ನವದೆಹಲಿ/ಗಾಜಿಯಾಬಾದ್: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ದೆಹಲಿ ಮತ್ತು ಗಾಜಿಯಾಬಾದ್ ಪೊಲೀಸರ ಜಂಟಿ ತಂಡ 24 ಗಂಟೆಗಳ ಒಳಗೆ ಬಂಧಿಸಿದೆ. ಬೆದರಿಕೆ ಬಳಿಕ ಸಿಎಂ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ದೆಹಲಿ ಸಿಎಂ ರೇಖಾ ಗುಪ್ತಾ ಅವರಿಗೆ 'ಝಡ್' ಕೆಟಗರಿ ಭದ್ರತೆಯನ್ನು ನೀಡಲಾಗಿದೆ. ಅಲ್ಲದೇ, ವಾಯುವ್ಯ ದೆಹಲಿಯಲ್ಲಿರುವ ಅವರ ಮನೆಯ ಹೊರಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಹಿಂದಿನ ಉದ್ದೇಶವೇನು ಎಂದು ತಿಳಿಯಲು ತನಿಖೆ ಸಹ ನಡೆಸಲಾಗುತ್ತಿದೆ. ಅಲ್ಲದೇ ಆತನ ಅಪರಾಧ ಇತಿಹಾಸದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ತಡರಾತ್ರಿ, ಗಾಜಿಯಾಬಾದ್ ಪೊಲೀಸ್ ಕಮಿಷನರೇಟ್ ಕೊಟ್ವಾಲಿ ಪೊಲೀಸ್ ಠಾಣೆಯ ಯುಪಿ 112 ಕಂಟ್ರೋಲ್ ರೂಂಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದ್ದನು. ಕಂಟ್ರೋಲ್ ರೂಂ ತಕ್ಷಣವೇ ದೆಹಲಿಯ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿತ್ತು. ಸುದ್ದಿ ತಿಳಿದ ಪಿಆರ್‌ವಿ, ಚೀತಾ ಮತ್ತು ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾಗ ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಫ್ ಆಗಿರುವುದು ಕಂಡುಬಂದಿತ್ತು. ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಶ್ಲೋಕ್ ತ್ರಿಪಾಠಿ ಎಂಬ ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮಾದಕ ವ್ಯಸನಿ: ಆರೋಪಿ ಗಾಜಿಯಾಬಾದ್‌ನ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಪಂಚವಟಿ ಪ್ರದೇಶದ ನಿವಾಸಿಯಾಗಿದ್ದು ನ್ಯಾಯಾಲಯದಲ್ಲಿ ಡೀಡ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕುಡಿತದ ಚಟ ಹೊಂದಿರುವ ಈತ ಆಗಾಗ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಕುಡಿದ ಮತ್ತಿನಲ್ಲಿ ಬೆದರಿಕೆ ಕರೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕರೆ ಮಾಡಿದ ಸಿಮ್ ಅನ್ನು ಗೋರಖ್‌ಪುರದ ವಿಳಾಸದಲ್ಲಿ ನೋಂದಾಯಿಸಲಾಗಿದೆ. ಪ್ರಸ್ತುತ ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ತನಿಖಾ ಸಂಸ್ಥೆಗಳು ಕರೆ ಮಾಡಿದವರ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಎಸಿಪಿ ಕೊತ್ವಾಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ ಪ್ರವಾಸದ ವೇಳೆ ಪ್ರಧಾನಿ ಮೋದಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ - THREATENING TO KILL PM MODI