ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿ, ಬಂಧಿಸಲ್ಪಟ್ಟ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕುರಿತು ದಿನಕ್ಕೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಜ್ಯೋತಿ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ಚಿತ್ರೀಕರಣ ಮಾಡಿದ್ದಾಳೆ. ಈ ಕುರಿತು ಪಾಕಿಸ್ತಾನ ನಿರ್ದೇಶನ ನೀಡಿತ್ತಾ?, ದೇವಾಲಯಗಳ ಮೇಲೆ ದಾಳಿ ಮಾಡಲು ಪಿತೂರಿ ನಡೆದಿದೆಯೇ? ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಜೈಬಿನಾಥ ದೇವಸ್ಥಾನಕ್ಕೆ ಭೇಟಿ: 2023ರಲ್ಲಿ ಜ್ಯೋತಿ ಬಿಹಾರದ ಸುಲ್ತಾನಗಂಜ್‌ನಲ್ಲಿರುವ ಪ್ರಸಿದ್ಧ ಅಜೈಬಿನಾಥ ದೇವಾಲಯ ಮತ್ತು ಅದರ ಹತ್ತಿರದ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ ಅದರ ವಿಡಿಯೋವನ್ನು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾಳೆ. ಅಲ್ಲದೇ, ಅಜೈಬಿನಾಥ್ ಧಾಮ್ ಬಳಿಯ ಮಸೀದಿಗೂ ಹೋಗಿದ್ದಾಳೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದರ ಹಿಂದೆ ಏನಾದರೂ ಗುಪ್ತ ಪಿತೂರಿ ಇದೆಯೇ ಎಂದು ತಿಳಿಯಲು ತನಿಖೆ ನಡೆಯುತ್ತಿದೆ. ಜ್ಯೋತಿ ಭೇಟಿ ನೀಡಿದ ಧಾರ್ಮಿಕ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜ್ಯೋತಿ ಜೊತೆ ಸಂಪರ್ಕದಲ್ಲಿದ್ದ ಇನ್ನೊಬ್ಬ ಯೂಟ್ಯೂಬರ್ ಮೇಲೂ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

ಉಜ್ಜಯಿನಿಗೆ ಭೇಟಿ ನೀಡಿದ್ದ ಜ್ಯೋತಿ: ಜ್ಯೋತಿ, ಒಂದು ವರ್ಷದ ಹಿಂದೆ ಉಜ್ಜಯಿನಿಗೆ ಭೇಟಿ ನೀಡಿದ್ದಾಳೆ. ವಿಡಿಯೋದಲ್ಲಿ ಆಕೆ ವಿಶ್ವಪ್ರಸಿದ್ಧ ಜ್ಯೋತಿರ್ಲಿಂಗ ಮಹಾಕಾಲೇಶ್ವರ ದೇವಾಲಯವನ್ನು ತೋರಿಸಿದ್ದಾಳೆ. ಇದರಲ್ಲಿ ದೇವಾಲಯದ ಮುಖ್ಯ ದ್ವಾರ ಮತ್ತು ಗರ್ಭಗುಡಿ ಕಾಣಬಹುದು. ಇದು ಮಹಾಕಾಲೇಶ್ವರ ದೇವಾಲಯದ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

"ಜ್ಯೋತಿ ಮಲ್ಹೋತ್ರಾ ಒಂದು ವರ್ಷದ ಹಿಂದೆ ಉಜ್ಜಯಿನಿಗೆ ಬಂದಿರುವ ಎಂಬ ಮಾಹಿತಿ ಇದೆ. ಈ ಪ್ರಕರಣದ ತನಿಖೆಗಾಗಿ ತಂಡವನ್ನು ರಚಿಸಿದ್ದೇವೆ. ಜ್ಯೋತಿಯನ್ನು ವಿಚಾರಣೆ ಮಾಡಲು ತಂಡ ಹೊರಡುತ್ತಿದೆ. ಉಜ್ಜಯಿನಿಯಲ್ಲಿ ಆಕೆ ಯಾರನ್ನು ಭೇಟಿಯಾದಳು ಎಂಬುದನ್ನು ವಿಚಾರಿಸಲಾಗುವುದು" ಎಂದು ಉಜ್ಜಯಿನಿ ಎಸ್ಪಿ ಪ್ರದೀಪ್ ಶರ್ಮಾ ಹೇಳಿದರು.

ಕೇದಾರನಾಥ, ಗಂಗೋತ್ರಿ, ಬದರಿನಾಥಕ್ಕೆ ಪ್ರವಾಸ: ಉತ್ತರಾಖಂಡದ ಕೇದಾರನಾಥ, ಗಂಗೋತ್ರಿ, ಬದರಿನಾಥ, ಡೆಹ್ರಾಡೂನ್, ಹರಿದ್ವಾರ ಮತ್ತು ಋಷಿಕೇಶ ಸೇರಿದಂತೆ ವಿವಿಧ ಸ್ಥಳಗಳಿಗೆ ಜ್ಯೋತಿ ಭೇಟಿ ನೀಡಿದ ವಿಡಿಯೋಗಳು ಆಕೆಯ ಯೂಟ್ಯೂಬ್‌ನಲ್ಲಿವೆ. ಈ ವಿಡಿಯೋ ಕೇದಾರನಾಥ ಧಾಮದ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಊಟ ಮತ್ತು ವಸತಿ ಬಗ್ಗೆ ವಿವರಿಸಿದೆ. ಆಕೆ ಡೆಹ್ರಾಡೂನ್‌ನಿಂದ ನೇಪಾಳಕ್ಕೂ ಪ್ರಯಾಣಿಸಿದ್ದಾಳೆ. ಈ ಎರಡು ಸ್ಥಳಗಳ ನಡುವೆ ಮೈತ್ರಿ ಬಸ್ ಸೇವೆ ಚಾಲನೆಯಲ್ಲಿರುವ ಬಗ್ಗೆ ಆಕೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ. ಈ ನಿಟ್ಟಿನಲ್ಲಿ ಉತ್ತರಾಖಂಡ ಪೊಲೀಸರು ನಿಗಾ ವಹಿಸಿದ್ದಾರೆ.

ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: ಎನ್ಐಎ, ಐಬಿಯಿಂದ ಯೂಟ್ಯೂಬರ್ ಜ್ಯೋತಿ ತೀವ್ರ ವಿಚಾರಣೆ
ಪ.ಬಂಗಾಳದ ಸೂಕ್ಷ್ಮ ಪ್ರದೇಶಗಳಿಗೂ ಭೇಟಿ ನೀಡಿದ್ಧ ಬಂಧಿತ ಜ್ಯೋತಿ!: ತನಿಖೆಯಿಂದ ಆಘಾತಕಾರಿ ಸಂಗತಿಗಳು ಬೆಳಕಿಗೆ