ನವದೆಹಲಿ: ರಾಷ್ಟ್ರ ರಾಜಧಾನಿಯ ರೈಲು ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ಆಘಾತ ಹುಟ್ಟಿಸುವಂತಿದೆ. ನೀವೇನಾದರೂ, ಅರ್ಧಗಂಟೆ ಕಾಲ ಕಾರು, ಬೈಕ್ ಬಿಟ್ಟು ಹೋದಲ್ಲಿ ಅದಕ್ಕೆ 500 ರೂಪಾಯಿ ತೆರಬೇಕು. ಇದು ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಳಿ ಪಾರ್ಕಿಂಗ್ಗಿಂತಲೂ ದುಪ್ಪಟ್ಟು.
ಹೌದು, ಈ ಬಗ್ಗೆ ದೆಹಲಿಯ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಕ್ ಅಂಡ್ ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸುವ ಕಾರುಗಳಿಗೆ ಕೇವಲ 30 ನಿಮಿಷಕ್ಕೆ 500 ರೂಪಾಯಿ ಶುಲ್ಕ ವಿಧಿಸಲಾಗುತ್ತಿರುವುದು ವಿಪರೀತ. ಇದು ದೆಹಲಿ ವಿಮಾನ ನಿಲ್ದಾಣದ ಪಾರ್ಕಿಂಗ್ ವೆಚ್ಚಕ್ಕಿಂತ ಹೆಚ್ಚು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ್ಞಾನೇಶ್ ಶ್ರೀವಾಸ್ತವ್ ಎಂಬವರು, ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ 36 ನಿಮಿಷ ತಮ್ಮ ಕಾರನ್ನು ನಿಲ್ಲಿಸಿದ್ದಕ್ಕಾಗಿ 500 ರೂಪಾಯಿ ಪಾವತಿಸಿದ್ದೇನೆ. ಅಧಿಕ ಪ್ರಮಾಣದಲ್ಲಿ ಶುಲ್ಕ ವಿಧಿಸಿದರೆ, ಮಧ್ಯಮ ವರ್ಗದ ಕುಟುಂಬಗಳ ಗತಿ ಏನು? ಅವರ ಮೇಲೆ ಹೊರೆ ಹಾಕಬೇಡಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಜಯ್ ಯಾದವ್ ಎಂಬಾತ, ನವದೆಹಲಿ ರೈಲು ನಿಲ್ದಾಣದ ಪಿಕ್ ಅಂಡ್ ಡ್ರಾಪ್ ನಿರ್ಗಮನ ರಶೀದಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, 35 ನಿಮಿಷಕ್ಕೆ 500 ರೂಪಾಯಿ ಕಟ್ಟಿದ್ದೇನೆ. 35 ನಿಮಿಷಕ್ಕಾಗಿ 423.72 ರೂಪಾಯಿ ಶುಲ್ಕ, ಸಿಜಿಎಸ್ಟಿ 38.14 (ಶೇಕಡಾ 9) ಮತ್ತು ಎಸ್ಜಿಎಸ್ಟಿ 38.14 ರೂಪಾಯಿ (9%) ಎಂದು ಉಲ್ಲೇಖಿಸಲಾಗಿದೆ. ಇದು ಅತಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಲೂಟಿ: ಮತ್ತೊಬ್ಬ ಪ್ರಯಾಣಿಕ ರಾಹುಲ್ ಅಗರ್ವಾಲ್ ಎಂಬಾತ, ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ವಾಹನ ನಿಲ್ಲಿಸಿದ್ದಕ್ಕೆ 500 ರೂಪಾಯಿ ಪಾರ್ಕಿಂಗ್ ಶುಲ್ಕ ಪಡೆದಿದ್ದಾರೆ. ನಿಲ್ದಾಣದಲ್ಲಿ ನಿಜವಾದ ಲೂಟಿ ನಡೆಯುತ್ತಿದೆ. ರೈಲು ಸಂಚಾರಕ್ಕೂ ಇಷ್ಟು ದರ ಇರುವುದಿಲ್ಲ. ಹೊರಗಡೆ ನಿಲ್ಲಿಸಿದ ವಾಹನಕ್ಕೆ ಮಾತ್ರ ಭಾರೀ ದರವಿದೆ ಎಂದು ಕಿಡಿಕಾರಿದ್ದಾರೆ.
ಅವಿನಾಶ್ ಜೈಸ್ವಾಲ್ ಎಂಬಾತ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಪಾರ್ಕಿಂಗ್ ದರದ ರಸೀದಿಯನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರೈಲ್ವೆಯು 58 ನಿಮಿಷಗಳವರೆಗೆ 500 ರೂಪಾಯಿ, ವಿಮಾನ ನಿಲ್ದಾಣದಲ್ಲಿ ಖಾಸಗಿ ಕಾರಿಗೆ 30 ನಿಮಿಷಗಳವರೆಗೆ 150 ರೂಪಾಯಿ, 30 ನಿಮಿಷದಿಂದ ಒಂದು ಗಂಟೆಯವರೆಗೆ 220 ರೂಪಾಯಿ, ಒಂದು ಗಂಟೆಯಿಂದ ಎರಡು ಗಂಟೆಗಳವರೆಗೆ 300 ರೂಪಾಯಿ, 2 ಗಂಟೆಯಿಂದ 3 ಗಂಟೆಗಳವರೆಗೆ 400 ರೂಪಾಯಿ ಮತ್ತು ಮೂರು ಗಂಟೆಯಿಂದ ನಾಲ್ಕು ಗಂಟೆಗಳವರೆಗೆ 500 ರೂಪಾಯಿ ವಿಧಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನ ಬೆಳ್ಳಿ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆ ; ಇಂದು ಕರ್ನಾಟಕದಲ್ಲಿ ಎಷ್ಟಿದೆ ಗೊತ್ತಾ ಬಂಗಾರದ ಬೆಲೆ
ಚಿಕಿತ್ಸೆಗೆ ಆಗಮಿಸಿದ್ದ ಯುವಕ ಕೆಎಂಸಿಆರ್ಐ 3ನೇ ಮಹಡಿಯಿಂದ ಬಿದ್ದು ಸಾವು