ಹರಿಯಾಣ: ಒಂಬತ್ತನೇ ವಯಸ್ಸಿನಲ್ಲಿ ಕಾಣೆಯಾಗಿದ್ದ ಹುಡುಗನೊಬ್ಬ ಗೂಗಲ್ ಮ್ಯಾಪ್ ಸಹಾಯದಿಂದ 38ನೇ ವಯಸ್ಸಿನಲ್ಲಿ ತನ್ನ ಮನೆಯನ್ನು ಸೇರಿಕೊಂಡಿದ್ದಾನೆ. ಸಂಜಯ್ 29 ವರ್ಷಗಳ ಬಳಿಕ ಮನೆ ಸೇರಿದ ಮಗ. ಈ ಘಟನೆ ನಡೆದಿರುವುದು ಹರಿಯಾಣದ ಅಂಬಾಲದಲ್ಲಿ.
9ನೇ ವಯಸ್ಸಿನಲ್ಲಿ ಕಾಣೆಯಾಗಿದ್ದ ಮಗ ಸಂಜಯ್ ಮತ್ತೆ ಪವಾಡ ಸದೃಶ ರೀತಿಯಲ್ಲಿ ಮನೆಗೆ ಮರಳಿದ್ದನ್ನು ಕಂಡ ಪೋಷಕರು, ಆತನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು. 29 ವರ್ಷಗಳ ಬಳಿಕ ಸಂಜಯ್ ತನ್ನ ಮನೆ ಸೇರಲು ಸಹಾಯವಾಗಿದ್ದು, ಗೂಗಲ್ ಮ್ಯಾಪ್ ಅನ್ನೋದು ವಿಶೇಷ.
1996ರಲ್ಲಿ ಕಾಣೆ: ಅಂಬಾಲಾ ಕ್ಯಾಂಟ್‌ನ ಕಬೀರ್ ನಗರದ ಸಂಜಯ್ 1996ರಲ್ಲಿ ಆಕಸ್ಮಿಕವಾಗಿ ಕಾಣೆಯಾದ್ದ. ಆಗ ಈತನಿಗೆ ಕೇವಲ 9 ವರ್ಷ. ಕಾಣೆಯಾಗಿ 29 ವರ್ಷಗಳ ನಂತರ ಸಂಜಯ್ ಮನೆಗೆ ಮರಳಿದ್ದು, ಪೋಷಕರಿಗೆ ಆಶ್ಚರ್ಯ ತರಿಸಿದೆ.
ಗೂಗಲ್ ಮ್ಯಾಪ್ ಸಹಾಯದಿಂದ ಹೇಗೋ ಮನೆ ಸೇರಿದ ಸಂಜಯ್‌ನನ್ನು ಆರಂಭದಲ್ಲಿ ನಮಗೆ ಗುರುತಿಸಲು ಆಗಲೇ ಇಲ್ಲ. ತನ್ನ ಬಾಲ್ಯದ ಕಥೆಗಳನ್ನು ಹೇಳಬೇಕಾಯಿತು. ಆಡಿದ ಆಟ, ಓಡಾಡಿದ ಜಾಗ, ಸ್ನೇಹಿತರ ಹೆಸರು ಸೇರಿದಂತೆ ಹಲವು ಬಾಲ್ಯದ ಕಥೆಗಳನ್ನು ಹಂಚಿಕೊಂಡಾಗ, ಈತನೇ ತಮ್ಮ ಮಗ ಅಂತ ನಮಗೆ ನಂಬಿಕೆ ಬಂತು. ಬಾಲಕನಿದ್ದಾಗ ಕಳೆದುಹೋಗಿದ್ದ ಮಗ ಎದೆ ಎತ್ತರಕ್ಕೆ ಬೆಳೆದಿದ್ದಾನೆ. ಆತ ನಾಪತ್ತೆಯಾದಾಗ ಆತನಿಗೆ ಕೇವಲ 9 ವರ್ಷ. ಇದೀಗ ಹಾಗೂ ಹೀಗೂ ಮನೆಗೆ ಬಂದಿದ್ದು ಪವಾಡವಲ್ಲದೇ ಮತ್ತೇನು ಅಲ್ಲ ಎನ್ನುತ್ತಾರೆ ಸಂಜಯ್ ಫೋಷಕರು.

