ಹಿಸಾರ್(ಹರಿಯಾಣ): ಹಿಸಾರ್ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮೊದಲ ನೇರ ವಾಣಿಜ್ಯ ವಿಮಾನ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. "2014ಕ್ಕೂ ಮೊದಲು ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು, ಈಗ ಆ ಸಂಖ್ಯೆ 150 ದಾಟಿದೆ" ಎಂದು ಪ್ರಧಾನಿ ಇದೇ ವೇಳೆ ಕಾಂಗ್ರೆಸ್ ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ಇನ್ನು ಮುಂದೆ, ಹಿಸಾರ್ನಿಂದ ಅಯೋಧ್ಯೆಗೆ ವಾರಕ್ಕೆ ಎರಡು ಬಾರಿ ಮತ್ತು ಜಮ್ಮು, ಅಹಮದಾಬಾದ್, ಜೈಪುರ ಮತ್ತು ಚಂಡೀಗಢಕ್ಕೆ ವಾರಕ್ಕೆ ಮೂರು ಬಾರಿ ವಿಮಾನಗಳು ಹಾರಾಡಲಿವೆ.
The inauguration of Hisar Airport marks a significant milestone in Haryana's development journey. It will boost regional connectivity and catalyse economic growth across the state. https://t.co/8DtkTWUEXD
— Narendra Modi (@narendramodi) April 14, 2025
ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ಹಿಸಾರ್ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
"ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ನೀತಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಮರ್ಪಿತ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಮತ್ತು ಅವರ ನೆನಪನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಏನು ಮಾಡಿದೆ ಎಂಬುದನ್ನು ನಾವು ಮರೆಯಬಾರದು. ಅಂಬೇಡ್ಕರ್ ಬದುಕಿರುವವರೆಗೂ ಕಾಂಗ್ರೆಸ್ ಅವರನ್ನು ಅವಮಾನಿಸಿತು. ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರು" ಎಂದು ಟೀಕಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್‌ನ ವೈರಸ್ ಹರಡುತ್ತಿದೆ- ಮೋದಿ: "ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್‌ನ ವೈರಸ್ ಹರಡುತ್ತಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಪಡೆಯಲು ಪವಿತ್ರ ಸಂವಿಧಾನವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿತು" ಎಂದು ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ದೇಶದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಿದೆ. ಆ ಪಕ್ಷದ ನಾಯಕರು ಈಜುಕೊಳಗಳಂತಹ ಐಷಾರಾಮಿ ಸೌಲಭ್ಯಗಳನ್ನು ಆನಂದಿಸುತ್ತಿದ್ದರೆ, ಹಳ್ಳಿಗಳಲ್ಲಿನ ಪ್ರತಿ 100 ಮನೆಗಳ ಪೈಕಿ ಕೇವಲ 16 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸೌಲಭ್ಯ ಸಿಕ್ಕಿದೆ. ನಲ್ಲಿ ನೀರಿನ ಸೌಲಭ್ಯದಿಂದ ವಂಚಿತರಾದವರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ" ಎಂದರು.
"ಕೇವಲ ಆರೇಳು ವರ್ಷಗಳಲ್ಲಿ, ನಮ್ಮ ಸರ್ಕಾರವು 12 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ. ಈಗ, ಪ್ರತಿ 100 ಗ್ರಾಮೀಣ ಮನೆಗಳ ಪೈಕಿ 80 ಮನೆಗಳಿಗೆ ಶುದ್ಧ ನೀರು ಪೂರೈಕೆಯಾಗುತ್ತಿದೆ ಮತ್ತು ಆ ಸಂಖ್ಯೆಯನ್ನು ಶೇ.100ಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.
ಮಹಾರಾಜ ಅಗ್ರಸೇನ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೆ ಸುಮಾರು 410 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಧಾನಿ ಮೋದಿ ಹರಿಯಾಣದಲ್ಲಿ 10 ಸಾವಿರ ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಮತ್ತು ರಾಜ್ಯ ಹಲವು ಸಚಿವರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ವಾರಾಣಸಿಯಲ್ಲಿಂದು ₹3,880 ಕೋಟಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