ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 3,880 ಕೋಟಿ ರೂ. ಮೌಲ್ಯದ 44 ಸೇವೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, ಪಿಂಡ್ರಾದಲ್ಲಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಹಲವು ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವಾರಣಾಸಿ ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ಇದೇ ವೇಳೆ, ರಾಮ್ನಗರ್ನಲ್ಲಿ ಪೊಲೀಸ್ ಲೈನ್ಸ್‌ನಲ್ಲಿ ಹಾಸ್ಟೆಲ್ ಮತ್ತು ರಾಮನಗರದ ಪೊಲೀಸ್ ಬ್ಯಾರಕ್‌ಗಳು ಮತ್ತು ನಾಲ್ಕು ಗ್ರಾಮೀಣ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿಗೆ ಗಮನ ಕೇಂದ್ರಿಕರಿಸಿ ಶಾಸ್ತ್ರಿ ಘಾಟ್ ಮತ್ತು ಸಮ್ನೆ ಘಾಟ್ನಲ್ಲಿ ಯೋಜನೆ ಸೇರಿದಂತೆ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಮತ್ತು ರೈಲ್ವೆಯಲ್ಲಿನ ವಿವಿಧ ಯೋಜನೆಗೆ ಚಾಲನೆ ನೀಡಲಿದ್ದಾರೆ.
2,250 ಕೋಟಿ ರೂ. ವೆಚ್ಚದ 25 ಯೋಜನೆಗೆ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದು, ಇದು ನಗರದ ವಿದ್ಯುತ್ ಸೌಕರ್ಯಕ್ಕೆ ಬಲ ತುಂಬಲಿದೆ. ಇದರಲ್ಲಿ 15 ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣ, ಹೊಸ ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ ಹಾಗೈ 1,500 ಕಿ.ಮೀ. ಹೊಸ ವಿದ್ಯುತ್ ಮಾರ್ಗಗಳು ಸೇರಿವೆ. ಚೌಕಘಾಟ್ ಬಳಿ ಹೊಸ 220 ಕೆವಿ ಸಬ್ಸ್ಟೇಷನ್ಗಳು ಬರಲಿದ್ದು, ಇದು 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಲಿದೆ. ನಗರದ ಹಲವೆಡೆ ಮೂರು ಹೊಸ ಫ್ಲೈಓವರ್ ನಿರ್ಮಾಣಕ್ಕೂ ಸಹ ಪ್ರಧಾನಿ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮದ ಬಳಿಕ ಅವರು ರೋಹಾನಿಯಾ ಅವರ ಮೆಹಂದಿಗಂಜ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕಗಿಂತ ಉತ್ತಮವಾದ ಹೆದ್ದಾರಿಗಳ ನಿರ್ಮಾಣ : ಕೇಂದ್ರ ಸಚಿವ ಗಡ್ಕರಿ ಪಣ
ಇದನ್ನೂ ಓದಿ: "ಸರ್ ನನಗೆ ಹಿಂದಿ ಬರಲ್ಲ": ಪ್ರಧಾನಿಗೆ ತೆಲುಗಿನಲ್ಲೇ ತನ್ನ ಯಶೋಗಾಥೆ ವಿವರಿಸಿದ AP ಮಹಿಳಾ ಉದ್ಯಮಿ