ಪುಣೆ, ಮಹಾರಾಷ್ಟ್ರ: ಬಾಳ ಮುಸ್ಸಂಜೆಯಲ್ಲಿರುವ ಹಾಗೂ ಹೆಂಡತಿಯನ್ನು ಕಳೆದುಕೊಂಡ ವೃದ್ಧರು, ಪತಿಯನ್ನು ಕಳೆದುಕೊಂಡ ವೃದ್ಧೆಯರಿಗೆ ಆಗುವ ಒಂಟಿತನ, ಏಕಾಂತ, ನಿರಾಸೆಗಳನ್ನು ಹೋಗಲಾಡಿಸಲು ಸಂಸ್ಥೆಯೊಂದು ನಿರಂತರ ಕಾರ್ಯೋನ್ಮುಖವಾಗಿದೆ.
ಇದಕ್ಕೆ ಪೂರಕ ಎಂಬಂತೆ, ಜೀವನ ಸಂಗಾತಿ ಅಗಲಿಕೆ ಬಳಿಕ ಬಾಳ ಮುಸ್ಸಂಜೆಯಲ್ಲಿ ಏಕಾಂಗಿತನದಲ್ಲಿದ್ದ ಆಸ್ವರಿ ಕುಲಕರ್ಣಿ ಮತ್ತು ಅನಿಲ್ ಯಾರ್ಡಿ ಇದೀಗ ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಇದಕ್ಕೆ ವೇದಿಕೆಯಾಗಿರುವುದು ಹ್ಯಾಪಿ ಸೀನಿಯರ್ಸ್ ಸಂಸ್ಥೆ. ಈ ಸಂಸ್ಥೆಯ ಮುಖ್ಯ ಉದ್ದೇಶವೇ ಸಂಗಾತಿಯ ಆಸರೆ ಬಯಸುವ ಹಿರಿಯ ಜೀವಗಳನ್ನು ಮರು ಮದುವೆಯ ಮೂಲಕ ಅಥವಾ ಲಿವ್ ಇನ್ ರಿಲೇಷನ್ಶಿಪ್ ಮೂಲಕ ಒಂದು ಮಾಡುವುದೇ ಆಗಿದೆ.
ಅವರಿಗೆ ಇವರು, ಇವರಿಗೆ ಅವರು ಆಸರೆ: ಇದೇ ವೇದಿಕೆ ಮೂಲಕ ಅನಿಲ್ ಮತ್ತು ಆಸ್ಬರಿ ಇದೀಗ ಜೊತೆಯಾಗಿದ್ದಾರೆ. ಮರು ಮದುವೆಯಾಗಲೂ ಯೋಚಿಸಿದರೂ ಸಹ ಜೀವನ ಅದಕ್ಕಿಂತ ಸೂಕ್ತ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಒಟ್ಟಿಗೆ ಬದುಕ ಬಂಡಿ ಎಳೆಯಲು ಆಸರೆಯಾಗಿದ್ದಾರೆ.
ಒಂಟಿಯಾಗಿದ್ದವರು ಜಂಟಿಯಾಗಿದ್ದರ ಬಗ್ಗೆ ಹೀಗಿದೆ ಪ್ರತಿಕ್ರಿಯೆ: ಈ ಕುರಿತು ಮಾತನಾಡಿರುವ ಆಸ್ಬರಿ ನಾನು ಈ ವಯಸ್ಸಿನಲ್ಲಿ ಮರು ಮದುವೆಯಾಗುವುದರ ಬಗ್ಗೆ ಸ್ಪಷ್ಟವಾಗಿ ನಿಲುವು ತಳೆದಿರಲಿಲ್ಲ. ಆದರೆ, ಅನಿಲ್ ಅವರನ್ನ ಕಳೆದ ವರ್ಷ ಭೇಟಿಯಾದ ಬಳಿಕ ಹಾಗೂ ಅವರೊಂದಿಗೆ 10 ತಿಂಗಳ ಒಡನಾಟದ ಬಳಿಕ ಇದೀಗ ಒಟ್ಟಿಗೆ ಸಹ ಜೀವನ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ತಮ್ಮವರಿಲ್ಲ ಎಂಬ ಚಿಂತೆಯಲ್ಲಿದ್ದವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ: ಇಳಿ ವಯಸ್ಸಿನಲ್ಲಿ ಸಂಗಾತಿ ಕಳೆದುಕೊಂಡು ಉದ್ಯೋಗ ಅರಸುತ್ತಾ ದೂರದ ಮಕ್ಕಳಿಂದ ಒಬ್ಬಂಟಿಯಾಗುವ ಹಿರಿಯರಿಗೆ ಈ 'ಹ್ಯಾಪಿ ಸೀನಿಯರ್ಸ್' ಸಂಸ್ಥೆ ಬೆಂಬಲ ನೀಡುತ್ತಿದೆ. ಅವರಿಗೆ ತಮ್ಮವರೊಬ್ಬರು ತಮ್ಮ ಜೊತೆಯಲ್ಲಿದ್ದಾರೆ ಎಂಬ ನಿಟ್ಟುಸಿರು ಬಿಡಲು ಹೊಸ ಸಂಗಾತಿ ಹುಡುಕಾಟಕ್ಕೆ ನೆರವನ್ನು ನೀಡುತ್ತದೆ.