ಕಳೆದುಕೊಂಡಿದ್ದು ಹೇಗೆ: ಸಂಜಯ್ ತನ್ನ 9ನೇ ವಯಸ್ಸಿನಲ್ಲಿದ್ದಾಗ ದೇವಸ್ಥಾನಕ್ಕೆ ತೆರಳಲೆಂದು ಮನೆಯಿಂದ ಹೊರಟಿದ್ದ. ಅಲ್ಲಿಂದ ಆಟವಾಡುತ್ತಾ ತರಕಾರಿ ಮಾರುಕಟ್ಟೆಯನ್ನು ತಲುಪಿದ್ದ ಸಂಜಯ್, ನಂತರ ಅಲ್ಲಿಂದ ಅಂಬಾಲಾ ಕ್ಯಾಂಟ್ ರೈಲ್ವೆ ನಿಲ್ದಾಣಕ್ಕೆ ಹೋಗಿ ತನಗೆ ಗೊತ್ತಿಲ್ಲದಂತೆ ರೈಲು ಹತ್ತಿದ್ದ. ಆದರೆ, ರೈಲಿನಲ್ಲಿ ನಿದ್ರೆಗೆ ಜಾರಿದ್ದ ಸಂಜಯ್, ಎಚ್ಚರವಾದಾಗ ತಾನು ಎಲ್ಲಿದ್ದೇನೆ ಎಂಬುವುದೇ ಗೊತ್ತಾಗಲಿಲ್ಲ. ಉತ್ತರ ಪ್ರದೇಶದ ಆಗ್ರಾದಲ್ಲಿ ರೈಲಿನಿಂದ ಇಳಿಯುತ್ತಿದ್ದಂತೆ ಭಯದಲ್ಲಿ ತಮ್ಮ ಮನೆಯ ವಿಳಾಸವನ್ನೇ ಮರೆತಿದ್ದ. ನೆನಪು ಮಾಡಿಕೊಂಡರೂ ಹೇಳಲಾಗದೇ ಅಳುತ್ತಿದ್ದ. ಹುಡುಗನ ಸಮಸ್ಯೆ ಅರಿತ ಆಗ್ರಾದಲ್ಲಿರುವ ಢಾಬಾ ಮಾಲೀಕರೊಬ್ಬರು ಈತನನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು.
ಢಾಬಾ ಮಾಲೀಕರೊಂದಿಗೆ ವಾಸ: ಅಂಬಾಲದಿಂದ ಆಗ್ರಾ 426 ಕಿ.ಮೀ ದೂರ. ಅದೇಗೋ ಆಕಸ್ಮಿಕವಾಗಿ ರೈಲು ಹತ್ತಿ ಆಗ್ರಾ ತಲುಪಿದ ಸಂಜಯ್, ಇಲ್ಲಿಯ ಢಾಬಾ ಮಾಲೀಕರಾದ ಇಂದ್ರಜಿತ್ ಮತ್ತು ಇವರ ಪತ್ನಿ ಗೀತಾ ಬಳಿಕ ಉಳಿದುಕೊಂಡಿದ್ದನು. ಆರಂಭದಲ್ಲಿ ಮಕ್ಕಳಿಲ್ಲದ ಇಂದ್ರಜಿತ್ ದಂಪತಿ, ಅಳುತ್ತಿದ್ದ ಈ ಹುಡುಗನನ್ನು ತಮ್ಮ ಮಗನಂತೆ ನೋಡಿಕೊಳ್ಳಲು ಆರಂಭಿಸಿದರು. ಬಳಿಕ ದಂಪತಿಗೆ ಮೂವರು ಮಕ್ಕಳಾಗಿದ್ದು, ಅವರೊಂದಿಗೆ ಆಟ ಆಡುತ್ತಲೇ ಸಂಜಯ್ ತನ್ನ ಬಾಲ್ಯ ಕಳೆದಿದ್ದಾನೆ. ಕಾರಣಾಂತದಿಂದ ಇಂದ್ರಜಿತ್ ದಂಪತಿ 2002ರಲ್ಲಿ ತಮ್ಮ ಢಾಬಾವನ್ನು ಮೀರತ್‌ಗೆ ಸ್ಥಳಾಂತರ ಮಾಡಿದರು. ಕೆಲವು ದಿನಗಳ ಬಳಿಕ ಅಲ್ಲಿಂದ 2004ರಲ್ಲಿ ಋಷಿಕೇಶಕ್ಕೆ ಸ್ಥಳಾಂತರಗೊಂಡರು. ಈ ನಡುವೆ ಒಂದು ದಿನ ಸಂಜಯ್ಗೆ ತನ್ನ ಕುಟುಂಬದ ಬಗ್ಗೆ ಗೊತ್ತಾಗಿ ಹುಡುಕಲು ಮುಂದಾದ. ತೊಳಲಾಟದ ಮಧ್ಯೆ ರಾಧಿಕಾ ಎಂಬ ಯುವತಿಯ ಪರಿಚಯವಾಗಿ 2009 ರಲ್ಲಿ ಮದುವೆ ಕೂಡಾ ಆದ. ವಿವಾಹವಾದ ಬಳಿಕ ಮೂರು ಮಕ್ಕಳ ತಂದೆಯಾದ ಸಂಜಯ್ ಕುಟುಂಬದಲ್ಲಿ ಒಂದು ದಿನ ತಿರುವು ಪಡೆಯಿತು.
