Bihar Election Results 2025

ETV Bharat / bharat

ಟೇಕಾಫ್​ ವೇಳೆ ಪೊದೆಗಳಿಗೆ ಡಿಕ್ಕಿ ಹೊಡೆದ ಖಾಸಗಿ ಜೆಟ್​

ಫರೂಕಾಬಾದ್‌ನ ಮೊಹಮ್ಮದಾಬಾದ್ ವಾಯುನೆಲೆಯಲ್ಲಿ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದವರು ನಿರ್ಮಾಣ ಹಂತದಲ್ಲಿರುವ ಬಿಯರ್ ಕಾರ್ಖಾನೆಯನ್ನು ಪರಿಶೀಲಿಸಲು ಭೋಪಾಲ್‌ನಿಂದ ಬಂದಿದ್ದರು.

Private jet crashes into bushes while takeoff No one injured in incident Uttar Pradesh Farrukhabad accident
ಟೇಕಾಫ್​ ವೇಳೆ ಪೊದೆಗಳಿಗೆ ಡಿಕ್ಕಿ ಹೊಡೆದ ಖಾಸಗಿ ಜೆಟ್​ (ETV Bharat)
author img

By ETV Bharat Karnataka Team

Published : October 9, 2025 at 4:52 PM IST

2 Min Read
Choose ETV Bharat

ಫರೂಕಾಬಾದ್​: ಖಾಸಗಿ ಜೆಟ್​ ವಿಮಾನವೊಂದು ಟೇಕ್​ ಆಫ್​ ಆಗುವಾಗ ಪೊದೆಗಳಿಗೆ ಡಿಕ್ಕಿ ಹೊಡೆದ ಘಟನೆ ಇಂದು ಉತ್ತರ ಪ್ರದೇಶದ ಮೊಹಮ್ಮದಾಬಾದ್​ ವಾಯುನೆಲೆಯಲ್ಲಿ ನಡೆಯಿತು. ಘಟನೆಯಲ್ಲಿ ಇಬ್ಬರು ಪೈಲಟ್​ಗಳು ಸೇರಿದಂತೆ 6 ಜನರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಎಸ್​ಡಿಎಂ ಹಾಗೂ ಇತರ ಪೊಲೀಸ್​ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.

ಜಿಲ್ಲಾಧಿಕಾರಿ ಅಶುತೋಸ್​ ಕುಮಾರ್​ ದ್ವಿವೇದಿ ಅವರು ಅಡ್ಮಿನಿಸ್ಟ್ರೇಟಿವ್​ ವಾಟ್ಸ್‌ಆ್ಯಪ್​ ಗ್ರೂಪ್​​ನಲ್ಲಿ ಖಾಸಗಿ ಜೆಟ್​ ವಿಮಾನ ಅಪಘಾತಕ್ಕೀಡಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವಿಮಾನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಎಂದು ತಿಳಿಸಿದ್ದಾರೆ.

ಬಿಯರ್ ಕಾರ್ಖಾನೆಯ ಯುಪಿ ಯೋಜನಾ ಮುಖ್ಯಸ್ಥ ಮನೀಶ್ ಕುಮಾರ್ ಪಾಂಡೆ ಘಟನೆಯ ಕುರಿತು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಜೆಟ್ ಸರ್ವಿಸ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ನ ಖಾಸಗಿ ಜೆಟ್, ವಿಟಿ-ಡಿಇಝಡ್ ಬುಧವಾರ ಮಧ್ಯಾಹ್ನ 3 ಗಂಟೆಗೆ ಮೊಹಮ್ಮದಾಬಾದ್ ವಾಯುನೆಲೆಯಲ್ಲಿ ಇಳಿಯಿತು ಎಂದು ಅವರು ಹೇಳಿದ್ದಾರೆ. ಇಬ್ಬರು ಪೈಲಟ್‌ಗಳು ಮತ್ತು ಬಿಯರ್ ಕಾರ್ಖಾನೆಯ ಡಿಎಂಡಿ ಅಜಯ್ ಅರೋರಾ, ಎಸ್‌ಬಿಐ ಮುಖ್ಯಸ್ಥ ಸುಮಿತ್ ಶರ್ಮಾ ಮತ್ತು ಬಿಪಿಒ ರಾಕೇಶ್ ಟಿಕು ಸೇರಿದಂತೆ ಆರು ಜನರು ವಿಮಾನದಲ್ಲಿದ್ದರು. ಅವರು ನಿರ್ಮಾಣ ಹಂತದಲ್ಲಿರುವ ಕಾರ್ಖಾನೆಯನ್ನು ಪರಿಶೀಲಿಸಲು ಭೋಪಾಲ್‌ನಿಂದ ಬಂದಿದ್ದರು ಎಂದು ತಿಳಿಸಿದ್ದಾರೆ.