90 ಜನರಿಗೆ ಮರು ಮದುವೆ ಮಾಡಿ ಬದುಕು ರೂಪಿಸಿದ ಸಂಸ್ಥೆ: ಸಂಸ್ಥೆಯ ಸ್ಥಾಪಕ ಮಾಧವ್ ದಾಮ್ಲೆ ಮಾತನಾಡಿ, ಸಂಸ್ಥೆಯಿಂದ ಇದುವರೆಗೆ 90 ಮರು ಮದುವೆ ಮಾಡಲಾಗಿದೆ. ಅನೇಕರು ಲೀವ್ ಇನ್ ರಿಲೇಷನ್ಶಿಪ್ ಆಯ್ಕೆ ಮಾಡಿಕೊಂಡಿದ್ದಾರೆ. 12 ವರ್ಷಗಳ ಕಾಲ ಹಿರಿಯ ನಾಗರಿಕರೊಂದಿಗೆ ಕೆಲಸ ಮಾಡಿದ ಬಳಿಕ ತಮಗೆ ಈ ಯೋಚನೆ ಬಂದಿತು. ವಯಸ್ಸಾದ ಪುರುಷರು ಮತ್ತು ಮಹಿಳೆಯರು ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಅವರೊಳಗೆಯೇ ಹೋರಾಡುತ್ತಿರುತ್ತಾರೆ. ಇಂತಹವರಿಗಾಗಿ ಈ ಯೋಜನೆ ನೆರವು ನೀಡಿದೆ ಎನ್ನುತ್ತಾರೆ ಅವರು.
ವರ್ಷಗಳ ಹಿಂದೆ ನಾನು ಹಿರಿಯರಿಗಾಗಿ ಆಶ್ರಮ ನಡೆಸುತ್ತಿದ್ದೆ. ಅಲ್ಲಿ ಒಬ್ಬರು ತಮ್ಮ ಮಗನೊಂದಿಗೆ ಜಗಳವಾಡಿ ತಮ್ಮ ಜೀವನ ಅಂತ್ಯಗೊಳಿಸಲು ಮುಂದಾಗಿದ್ದರು. ಮಗನನ್ನು ಸಂಪರ್ಕಿಸಿದಾಗ ಆತ ಯಾವುದೇ ನೆರವಿಗೆ ಮುಂದಾಗಲಿಲ್ಲ. ಈ ವೇಳೆ, ಹಿರಿಯ ನಾಗರಿಕರು ಹೇಗೆ ತಮ್ಮ ಬದುಕನ್ನು ಕಳೆಯುತ್ತಿದ್ದಾರೆ ಎಂಬುದು ನನ್ನ ಅರಿವಿಗೆ ಬಂತು. ಇದರಿಂದಾಗಿ ಅವರು ತಮ್ಮ ಕೊನೆಗಾಲದಲ್ಲಿ ಒಬ್ಬಂಟಿಯಾಗಿ ಇರಬಾರದು ಎಂಬ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾಗಿ ದಾಮ್ಲೆ ಈ ಚಿಂತನೆ ಹಿಂದಿನ ರಹಸ್ಯವನ್ನ ಬಿಚ್ಚಿಟ್ಟರು.

