ನವದೆಹಲಿ : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕತ್ವವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ಅವರ ದಿಟ್ಟ ನಾಯಕತ್ವ ಬೆಂಬಲಿಸುವ ಮತ್ತು ರಾಜಕೀಯ ಸ್ಥಿರತೆ ಮತ್ತು ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಗಳ ಈಡೇರಿಸುವ ಮೂಲಕ 2ನೇ ವರ್ಷದ ಸಾಧನಾ ಸಮಾವೇಶ ಮಾಡುತ್ತಿದೆ. ಈ ಸಮಾವೇಶಕ್ಕೆ ಹೈಕಮಾಂಡ್ ಸಿಎಂ ಬೆನ್ನಿಗೆ ನಿಂತಿದೆ.
ಮೇ 20ಕ್ಕೆ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡು 3ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದೆ. ಈ ಸಂದರ್ಭವನ್ನು ಆಚರಿಸಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕದವರೇ ಆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನಾಳಿನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಕುರಿತಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿ ಅಭಿಷೇಕ್ ದತ್ ಮಾತನಾಡಿದ್ದು, 'ಬಿಜೆಪಿಯವರು ಹೇಳುವುದಕ್ಕೂ ಹಾಗೂ ಮಾಡುವುದಕ್ಕೂ ವ್ಯತ್ಯಾಸ ಇದೆ. 2023 ರ (ಕರ್ನಾಟಕ) ವಿಧಾನಸಭಾ ಚುನಾವಣೆಗೆ ಮೊದಲು, ಪ್ರಧಾನಿ (ನರೇಂದ್ರ) ಮೋದಿ ರಾಜ್ಯಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ನಮ್ಮ ಐದು ಚುನಾವಣಾ ಭರವಸೆಗಳ ಬಗ್ಗೆ ಬಿಜೆಪಿಯವರು ರಾಜ್ಯವನ್ನು ದಿವಾಳಿ ಮಾಡಲಿವೆ ಎಂದು ಆರೋಪಿಸಿದ್ದರು. ಆದರೆ ನಮ್ಮ ಸರ್ಕಾರ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ ಬಿಜೆಪಿ ಆಡಳಿತದ ರಾಜ್ಯಗಳು ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗುತ್ತಿಲ್ಲ. ಇದು ಕೇವಲ ಮಾತನಾಡುವ ಪಕ್ಷಕ್ಕೂ ಮತ್ತು ಕಾರ್ಯನಿರ್ವಹಿಸುವ ಪಕ್ಷಕ್ಕೂ ಇರುವ ವ್ಯತ್ಯಾಸ' ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ರಾಥೋಡ್, ಸಾಧನಾ ಸಮಾವೇಶದ ಬಗ್ಗೆ ಮಾತನಾಡಿ, 'ರಾಜ್ಯ ಘಟಕವು ಒಟ್ಟಾಗಿದೆ ಮತ್ತು ರಾಜ್ಯದಲ್ಲಿ ರಾಜಕೀಯ ಸ್ಥಿರತೆ ಇದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿ ಅವರು ಕೆಲಸ ಮಾಡುತ್ತಿದ್ದು, ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುತ್ತಿದ್ದು, ಉಚಿತ ಬಸ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದ ಅವರು, ಸಿಎಂ ಮತ್ತು ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಇವೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.
2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಕ್ಷೇತ್ರಗಳಲ್ಲಿ 135 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಗೆಲುವಿನ ಹಿಂದೆ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆ ಶಿವಕುಮಾರ್ ಸಹ ಮುಖ್ಯಮಂತ್ರಿಯಾಗಲು ಉತ್ಸುಕರಾಗಿದ್ದರು. ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರವಾಗಿ ನಿಂತಿತ್ತು. ಅವರೇ ಸಿಎಂ ಹುದ್ದೆಗೆ ಹೆಚ್ಚು ಸೂಕ್ತ ಎಂದು ನಿರ್ಧರಿಸಿದ್ದರು. ಇದೇ ವೇಳೆ 2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡ ಹೈಕಮಾಂಡ್ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದ್ದು ಅಲ್ಲದೇ ಉಪಮುಖ್ಯಮಂತ್ರಿ ಹುದ್ದೆಯನ್ನುಹೈಕಮಾಂಡ್ ನೀಡಿತ್ತು.
ಇದನ್ನೂ ಓದಿ : ಮೇ 20ರಂದು ಹೊಸಪೇಟೆಯಲ್ಲಿ ಸರ್ಕಾರದ ಸಾಧನಾ ಸಮಾವೇಶ, 3 ಲಕ್ಷ ಜನ ಸೇರುವ ನಿರೀಕ್ಷೆ: ಸಿಎಂ - CM SIDDARAMAIAH