ಗೂಗಲ್‌ನಲ್ಲಿ ಹುಡುಕಲು ಪ್ರಾರಂಭ: ಒಂದು ದಿನ ಸಂಜಯ್ಗೆ ತನ್ನ ಮನೆಯ ಹತ್ತಿರ ಒಂದು ಪೊಲೀಸ್ ಠಾಣೆ ಇರುವ ಬಗ್ಗೆ ಹಾಗೂ ಅದರ ಮುಂದೆ ಒಂದು ದರ್ಗಾ ಇದೆ ಎಂದು ನೆನಪಾಯಿತು. ಅದರ ಬಗ್ಗೆ ಗೂಗಲ್‌ನಲ್ಲಿ ಹುಡುಕಲು ಪ್ರಾರಂಭಿಸಿದ. ಅದರಂತೆ ಗೂಗಲ್‌ನಲ್ಲಿ ಮಹೇಶ್ವರ ನಗರ ಪೊಲೀಸ್ ಠಾಣೆ ಬಳಿ ಅಂಬಾಲ ಇರುವ ಸ್ಥಳ ಸಿಕ್ಕಿತು. ಅದೇ ಗೂಗಲ್ ಮ್ಯಾಪ್ ಮೂಲಕ ಅಂಬಾಲಾದಲ್ಲಿರುವ ದರ್ಗಾ ತಲುಪಿದ. ಹೀಗೆ ಚಿಕ್ಕ ವಯಸ್ಸಿನಲ್ಲಿ ಓಡಾಡುತ್ತಿದ್ದ ಜಾಗವನ್ನು ನೆನಪು ಮಾಡಿಕೊಳ್ಳುತ್ತಾ ತನ್ನ ಕುಟುಂಬವನ್ನು ಹುಡುಕುತ್ತಿರುವಾಗ ತನ್ನ ಮನೆಯ ಬೀದಿಯನ್ನು ತಲುಪಿದ. ಹಾಗೂ - ಹೀಗೂ ಮನೆ ಹುಡುಕಿ ಒಳ ಪ್ರವೇಶ ಮಾಡುತ್ತಿದ್ದಂತೆ ಸಂಜಯ್ಗೆ ಇದುವೇ ತನ್ನ ಮನೆ ಅಂತ ಗೊತ್ತಾಗಿ ಹೋಗಿತ್ತು.