ಇದಕ್ಕೆ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯ್ತು: ಆರಂಭದಲ್ಲಿ ಹಿರಿಯರ ಮರು ಮದುವೆಗೆ ವ್ಯವಸ್ಥೆ ಮಾಡಲು ಮುಂದಾದಾಗ ಸಾಕಷ್ಟು ವಿರೋಧಗಳು ವ್ಯಕ್ತವಾಯಿತು. ಆಸ್ತಿ ವಿಚಾರವಾಗಿ ಮಕ್ಕಳು ಇಂತಹದ್ದಕ್ಕೆಲ್ಲ ವಿರೋಧ ವ್ಯಕ್ತಪಡಿಸುತ್ತಾರೆ. ಆಸ್ತಿ ಜಗಳ, ಸಾಮಾಜಿಕ ಒತ್ತಡ ಮತ್ತು ಕೊನೆಗಾಲದಲ್ಲಿನ ಈ ಮದುವೆ ಬಗ್ಗೆ ಇರುವ ಚಿಂತನೆಗಳು ದೊಡ್ಡ ಸಮಸ್ಯೆಗಳಾಗಿವೆ. ತೀರಾ ಸಮಸ್ಯೆ ಆದಾಗ ಅವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡುವ ಯೋಚನೆ ಮಾಡಿದೆವು. ಮರು ಮದುವೆ ಬದಲಾಗಿ ಸಹ ಜೀವನ ನಡೆಸುವ ಪರ್ಯಾಯ ದಾರಿ ಹುಡುಕಿ ಕೊಟ್ಟೆವು ಅಂತಾರೆ ದಾಮ್ಲೆ.
ಲೀವ್ ಇನ್ ರಿಲೇಶನ್ಶಿಪ್ ಮಂಡಳಿ ಸ್ಥಾಪನೆ: 2012ರಲ್ಲಿ ದಾಮ್ಲೆ ಔಪಚಾರಿಕವಾಗಿ ಹಿರಿಯ ನಾಗರಿಕರಿಗೆ ಲೀವ್ ಇನ್ ರಿಲೇಶನ್ಶಿಪ್ ಮಂಡಳಿಯನ್ನು ಆರಂಭಿಸಿದರು. ಅನೇಕರು ಇದನ್ನು ಅನಗತ್ಯ ಮತ್ತು ಅಪ್ರಸ್ತುತ ಎಂದು ಟೀಕಿಸಿದರು. ಆದರೆ, ನಾವು ಇದಕ್ಕೆ ಬಗ್ಗಲಿಲ್ಲ. ಒಮ್ಮೆ ಈ ಕುರಿತ ಸಭೆ ನಡೆಸಿ ಸಮಾಲೋಚನೆ ನಡೆಸಿದಾಗ ಮತ್ತು ಒಟ್ಟಿಗೆ ಕುಳಿತು ಚರ್ಚಿಸಿದಾಗ ಕೆಲವು ನಿಲುವುಗಳಿಗೆ ಬರಲಾಯಿತು. ನಿಧಾನವಾಗಿ ಹಲವರಿಗೆ ಇದು ಸರಿ ಎನಿಸತೊಡಗಿತು. ಇಂದು ನಾವು ಈ ಕುರಿತು ಹೆಮ್ಮೆ ಪಡುವಂತಾಗಿದೆ ಎಂದು ದಾಮ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಸ್ಥೆ ಕೆಲವು ಮಾರ್ಗಸೂಚಿಗಳನ್ನು ಹೊಂದಿದೆ. ಮೊದಲಿಗೆ ರಿಜಿಸ್ಟರ್ ಮಾಡಿಸಿ ಆ ಸದಸ್ಯರ ಹಿನ್ನೆಲೆ ಪರಿಶೀಲನೆ, ಆರೋಗ್ಯ ಪರೀಕ್ಷೆ ಜೊತೆಗೆ ಆರ್ಥಿಕ ಸ್ಥಿರತೆ ಕುರಿತು ಕೂಡ ಅರಿಯುತ್ತೇವೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಿಲ್ಲದಿದ್ದಾಗ ಅವರಿಗೆ ಸೆಕ್ಯೂರಿಟಿ ಹಣವನ್ನು ಇಡುವುದು ಕಡ್ಡಾಯವಾಗುತ್ತದೆ. ಇದರಿಂದ ಅವರು ಭವಿಷ್ಯದಲ್ಲಿ ಸಮಸ್ಯೆಯಿಂದ ಪಾರಾಗಬಹುದು. ಹಾಗೇ ಕಾನೂನಾತ್ಮಕ ಮತ್ತು ಭಾವನಾತ್ಮಕ ಭದ್ರತೆಯ ಸಹಾಯವನ್ನು ಪ್ರತಿ ಸದಸ್ಯರಿಗೆ ನೀಡುತ್ತೇವೆ.

