ಹೈದರಾಬಾದ್: ತೆಲಂಗಾಣದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿಯಾದ ಬೆನ್ನಲ್ಲೇ, ಉದ್ಯೋಗ ಭರ್ತಿಯ ಸಿದ್ಧತೆ ನಡೆಯುತ್ತಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 20 ಸಾವಿರ ಹುದ್ದೆಗಳಿಗೆ ನೇಮಕಾತಿ ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಟಿಜಿಪಿಎಸ್‌ಸಿ, ಗುರುಕುಲ, ಪೊಲೀಸ್ ಮತ್ತು ವೈದ್ಯಕೀಯ ನೇಮಕಾತಿ ಸಂಸ್ಥೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ತಿಂಗಳ ಅಂತ್ಯದ ವೇಳೆಗೆ ನೇಮಕಾತಿ ಪ್ರಕಟಣೆ ಹೊರಡಿಸಲು ಸರ್ಕಾರ ಯೋಜಿಸಿದೆ.
ವಾರ್ಷಿಕ ಉದ್ಯೋಗ ಕ್ಯಾಲೆಂಡರ್: ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ವಾರ್ಷಿಕ ಕ್ಯಾಲೆಂಡರ್ (ಉದ್ಯೋಗ ಕ್ಯಾಲೆಂಡರ್) ಘೋಷಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, 2024-25ನೇ ಸಾಲಿನ ಉದ್ಯೋಗ ಕ್ಯಾಲೆಂಡರ್ ಅನ್ನು ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್ ಎಸ್‌ಸಿ ಒಳಮೀಸಲಾತಿ ಪರವಾಗಿ ತೀರ್ಪು ನೀಡಿದ ನಂತರ, ಅದರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.
ಇದರಿಂದಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಉದ್ಯೋಗ ನೇಮಕಾತಿಗಳು ಸ್ಥಗಿತಗೊಂಡಿದ್ದವು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಎಸ್‌ಸಿ ಒಳಮೀಸಲಾತಿಯು ಏಪ್ರಿಲ್ 14ರಿಂದ ಜಾರಿಗೆ ಬಂದಿದೆ. ಮೀಸಲಾತಿ ಪ್ರಕ್ರಿಯೆ ಬಗೆಹರಿದ ಹಿನ್ನೆಲೆ ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಖಾಲಿ ಹುದ್ದೆಗಳನ್ನು ಗುರುತಿಸಲಿದ್ದಾರೆ.
ಕನಿಷ್ಠ 20 ಸಾವಿರ ಹುದ್ದೆಗಳ ಭರ್ತಿ ಸಾಧ್ಯತೆ: ಸರ್ಕಾರ ಕನಿಷ್ಠ 20 ಸಾವಿರ ಹುದ್ದೆಗಳ ಭರ್ತಿ ಗುರಿ ಹೊಂದಿದೆ. ಆರ್‌ಟಿಸಿ ಮತ್ತು ವೈದ್ಯಕೀಯ ಇಲಾಖೆಗಳಲ್ಲಿ ಸುಮಾರು 10,000 ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ತಂತ್ರಜ್ಞರು, ಸ್ಟಾಫ್ ನರ್ಸ್‌ಗಳು ಮತ್ತು ಫಾರ್ಮಾಸಿಸ್ಟ್‌ಗಳು ಸೇರಿದಂತೆ ಸುಮಾರು 5 ಸಾವಿರ ಹುದ್ದೆಗಳು ಖಾಲಿ ಇವೆ. ಎಂಜಿನಿಯರಿಂಗ್ ವಿಭಾಗಗಳಲ್ಲಿ 2-3 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ SC ಒಳ ಮೀಸಲಾತಿ ಜಾರಿ: ಈ ನಿರ್ಣಯ ಕೈಗೊಂಡ ದೇಶದ ಮೊದಲ ರಾಜ್ಯ