ಜೈಪುರ (ರಾಜಸ್ಥಾನ) : ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ದಲಿತ ಕುಟುಂಬದ ವರನೊಬ್ಬ 200 ಜನ ಪೊಲೀಸ್ ಸಿಬ್ಬಂದಿಯ ಕಣ್ಗಾವಲಿನಲ್ಲಿ ಕುದುರೆ ಸವಾರಿ (ಬರಾತ್) ಮೆರವಣಿಗೆ ಮಾಡಿಕೊಂಡ ಕುತೂಹಲಕಾರಿ ಘಟನೆ ರಾಜಸ್ಥಾನದಲ್ಲಿ ಮಂಗಳವಾರ ನಡೆದಿದೆ.
ವಿವಾಹ ಕಾರ್ಯಕ್ರಮಕ್ಕೂ ಮುನ್ನ ವರನನ್ನು ಮೆರವಣಿಗೆ ನಡೆಸುವ 'ಬಿಂದೋಲಿ' ಪದ್ಧತಿ ರಾಜಸ್ಥಾನದಲ್ಲಿದೆ. ಅದರಂತೆ ದಲಿತ ಕುಟುಂಬದ ಯುವಕ ತಾನೂ ಬರಾತ್ ಮೆರವಣಿಗೆ ನಡೆಸಲು ಬಯಸಿದ್ದ. ಆದರೆ, ಊರಿನ ಮೇಲ್ವರ್ಗದ ಜನರು ಇದಕ್ಕೆ ವಿರೋಧಿಸುವ ಭಯದಲ್ಲಿ ಪೊಲೀಸರ ರಕ್ಷಣೆ ಪಡೆದಿದ್ದಾನೆ.

ಏನಿದು ವಿಶೇಷ ಬರಾತ್? ಇಲ್ಲಿನ ಖೋರ್ವಾಲ್‌ನ ಲಾವೆರಾ ಗ್ರಾಮದ ಅರುಣಾ ಎಂಬ ಯುವತಿಯನ್ನು ವಿಜಯ್ ರೇಗರ್ ಎಂಬುವರ ಜೊತೆ ವಿವಾಹ ನಡೆದಿದೆ. ಇದಕ್ಕೂ ಮೊದಲು ವರ, ವಧುವಿನ ಊರಿಗೆ ಕುದುರೆ ಸವಾರಿಯಲ್ಲಿ ತೆರಳುವ ಬಿಂದೋಲಿ ನಡೆಸಲು ಇಚ್ಛಿಸಿದ್ದ. ಆದರೆ, ಗ್ರಾಮದ ಮೇಲ್ಜಾತಿಯವರಿಂದ ಸಂಭಾವ್ಯ ವಿರೋಧ ನಿರೀಕ್ಷಿಸಿ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರು.
ಅದರಂತೆ ದಲಿತ ಯುವಕನ ವಿವಾಹ ಕಾರ್ಯಗಳಿಗೆ ಪೊಲೀಸ್ ಇಲಾಖೆಯು 200 ಸಿಬ್ಬಂದಿಯನ್ನು ನಿಯೋಜಿಸಿತ್ತು. ಭದ್ರತೆ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಪತ್ರ ಕೂಡ ಬರೆಯಲಾಗಿತ್ತು.

ಮೇಲ್ವರ್ಗದ ವಿರೋಧ ಶಂಕೆ : ಈ ಬಗ್ಗೆ ಮಾಹಿತಿ ನೀಡಿರುವ ಅಜ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ರಾಣಾ, ದಲಿತ ಕುಟುಂಬದ ಯುವಕ ಮದುವೆ ಮೆರವಣಿಗೆ ನಡೆಸಲು ಬಯಸಿದ್ದ. ಗ್ರಾಮದ ಇತರ ವರ್ಗಗಳಿಂದ ವಿರೋಧ ವ್ಯಕ್ತವಾಗುವ ಶಂಕೆಯಲ್ಲಿ ಆತ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಭದ್ರತೆ ಕೋರಿದ್ದ. ಆಯೋಗದ ಸೂಚನೆ ಮೇರೆಗೆ 200 ಸಿಬ್ಬಂದಿಯನ್ನು ಬರಾತ್ಗೆ ನಿಯೋಜಿಸಲಾಗಿದೆ ಎಂದರು.

ಈ ಕುರಿತು ಗ್ರಾಮಸ್ಥರ ಜೊತೆಗೂ ಚರ್ಚೆ ನಡೆಸಲಾಗಿದೆ. ಜನರು ಕೂಡ ಸಹಕರಿಸುವ ಭರವಸೆ ನೀಡಿದ್ದರು. ವರನ ಮೆರವಣಿಗೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಗಿದೆ. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

ವರನ ತಂದೆ ನಾರಾಯಣ್ ಮಾತನಾಡಿ, ಈ ಹಿಂದೆ ನಮ್ಮ ಸಮುದಾಯದ ಯುವಕರ ವಿವಾಹ ಮೆರವಣಿಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಆದ್ದರಿಂದ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯ ಕೋರಿದ್ದೆವು. ನಮ್ಮದು ವಿದ್ಯಾವಂತ ಕುಟುಂಬ ಎಂದು ತಿಳಿಸಿದರು.
ಯುವಕನ ವಿವಾಹ ಬರಾತ್ನಲ್ಲಿ ಕುಟುಂಬಸ್ಥರು ಸದ್ದು ಮಾಡುವ ಡಿಜೆ ಮತ್ತು ಪಟಾಕಿಗಳನ್ನು ಬಳಸದೆ, ಪರಿಸರ ಸ್ನೇಹಿ ಕಾರ್ಯಕ್ರಮ ಜರುಗಿಸಿದೆ.
ಇದನ್ನೂ ಓದಿ: ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು!: ವಿಡಿಯೋ