ಎಲ್ಲವನ್ನೂ ಮೀರಿದ ಪ್ರೀತಿ: 2013ರಲ್ಲಿ ನನ್ನ ಹೆಂಡತಿ ಅಗಲಿದಳು, ನನ್ನ ಮಗಳು ಕೂಡ ಮದುವೆಯಾಗಿ ಗಂಡನ ಮನೆಗೆ ಹೋದಳು. ಈ ವೇಳೆ ನನಗೆ ಸಮಯ ಕಳೆಯುವುದೇ ಕಷ್ಟವಾಗಿತ್ತು. ಆಗ ಸ್ನೇಹಿತರೊಬ್ಬರು ಮರು ಮದುವೆಗೆ ಸಲಹೆ ನೀಡಿದರು. ನಾನು ಸಿದ್ದನಿರಲಿಲ್ಲ. ಇದಾದ ಬಳಿಕ ನನಗೆ ಹ್ಯಾಪಿ ಸಿನೀಯರ್ಸ್ ಬಗ್ಗೆ ತಿಳಿಯಿತು. ಅಸ್ವಾರಿ ಭೇಟಿಯಾದ ಬಳಿಕ ನನ್ನ ಜೀವನ ಬದಲಾಯಿತು. ನಾವು ಇದೀಗ ಕಳೆದ 10 ವರ್ಷದಿಂದ ಒಟ್ಟಿಗೆ ಜೀವನ ಕಳೆಯುತ್ತಿದ್ದೇವೆ ಎಂದು ಅನಿಲ್ ತಿಳಿಸಿದರು.
ಹ್ಯಾಪಿ ಸೀನಿಯರ್ಸ್ ಮೂಲಕ ಸದಸ್ಯರ ನಡುವೆ ಸಂಬಂಧ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ದಾಮ್ಲೆ ತಂಡ ತಿಂಗಳಿಗೆ ಒಂದು ಪ್ರವಾಸ ಹಾಗೂ ಗೆಟ್ ಟುಗೆದರ್ ನಡೆಸುವ ಮೂಲಕ ಹಿರಿಯ ನಾಗರಿಕರು ಪರಸ್ಪರ ಭೇಟಿ ಮಾಡಿ ಸಂವಹನ ನಡೆಸುವಂತೆ ಮಾಡಲಾಗಿದೆ. ಈ ಭೇಟಿ ಸಮಯದಲ್ಲಿ ಅವರು ತಮ್ಮ ಸಂಗಾತಿಯನ್ನು ಕಂಡು ಕೊಳ್ಳುವ ಯತ್ನ ನಡೆಸಲಾಗುತ್ತದೆ.
ಅನೇಕ ಮಂದಿ ಈ ವಿಚಾರದ ಕುರಿತು ಮುಜುಗರ ಹೊಂದಿದ್ದು, ಸಮಾಜದ ಕಟ್ಟುಪಾಡಿಗೆ ಹೆದರುತ್ತಾರೆ. ಆದರೆ, ಪ್ರೀತಿ ಮತ್ತು ಏಕಾಂಗಿತನ ಹೋಗಲಾಡಿಸುವ ಅನುಭವದ ಬಳಿಕ ಅವರ ಚಿಂತನೆ ಬದಲಾಗುತ್ತದೆ. ಆರಂಭದಲ್ಲಿ ಕುಟುಂಬಗಳು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದವು , ಇದೀಗ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿವೆ ಎನ್ನುತ್ತಾರೆ ದಾಮ್ಲೆ.
ಹ್ಯಾಪಿ ಸೀನಿಯರ್ಸ್ ಸಂಸ್ಥೆಯು ಸಂಗ್ರಹಿತ ನಿಧಿಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಸರ್ಕಾರದಿಂದ ಯಾವುದೇ ಬೆಂಬಲ ಪಡೆದಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲೂ ನೆರವು ದೊರೆತಲ್ಲಿ ಇನ್ನೂ ಪರಿಣಾಮಕಾರಿಯಾಗಿ ನಾವು ಸಾಗಬಹುದಾಗಿದೆ. ಇದರಿಂದ ಮತ್ತಷ್ಟು ಹಿರಿಯ ನಾಗರಿಕರಿಗೆ ಸಹಾಯವಾಗಲಿದೆ. ಇಂದು ನಾವು ಇಲ್ಲಿ ಈ ರೀತಿ ಒಟ್ಟಿಗೆ ಇರುವುದಕ್ಕೆ ಪ್ರಮಖ ಕಾರಣ ಎಂದರೆ ಅದು ಪ್ರೀತಿ, ಆರೈಕೆ ಮತ್ತು ಜೊತೆಗಾರರು ಅಂತಾರೆ ದಾಮ್ಲೆ.
ಇದನ್ನೂ ಓದಿ: ಡಿಲಿಮಿಟೇಶನ್ ದಕ್ಷಿಣದ ರಾಜ್ಯಗಳಿಗೆ 'ಲಿಮಿಟೇಶನ್' ಆಗಲಿದೆ; ಸಿಎಂ ರೇವಂತ್ ರೆಡ್ಡಿ ಕಳವಳ
ಇದನ್ನೂ ಓದಿ: ವೈದ್ಯ ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ ; ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