ETV Bharat / bharat

ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ: ಮಹತ್ವದ ಭರವಸೆ ಘೋಷಿಸಿದ ಆರ್​ಜೆಡಿ

ಬಿಹಾರ ವಿಧಾನಸಭೆ ಚುನಾವಣೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಜನರಿಗೆ ಭರವಸೆಗಳನ್ನು ಘೋಷಿಸಲು ಆರಂಭಿಸಿವೆ. ವಿಪಕ್ಷ ಆರ್​ಜೆಡಿ ಮಹತ್ವದ ಆಶ್ವಾಸನೆಯೊಂದನ್ನು ಇಂದು ಪ್ರಕಟಿಸಿತು.

TEJASHWI YADAV
ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ (ETV Bharat)
author img

By ETV Bharat Karnataka Team

Published : October 9, 2025 at 4:26 PM IST

2 Min Read
Choose ETV Bharat

ಪಾಟ್ನಾ(ಬಿಹಾರ): ರಾಜ್ಯದ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಭರಪೂರ ಭರವಸೆಗಳನ್ನು ಘೋಷಿಸುತ್ತಿವೆ. ಪ್ರಮುಖ ವಿಪಕ್ಷ ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಮಹತ್ವದ ಭರವಸೆ ಪ್ರಕಟಿಸಿದೆ. 'ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯಲ್ಲಿ ಓರ್ವ ಸದಸ್ಯ ಸರ್ಕಾರಿ ಉದ್ಯೋಗ ಹೊಂದುವಂತೆ ಕಾನೂನು ಜಾರಿಗೆ ತರಲಾಗುವುದು' ಎಂದಿದೆ.

ಇಂಥದ್ದೊಂದು ಮಹತ್ವದ ಆಶ್ವಾಸನೆ ನೀಡಿದ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್, "ತಮ್ಮ ಪಕ್ಷದ ನೇತೃತ್ವದ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿ ಕುಟುಂಬದಲ್ಲಿ ಸರ್ಕಾರಿ ಉದ್ಯೋಗಿ ಇರುವಂತೆ ನೋಡಿಕೊಳ್ಳಲಾಗುವುದು" ಎಂದರು.

"ಎನ್‌ಡಿಎ ಸರ್ಕಾರ ಕಳೆದ 20 ವರ್ಷಗಳಲ್ಲಿ ಯುವಕರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ನಾವು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಇಂಥದ್ದೊಂದು ಕಾಯ್ದೆ ತರುತ್ತೇವೆ. ಅದನ್ನು 20 ತಿಂಗಳಲ್ಲಿ ಅನುಷ್ಠಾನಗೊಳಿಸುತ್ತೇವೆ" ಎಂದು ಮಾಜಿ ಉಪಮುಖ್ಯಮಂತ್ರಿ ಪ್ರಕಟಿಸಿದರು.

"ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದ್ದೆವು. ನಾನು ಡಿಸಿಎಂ ಆಗಿದ್ದ ಅಲ್ಪಾವಧಿಯಲ್ಲಿ 5 ಲಕ್ಷ ಉದ್ಯೋಗಗಳನ್ನು ಒದಗಿಸಿದ್ದೇನೆ. ಐದು ವರ್ಷಗಳ ಅಧಿಕಾರವಧಿ ಸಿಕ್ಕರೆ ಏನಾಗಬಹುದು ಎಂದು ನೀವೇ ಊಹಿಸಿ" ಎಂದು ಹೇಳಿದರು.

ನಿತೀಶ್​​ರದ್ದು ನಕಲು ಸರ್ಕಾರ: ವಿಪಕ್ಷಗಳ ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ಎಂದು ಈ ಹಿಂದೆ ಹೇಳಿಕೊಂಡಿದ್ದ ತೇಜಸ್ವಿ ಯಾದವ್​, "ಸಿಎಂ ನಿತೀಶ್​​ ಕುಮಾರ್​ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈಗಿನ ಎನ್​ಡಿಎ ಸರ್ಕಾರ 'ನಕಲು ಸರ್ಕಾರ'ವಾಗಿದೆ. ಆರ್​ಜೆಡಿಯ ಭರವಸೆಗಳನ್ನೇ ಅದು ನಕಲು ಮಾಡುತ್ತಿದೆ. ಇದನ್ನು ನೀವು (ಜನರು) ನಂಬಬಾರದು" ಎಂದು ಮನವಿ ಮಾಡಿದರು.

ಇತ್ತೀಚೆಗೆ, ಸರ್ಕಾರವು ಗ್ರಾಹಕರಿಗೆ ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಮನ್ನಾ, ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ, ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ನಗದು ವರ್ಗಾವಣೆಯಂತಹ ಭರಪೂರ ಘೋಷಣೆಗಳನ್ನು ವಿಪಕ್ಷ ನಾಯಕ ಟೀಕಿಸಿದರು.

"ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಪರಿಚಯಿಸಲಾದ ಈ ಯೋಜನೆಯನ್ನು ಚುನಾವಣೆಗೆ ಮುನ್ನ ನೀಡುತ್ತಿರುವ ಲಂಚ" ಎಂದು ಆರೋಪಿಸಿದರು.

ಸಿಎಂ ಮತ್ತು ಸೀಟು ಹಂಚಿಕೆ ಪ್ರಗತಿಯಲ್ಲಿದೆ: "ಇದೇ ವೇಳೆ, ಇಂಡಿಯಾ ಕೂಟದಲ್ಲಿನ ವಿಪಕ್ಷಗಳ ನಡುವಿನ ಸೀಟುಗಳು ಮತ್ತು ಸಿಎಂ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ" ಎಂದಷ್ಟೇ ಹೇಳಿದರು.

ಸಿಎಂ ಅಭ್ಯರ್ಥಿ ಮತ್ತು ಸೀಟು ಹಂಚಿಕೆ ಕುರಿತು ತೇಜಸ್ವಿ ಯಾದವ್​​ ಅವರ ಮನೆಯಲ್ಲಿ ಕಾಂಗ್ರೆಸ್​ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದ್ದು, ಸೀಟು ಹಂಚಿಕೆಯ ಸೂತ್ರ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇವುಗಳನ್ನೂ ಓದಿ: ಬಿಹಾರ ಎಲೆಕ್ಷನ್: 25 ವರ್ಷದ ಗಾಯಕಿ ಮೈಥಿಲಿ ಠಾಕೂರ್​ ಬಿಜೆಪಿಯಿಂದ ಕಣಕ್ಕೆ

ಎರಡು ಹಂತಗಳಲ್ಲಿ ಬಿಹಾರ ಎಲೆಕ್ಷನ್: ನ.6, 11ರಂದು ಮತದಾನ, ನ.14ರಂದು ಫಲಿತಾಂಶ