ನವದೆಹಲಿ: ದಲಿತ, ಎಸ್ಟಿ, ಇಬಿಸಿ ಮತ್ತು ಒಬಿಸಿ ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆ ಹಾಗೂ ಅವರಿಗೆ ನೀಡಲಾಗುತ್ತಿರುವ ಮೆಟ್ರಿಕ್ ಬಳಿಕದ ಸ್ಕಾಲರ್ಶಿಪ್ ವಿಚಾರವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ದಲಿತ, ಎಸ್ಟಿ, ಇಬಿಸಿ ಮತ್ತು ಒಬಿಸಿ ವಿದ್ಯಾರ್ಥಿಗಳ ಹಾಸ್ಟೆಲ್ ಸ್ಥಿತಿ ಶೋಚನೀಯವಾಗಿದ್ದು, ಅಳಿವಿನಂಚಿನಲ್ಲಿರುವ ಸಮುದಾಯಗಳಿಗೆ ಮೆಟ್ರಿಕ್ ಬಳಿಕ ನೀಡಲಾಗುತ್ತಿರುವ ಸ್ಕಾಲರ್ಶಿಪ್ ವಿಳಂಬವಾಗುತ್ತಿದೆ. ಇದು ಅಳಿವಿನಂಚಿನಲ್ಲಿರುವ ಸಮುದಾಯದ ಶೇ 90ರಷ್ಟು ವಿದ್ಯಾರ್ಥಿಗಳ ಶಿಕ್ಷಣದ ಅವಕಾಶವನ್ನು ಕಸಿಯುತ್ತಿದೆ ಎಂದು ಟೀಕಿಸಿ, ಪತ್ರದ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ಹಾಸ್ಟೆಲ್‌ಗೆ ಭೇಟಿ ನೀಡಿದಾಗ, ಅಲ್ಲಿನ ಪರಿಸ್ಥಿತಿ ಕುರಿತು 6-7 ವಿದ್ಯಾರ್ಥಿಗಳಿಗೆ ಅಭಿಪ್ರಾಯ ಹಂಚಿಕೊಳ್ಳಲು ಕೋರಿದಾಗ ಅಲ್ಲಿನ ಅನೈರ್ಮಲ್ಯದ ಶೌಚಾಲಯಗಳು, ಅಸುರಕ್ಷಿತ ಕುಡಿಯುವ ನೀರು, ಸೌಲಭ್ಯಗಳ ಕೊರತೆ ಮತ್ತು ಗ್ರಂಥಾಲಯ, ಇಂಟರ್ನೆಟ್‌ಗೆ ಸಮಸ್ಯೆ ಕುರಿತು ಕೂಡ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಿಹಾರಕ್ಕೆ ಇಂದು ರಾಹುಲ್ ಗಾಂಧಿ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ
ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿದೆ. ಬಿಹಾರದ ಪೋರ್ಟಲ್ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸದ ಹಿನ್ನೆಲೆ ಅಲ್ಲಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲಿಲ್ಲ ಎಂದು ಉದಾಹರಿಸಿದ್ದಾರೆ. ಇದರ ಹೊರತಾಗಿ ಕೂಡ ವಿದ್ಯಾರ್ಥಿ ವೇತನ ಪಡೆಯುವ ದಲಿತ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಅರ್ಧದಷ್ಟು ಕಡಿಮೆ ಇದೆ ಎಂದು ದೂರಿದ್ದಾರೆ.
ಜೂನ್ 10ರಂದು ಪ್ರಧಾನಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಬಿಹಾರದ ಸಮಸ್ಯೆಯನ್ನು ನಾನು ಉದಾಹರಿಸಿದ್ದು, ಇದು ಕೇವಲ ಇಲ್ಲಿನ ಸಮಸ್ಯೆಯಲ್ಲ. ಈ ರೀತಿ ಸಮಸ್ಯೆ ದೇಶಾದ್ಯಂತ ಇದ್ದು, ಈ ವೈಫಲ್ಯಗಳನ್ನು ಸರಿಪಡಿಸಲು ಸರ್ಕಾರ ತಕ್ಷಣವೇ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸಮಯಕ್ಕೆ ಸರಿಯಾಗಿ ತಲುಪಲು ಹಾಗೇ ವಿದ್ಯಾರ್ಥಿವೇತನದ ಮೊತ್ತವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಸುಧಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೆಲ ಸಮುದಾಯಗಳ ಯುವಕರು ಪ್ರಗತಿ ಹೊಂದದ ಹೊರತು ಭಾರತ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ನೀವು ಒಪ್ಪುತ್ತೀರಿ ಎಂಬ ಬಗ್ಗೆ ನನಗೂ ನಂಬಿಕೆ ಇದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಸಂವಾದಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಗೆ ತಡೆ