ಆರಂಭದಲ್ಲಿ ನಂಬದ ಫೋಷಕರು: ಹೀಗೆ ಅನುಮಾನದಿಂದ ಸಂಜಯ್ ಯಾರನ್ನೋ ವಿಚಾರಿಸುತ್ತಿದ್ದಾಗ ವೀಣಾ ಎಂಬ ಮಹಿಳೆ ಈತನನ್ನು ಕರೆದು ಕೇಳಿದ್ದು, ತಾನು ಚಿಕ್ಕವನಿದ್ದಾಗ ಕಳೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾನೆ. ಬಳಿಕ ತಂದೆ -ತಾಯಿ ಬಗ್ಗೆ ಕೇಳಿದಾಗ, ತನ್ನ ತಂದೆಯ ಹೆಸರು ಕರಮ್ ಪಾಲ್ ಮತ್ತು ತಾಯಿಯ ಹೆಸರು ವೀಣಾ ಎಂದು ಹೇಳಿದ್ದಾನೆ. ಇದನ್ನು ಕೇಳುತ್ತಿದ್ದ ವೀಣಾ, ಒಂದು ಕ್ಷಣ ಅಚ್ಚರಿಗೊಳಗಾದರೂ ಈತನೇ ತನ್ನ ಮಗ ಅಂತ ಗೊತ್ತಾದರೂ ಆರಂಭದಲ್ಲಿ ನಂಬಿರಲಿಲ್ಲ. ಅಂದು ಮೊಬೈಲ್ ಸಂಖ್ಯೆಯನ್ನು ಪಡೆದ ಸಂಜಯ್, ಅಲ್ಲಿಂದ ಹೊರಟು ಹೋಗಿದ್ದನು. ಕೆಲವು ದಿನಗಳ ಬಳಿಕ ಮತ್ತೆ ಬಂದ ಸಂಜಯ್ ತನ್ನ ಬಾಲ್ಯದ ಬಗ್ಗೆ ಹೇಳಿಕೊಂಡಾಗ ಈತನೇ ತನ್ನ ಮಗ ಎಂದು ಗೊತ್ತಾಗಿದೆ. ಎಲ್ಲಾ ಮಾತುಗಳು ನಿಜವೆಂದು ಗೊತ್ತಾಗುತ್ತಿದ್ದಂತೆ ಕಳೆದು ಹೋಗಿದ್ದ ಮಗ ಮತ್ತೆ ಸಿಕ್ಕ ಖುಷಿಯಲ್ಲಿ ಆತನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು.
ಸಂಜಯ್ ತಾಯಿ ಹೇಳಿದ್ದಿಷ್ಟು: ಸಂಜಯ್ ಕಾಣೆಯಾದಾಗ ಮಹೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದೆವು. ಆಗ ಈತನಿಗೆ 9 ವರ್ಷ. ಎಲ್ಲರೂ ಕೈಚೆಲ್ಲಿ ಕುಳಿತಿದ್ದೆವು. ಈಗ ಮಗ ಮರಳಿದ್ದಾನೆ. ಹಲವು ವರ್ಷಗಳ ನಂತರ, ಇದ್ದಕ್ಕಿದ್ದಂತೆ ಸಂಜಯ್‌ನನ್ನು ನೋಡಿದಾಗ ಇದು ವಾಸ್ತವವೋ ಅಥವಾ ಕನಸೋ ಎಂದು ನನಗೆ ಅರ್ಥವಾಗಲಿಲ್ಲ. ಬಳಿಕ ಗೊತ್ತಾಯಿತು ಎಂದು ಸಂಜಯ್ ತಾಯಿ ವೀಣಾ ಹರ್ಷ ವ್ಯಕ್ತಪಡಿಸಿದ್ದಾರೆ.

ಸಂಜಯ್ ಸಹೋದರಿ ಹೇಳಿದ್ದಿಷ್ಟು: ಸಂಜಯ್ ಕಣ್ಮರೆಯಾದಾಗಿನಿಂದ, ಸಂಜಯ್ ಫೋಟೋಗೆ ಮಾತ್ರ ರಾಖಿ ಕಟ್ಟುತ್ತಿದ್ದೆ. ಒಂದು ದಿನ ತನ್ನ ಕಳೆದುಹೋದ ಸಹೋದರ ಖಂಡಿತವಾಗಿಯೂ ಮನೆಗೆ ಮರಳುತ್ತಾನೆಂದು ವಿಶ್ವಾಸವಿತ್ತು. ಇಂದು ಆ ದಿನ ಬಂದಿದೆ. ಸಂಜಯ್ ಮರಳಿ ಬಂದಿರುವುದು ತುಂಬಾ ಸಂತೋಷ ತಂದಿದೆ. ಸಂಜಯ್ ಅನೇಕ ಬಾಲ್ಯದ ಕಥೆಗಳನ್ನು ಹಂಚಿಕೊಂಡಿದ್ದಾರೆ ಎಂದು ಸಂಜಯ್ ಸಹೋದರಿ ರಜನಿ ಹೇಳಿದ್ದಾರೆ.
ಇದನ್ನೂ ಓದಿ: 1 ವರ್ಷದ ಗಂಡು ಮಗು ನಾಪತ್ತೆ: ಹುಡುಕಿ ಕೊಡುವಂತೆ ಅಲೆಮಾರಿ ದಂಪತಿಯ ಅಳಲು - 1 YEAR OLD KID MISSING