ಯಮುನಾನಗರ, ಹರಿಯಾಣ: ಪ್ರಧಾನಿ ನರೇಂದ್ರ ಮೋದಿ ಅವರ ಹರಿಯಾಣ ಭೇಟಿ ಸಂದರ್ಭದಲ್ಲಿ ಅಪರೂಪದ ಹಾಗೂ ಆಸಕ್ತಿದಾಯಕ ದೃಶ್ಯವೊಂದು ನಡೆದಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರವೇ ಶೂ ಧರಿಸುತ್ತೇನೆ ಎಂದು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದ ರಾಂಪಾಲ್ ಕಶ್ಯಪ್ ಅವರನ್ನು ಪ್ರಧಾನಿ ಭೇಟಿ ಮಾಡಿದರು. ಇವರು 14 ವರ್ಷಗಳ ಹಿಂದೆ ಮೋದಿ ಪ್ರಧಾನಿ ಆಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಹೀಗೆ ಶಪಥ ಮಾಡಿದ ಮೂರೇ ವರ್ಷಗಳಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದರು.
ಅವರು ಶಪಥ ಮಾಡಿದಂತೆ ಮೋದಿ ಪ್ರಧಾನಿಯೇನೋ ಆದರು. ಆದರೆ ಅವರದ್ದು ಇನ್ನೊಂದು ಆಸೆಯೂ ಇತ್ತು. ಅದೇನೆಂದರೆ ಮೋದಿ ಅವರನ್ನು ಖುದ್ದಾಗಿ ಭೇಟಿಯಾಗಿ ಶೂ ಧರಿಸಬೇಕು ಎಂಬ ಆಶಯ ಹೊಂದಿದ್ದರು. ಆ ಆಶಯವೂ ಸೋಮವಾರ ಈಡೇರಿದೆ. ಖುದ್ದು ಮೋದಿಯೇ ಈ ಅಭಿಮಾನಿಯನ್ನು ಭೇಟಿ ಮಾಡಿ ರಾಂಪಾಲ್ ಕಶ್ಯಪ್ ಅವರಿಗೆ ಶೂಗಳನ್ನು ಉಡುಗೊರೆ ನೀಡಿ, ಅವರಿಗೆ ಪಾದರಕ್ಷೆಗಳನ್ನು ನೀಡಿದ್ದಾರೆ.
ಅಷ್ಟೇ ಏಕೆ ಅವುಗಳನ್ನು ಹಾಕಲು ಸಹಾಯ ಮಾಡಿದರು. ಈ ವಿಡಿಯೋವನ್ನು ಪ್ರಧಾನಿ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ಟ್ವೀಟ್ ನಲ್ಲಿ ಏನಿದೆ: ’’ಇಂದು ಹರಿಯಾಣದ ಯಮುನಾನಗರದಲ್ಲಿರುವ ಕೈತಾಲ್‌ನಿಂದ ರಾಮ್‌ಪಾಲ್ ಕಶ್ಯಪ್ ಜಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 14 ವರ್ಷಗಳ ಹಿಂದೆ ‘ಮೋದಿ ಪ್ರಧಾನಿಯಾಗುವವರೆಗೂ ಶೂ ಧರಿಸುವುದಿಲ್ಲ ಮತ್ತು ಅವರನ್ನು ಭೇಟಿಯಾಗುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದರು. ಇಂದು ನಾನು ಅವರಿಗೆ ಶೂಗಳನ್ನು ಧರಿಸುವಂತೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಅಂತಹ ಎಲ್ಲಾ ಸ್ನೇಹಿತರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಅಂತಹ ಪ್ರತಿಜ್ಞೆ ಮಾಡುವ ಬದಲು ಅವರು ಏನಾದರೂ ಸಾಮಾಜಿಕ ಅಥವಾ ರಾಷ್ಟ್ರೀಯ ಕೆಲಸ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ನಾನು ಅವರನ್ನು ವಿನಂತಿಸುತ್ತೇನೆ’’ ಎಂದು ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿ ವಿಡಿಯೋ ಲಿಂಕ್ ಮಾಡಿದ್ದಾರೆ.
ನಿವೇಕೆ ಹೀಗೆ ಮಾಡಲು ಹೋದಿರಿ- ಮೋದಿ ಪ್ರಶ್ನೆ: ಪ್ರಧಾನಿ ಶೇರ್ ಮಾಡಿರುವ ವಿಡಿಯೋದಲ್ಲಿ ಕಶ್ಯಪ್ ಎಂಬ ವ್ಯಕ್ತಿ ಬಿಳಿ ಕುರ್ತಾ-ಪೈಜಾಮಾ ಧರಿಸಿ ಬರಿಗಾಲಿನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುತ್ತಿದ್ದಾರೆ. ಮೋದಿ ಅವರನ್ನು ಹಸ್ತಲಾಘವದ ಮೂಲಕ ಸ್ವಾಗತಿಸಿದರು. ಬಳಿಕ ಸೋಫಾದಲ್ಲಿ ಕುಳಿತುಕೊಂಡ ಪ್ರಧಾನಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ? ನೀವೇಕೆ ತೊಂದರೆ ತೆಗೆದುಕೊಳ್ಳಲು ಹೋದಿರಿ? ಎಂದು ಕೇಳಿದರು. ನಾನು 14 ವರ್ಷಗಳಿಂದ ಬರಿಗಾಲಿನಲ್ಲಿದ್ದೆ ಎಂದು ಕಶ್ಯಪ್ ಮೋದಿ ಅವರಿಗೆ ತಿಳಿಸಿದರು. ನಂತರ ಅವರಿಗೆ ಬೂದು ಬಣ್ಣದ ಕ್ರೀಡಾ ಶೂಗಳನ್ನು ನೀಡಿದರು. ಭವಿಷ್ಯದಲ್ಲಿ ಈ ರೀತಿ ಮಾಡಬೇಡಿ ಎಂದು ಕಶ್ಯಪ್ ಅವರಿಗೆ ಇದೇ ವೇಳೆ ಪ್ರಧಾನಿ ಸಲಹೆ ಕೂಡಾ ನೀಡಿದರು.
ಇದನ್ನು ಓದಿ: ಪಕ್ಷದ ಅಧ್ಯಕ್ಷ ಸ್ಥಾನ, 50% ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಿ: ಕಾಂಗ್ರೆಸ್ಗೆ ಪ್ರಧಾನಿ ಮೋದಿ ಸವಾಲು