ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಉದ್ಯಮಿಯೊಬ್ಬರ ಕಾರಿಗೆ ಬಾಂಬ್ ಎಸೆದಿರುವ ಘಟನೆ ಭಾನುವಾರ ತಡರಾತ್ರಿ ಶಂಕರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ನರಿಬರಿಯ ಪ್ರಯಾಗ್‌ರಾಜ್-ರೇವಾ ರಸ್ತೆಯಲ್ಲಿ ನಡೆದಿದೆ.
ಚಕ್‌ಘಾಟ್ ನಿವಾಸಿ ಉದ್ಯಮಿ ರವಿ ಕೇಶರ್ವಾನಿ ಎಂಬವರು ತಮ್ಮ ಸ್ನೇಹಿತನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಎದುರುಗಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು, ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿ ಸೇರಿ ಇಬ್ಬರೂ ಗಾಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಂಬ್ ಎಸೆಯುತ್ತಿರುವ ದೃಶ್ಯ ಮನೆಯೊಂದರ ಮುಂದೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಆಧಾರದಡಿ ಶಂಕರ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಬ್ ಎಸೆದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ದೇವದಾಸ್ ಅವರ ಪುತ್ರ ರವಿ ಕೇಶರ್ವಾನಿ, ತನ್ನ ಸ್ನೇಹಿತರಾದ ವಿಕ್ಕಿ ಕೇಶರ್ವಾನಿ ಅವರೊಂದಿಗೆ ವೇದ್ ದ್ವಿವೇದಿ ಅವರ ಆಹ್ವಾನದ ಮೇರೆಗೆ ಪ್ರಯಾಗ್ರಾಜ್‌ಗೆ ತೆರಳುತ್ತಿದ್ದರು. ಪ್ರಯಾಗ್ರಾಜ್‌ನಿಂದ ಬರುತ್ತಿದ್ದ ಇಬ್ಬರು ಬೈಕ್ ಸವಾರರು ಇವರ ಕಾರಿಗೆ ಬಾಂಬ್ ಎಸೆದಿದ್ದಾರೆ. ಬಾಂಬ್ ಸ್ಫೋಟಗೊಂಡಿದ್ದು, ತಕ್ಷಣ ರವಿ ಕೇಶರ್ವಾನಿ ಮತ್ತು ಅವರ ಸ್ನೇಹಿತ ಕಾರಿನಿಂದ ಕೆಳಗಿಳಿದಿದ್ದಾರೆ.
ಬಾಂಬ್ ಸ್ಫೋಟದ ದೃಶ್ಯ ಹಾಗೂ ಸ್ಥಳದಲ್ಲಿ ಹೊಗೆ ಹರಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಘಟನೆ ಬಳಿಕ ದಾಳಿಕೋರರು ಪರಾರಿಯಾಗಿದ್ದಾರೆ. ಗಾಯಗೊಂಡ ಇಬ್ಬರನ್ನೂ ಪ್ರಯಾಗ್ರಾಜ್‌ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚೌಕಿ ಉಸ್ತುವಾರಿ ಮತ್ತು ಕಾನ್‌ಸ್ಟೆಬಲ್‌ಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದು, ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ. ಎಸಿಪಿ ಬಾರಾ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ರವಿ ಕೇಶರ್ವಾನಿ ನೀಡಿದ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಯಮುನಾನಗರ ಡಿಸಿಪಿ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.