ಯಾಣಮ್ (ಪುದುಚೇರಿ): ಏಳು ವರ್ಷದ ಬಾಲಕನೊಬ್ಬ ತನಗೆ ಚಾಕೊಲೇಟ್ ಮತ್ತು ಪಾನಿಪುರಿ ಕೊಡಿಸುವಂತೆ ಸಾರ್ವಜನಿಕರ ತುರ್ತು ಸೇವಾ ಘಟಕವಾದ ಸೈಬರ್ ಕ್ರೈಂ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗೆ ಸತತ 8 ಬಾರಿ ಕರೆ ಮಾಡುವ ಮೂಲಕ ಪೊಲೀಸರ ತಲೆಬಿಸಿ ಮಾಡಿದ್ದಾನೆ. ಈ ವಿಚಿತ್ರ ಘಟನೆ ಪುದುಚೇರಿಯ ಯಾಣಮ್ ಎಂಬಲ್ಲಿ ನಡೆದಿದ್ದು, ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಟೋಲ್-ಫ್ರೀ ಸಹಾಯವಾಣಿ 1930ಕ್ಕೆ ಪದೇ ಪದೇ ಕರೆ ಮಾಡಿದ ಬಾಲಕ, ತನಗೆ ಪಾನಿಪುರಿ ಮತ್ತು ಚಾಕೊಲೇಟ್ ಕೊಡಿಸುವಂತೆ ದುಂಬಾಲು ಬಿದ್ದಿದ್ದು, ಹುಡುಗನ ಕಾಟಕ್ಕೆ ಪೊಲೀಸರು ದಿಗ್ಭ್ರಮೆಗೊಳಗಾಗಿದ್ದಾರೆ. ಆರಂಭದಲ್ಲಿ ಬಾಲಿಶ ಹಾಗೂ ತಮಾಷೆ ಎಂದು ತಳ್ಳಿಹಾಕಿದ ಸೈಬರ್ ಕ್ರೈಂ ಸಿಬ್ಬಂದಿ, ಬಳಿಕ ಪದೇ ಪದೆ ಕರೆ ಮಾಡುತ್ತಿರುವುದನ್ನು ಕಂಡು ಮಗುವಿನ ಮನೆಗೆ ಆಗಮಿಸಿದ್ದಾರೆ.
''ಬಾಲಕ ಕಳೆದ ಕೆಲವು ದಿನಗಳಿಂದ ಕನಿಷ್ಠ ಎಂಟು ಬಾರಿ ಸೈಬರ್ ಕ್ರೈಂ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರುವ ಮಾಹಿತಿ ಇದೆ. ಹರ್ಷಚಿತ್ತದಿಂದ ಲೈನ್‌ನಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ತನ್ನ ನೆಚ್ಚಿನ ತಿಂಡಿ ಹಾಗೂ ತಿನಿಸುಗಳನ್ನು ತಂದುಕೊಡುವಂತೆ ಕೇಳಿಕೊಂಡಿದ್ದಾನೆ. ಆರಂಭದಲ್ಲಿ ಇದನ್ನು ಬಾಲಿಶ ಹಾಗೂ ತಮಾಷೆ ಅಂತ ತಿಳಿದು ತಳ್ಳಿಹಾಕಲಾಯಿತು. ಆದರೆ, ಪದೇ ಪದೆ ಕರೆಗಳು ಬರತೊಡಗಿದ್ದರಿಂದ ಇದು ತಲೆಬಿಸಿಗೆ ಕಾರಣವಾಯಿತು'' ಎಂದು ಅಧಿಕಾರಿಯೊಬ್ಬರು ಬಾಲಕನ ಕೀಟಲೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಭಾಸ್ಕರನ್ ನೇತೃತ್ವದ ಸೈಬರ್ ಅಪರಾಧ ಘಟಕವು ಫೋನ್ ಸಂಖ್ಯೆಯನ್ನು ಪತ್ತೆಹಚ್ಚಿ ಶುಕ್ರವಾರ ಆ ಹುಡುಗನ ಮನೆಗೆ ಭೇಟಿ ನೀಡಿದೆ. ಈ ವೇಳೆ ತಾಯಿಯ ಫೋನ್ ಅನ್ನು ಆಕೆಗೆ ಗೊತ್ತಿಲ್ಲದೆ ಬಳಸಿದ್ದಲ್ಲದೇ ಅವಳಿಗೆ ತಿಳಿಯದೇ ಸೈಬರ್ ಕ್ರೈಂ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುತ್ತಿದ್ದ ಎಂಬ ಅಂಶ ಗೊತ್ತಾಗಿದೆ. ಈ ವಿಚಾರ ತಿಳಿದ ಪೊಲೀಸರು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೇ ದಿಗ್ಭ್ರಮೆ ಕೂಡ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲೇ ಮಗುವಿಗೆ ಕೌನ್ಸೆಲಿಂಗ್ ನಡೆಸಿದ ಪೊಲೀಸರು, ಪೋಷಕರಿಗೆ ಛೀಮಾರಿ ಕೂಡ ಹಾಕಿದ್ದಾರೆ. ಮಗುವಿನ ಕೈಗೆ ಫೋನ್ ಕೊಡದಂತೆ ಹಾಗೂ ಮಕ್ಕಳ ಬಗ್ಗೆ ಗಮನ ನೀಡುವಂತೆ ತಿಳಿ ಹೇಳಿ ಅಲ್ಲಿಂದ ತೆರಳಿದ್ದಾರೆ. ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ತಮಾಷೆಯಾಗಿ ಹಾಗೂ ಬಾಲಿಶತನದಿಂದ ದುರುಪಯೋಗಪಡಿಸಿಕೊಳ್ಳದಂತೆಯೂ ಸೂಚನೆ ನೀಡಿದ್ದಾರೆ.