ಎಲ್ಲರೂ ಭೋಪಾಲ್‌ಗೆ ತೆರಳುತ್ತಿದ್ದರು: ಈ ಕಾರ್ಖಾನೆಯನ್ನು ಖಿಮ್ಸೆಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಗುರುವಾರ ಬೆಳಗ್ಗೆ ಅದೇ ವಿಮಾನದಲ್ಲಿ ಎಲ್ಲರೂ ಭೋಪಾಲ್‌ಗೆ ಹಿಂತಿರುಗಬೇಕಿತ್ತು. ಎಲ್ಲರೂ ಬೆಳಗ್ಗೆ 10:30ಕ್ಕೆ ವಿಮಾನ ಹತ್ತಿದರು. ಮೊಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಮಾಡಲು ವಿಮಾನ 400 ಮೀಟರ್ ದೂರ ಪ್ರಯಾಣಿಸಿತು. ಟೇಕ್ ಆಫ್ ಆದ ನಂತರ, ವಿಮಾನವು ಸಮತೋಲನ ಕಳೆದುಕೊಂಡು ರನ್‌ವೇಯಿಂದ ಹೊರಟು ಪೊದೆಗಳಿಗೆ ಡಿಕ್ಕಿ ಹೊಡೆಯಿತು ಎಂದು ಯೋಜನಾ ಮುಖ್ಯಸ್ಥ ಮನೀಶ್​ ಕುಮಾರ್​ ತಿಳಿಸಿದ್ದಾರೆ.

ಅಪಘಾತಕ್ಕೆ ಪೈಲಟ್​ಗಳ ನಿರ್ಲಕ್ಷ್ಯದ ಆರೋಪ ಹೊರಿಸಿರುವ ಮನೀಶ್​ ಕುಮಾರ್​, ವಿಮಾನದಲ್ಲಿದ್ದ ಅಜಯ್​ ಅರೋರಾ ಹಾಗೂ ಇತರರು ಸೀಟ್​ ಬೆಲ್ಟ್​ ಧರಿಸಿದ್ದರು. ಅಪಘಾತದಲ್ಲಿ ಸೀಟ್​ ಬೆಲ್ಟ್​ಗಳು ಮುರಿದು ಹೋಗಿವೆ. ರನ್​ವೇಯಲ್ಲೇ ವಿಮಾನ ಅಪಘಾತಕ್ಕೀಡಾಗಿದೆ ಎಂದು ದೂರಿದರು.

ಸ್ಥಳಕ್ಕೆ ಭೇಟಿ ನೀಡಿದ ಎಸ್‌ಡಿಎಂ ಸೇರಿದಂತೆ ಹಲವು ಅಧಿಕಾರಿಗಳು: ಘಟನೆಯ ಬಗ್ಗೆ ತಿಳಿದ ಕೂಡಲೇ ಕೊತ್ವಾಲಿಯ ಉಸ್ತುವಾರಿ ವಿನೋದ್ ಕುಮಾರ್ ಶುಕ್ಲಾ ಪೊಲೀಸರೊಂದಿಗೆ ಸ್ಥಳಕ್ಕೆ ಬಂದರು. ಅಗ್ನಿಶಾಮಕ ದಳ ಇಲಾಖೆಯ ಆಶಿಶ್ ವರ್ಮಾ, ಸಿಒ ಅಜಯ್ ವರ್ಮಾ, ಎಸ್‌ಡಿಎಂ ಸದರ್ ರಜನಿಕಾಂತ್ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮತ್ತು ಪ್ರಾದೇಶಿಕ ಲೆಕ್ಕಪರಿಶೋಧಕ ಸಂಜಯ್ ಕುಮಾರ್ ಆಗಮಿಸಿದರು. ಅವರೆಲ್ಲರೂ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಜಿಲ್ಲಾಧಿಕಾರಿ ಅಶುತೋಷ್ ಕುಮಾರ್ ದ್ವಿವೇದಿ ಅವರು, ವಿಮಾನ ಟೇಕ್ ಆಫ್ ಆಗುವ ಮೊದಲು ರನ್‌ವೇಯಲ್ಲಿ ನಿಯಂತ್ರಣ ತಪ್ಪಿದೆ. ತಾಂತ್ರಿಕ ವಿಭಾಗದ ಸಿಬ್ಬಂದಿ ಏನು ಸಮಸ್ಯೆ ಆಗಿತ್ತು ಎನ್ನುವುದನ್ನು ವಿವರಿಸುತ್ತಾರೆ. ತನಿಖೆ ನಡೆಯುತ್ತಿದೆ. ಯಾವುದೇ ದೊಡ್ಡ ಹಾನಿ ವರದಿಯಾಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಏರ್​ ಇಂಡಿಯಾ ದುರಂತ ತನಿಖೆಯಲ್ಲಿ ಭಾಗಿಯಾಗಲು ಪೈಲಟ್​​ಗಳಿಗೆ ಅವಕಾಶ ನಿರಾಕರಿಸಿದ ಎಎಐಬಿ