿನ್ನೆಲೆ ಅವರು ಪರೀಕ್ಷೆಗೆ ತಯಾರಿ ನಡೆಸಿದ್ದು, ಇದರ ಅರ್ಹತೆ ಪಡೆಯುವ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ. ಕುಟುಂಬಸ್ಥರು ಮತ್ತು ಮಾಜಿ ವಿದ್ಯಾರ್ಥಿಗಳ ಪ್ರೋತ್ಸಾಹದಿಂದಾಗಿ ಇದೀಗ ಇಂಟರ್ಮಿಡಿಯೇಟ್ಗೆ ಸೇರಿದ್ದಾರೆ. ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಈ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ನಾನು ಈ ಪರೀಕ್ಷೆಯನ್ನು ಎದುರಿಸುತ್ತಿದ್ದೇನೆ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮಾಯಣದ 135 ಪ್ರಶ್ನೆಗಳಿಗೆ ಉತ್ತರ ಹೇಳುವ 28 ತಿಂಗಳ ಪುಟ್ಟ ಪೋರ!; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಟ ಸೇರಿದ ಪುಟಾಣಿ!
ಇದನ್ನೂ ಓದಿ: ತೃಪ್ತಿ ನೀಡದ ₹1 ಕೋಟಿ ಸಂಬಳದ ಅಮೆರಿಕ ಕೆಲಸ: UPSC ಪರೀಕ್ಷೆ ಬರೆದು 467ನೇ ರ‍್ಯಾಂಕ್ ಪಡೆದ ಯುವತಿ!