ಚೆನ್ನೈ(ತಮಿಳುನಾಡು): ಕೊಲಂಬೊದಿಂದ ಚೆನ್ನೈಗೆ ತೆರಳುತ್ತಿದ್ದ ಶ್ರೀಲಂಕನ್ ಏರ್‌ಲೈನ್ಸ್ ವಿಮಾನದಲ್ಲಿ 45 ವರ್ಷದ ಆಂಧ್ರ ಪ್ರದೇಶದ ಪ್ರಯಾಣಿಕರೊಬ್ಬರು ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದರು.
ಹಠಾತ್ ಘಟನೆಯಿಂದ ಸಹಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾದರು. ಘಟನೆಯಿಂದ ವಿಮಾನ ಕೊಲಂಬೊಗೆ (ಶ್ರೀಲಂಕಾದ ರಾಜಧಾನಿ) ಮರಳಲು ವಿಳಂಬವಾಯಿತು.
ಜೂನ್ 21ರಂದು 168 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಶ್ರೀಲಂಕನ್ ಏರ್‌ಲೈನ್ಸ್ ವಿಮಾನದಲ್ಲಿ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಮಲ್ ಬಾಷಾ ಎಂದು ಗುರುತಿಸಲಾಗಿದೆ. ಚೆನ್ನೈಗೆ ಹೋಗುವ ಮಾರ್ಗದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸಹಪ್ರಯಾಣಿಕರು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯ ಕುರಿತು ಪೈಲಟ್‌ಗಳಿಗೆ ತಿಳಿಸಿದ್ದರು. ಪೈಲಟ್ ಚೆನ್ನೈ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ಎಟಿಸಿ) ಸಂಪರ್ಕಿಸಿ, ವಿಮಾನ ಲ್ಯಾಂಡ್ ಆದ ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸಿದ್ಧವಾಗಿದ್ದ ವೈದ್ಯಕೀಯ ತಂಡ ತಕ್ಷಣ ವಿಮಾನ ಏರಿ ಚಿಕಿತ್ಸೆ ನೀಡಿದೆ. ಆದರೆ ಅಷ್ಟರಲ್ಲಿ ಪ್ರಯಾಣಿಕ ಮೃತಪಟ್ಟಿದ್ದರು. ಹೃದಯ ಸ್ತಂಭನವೇ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ.
ವಿಮಾನ ನಿಲ್ದಾಣದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕ್ರೋಮ್‌ಪೇಟ್‌ನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಘಟನೆಯ ನಂತರ ವಿಮಾನವು ಕೊಲಂಬೊಗೆ ತನ್ನ ಹಿಂದಿರುಗುವ ಪ್ರಯಾಣವನ್ನು ಮುಂದುವರಿಸುವ ಮೊದಲು, ವಿಮಾನದೊಳಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇದರಿಂದಾಗಿ ಹಾರಾಟ ಸುಮಾರು 90 ನಿಮಿಷಗಳ ವಿಳಂಬವಾಯಿತು.
ಇದನ್ನೂ ಓದಿ: ಕಲಬುರಗಿ ನ್ಯಾಯಾಲಯದ ಆವರಣದಲ್ಲೇ ತೀವ್ರ ಹೃದಯಾಘಾತ: ನ್ಯಾಯಾಧೀಶ ವಿಶ್ವನಾಥ ಮುಗುಟಿ ವಿಧಿವಶ