ಅಹಮದಾಬಾದ್: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಭಾರತೀಯ ಕಥಕ್ ನರ್ತಕಿ ಮತ್ತು ನೃತ್ಯ ಸಂಯೋಜಕಿ ಕುಮುದಿನಿ ಲಖಿಯಾ ಅವರು ತಮ್ಮ 95ನೇ ವಯಸ್ಸಿನಲ್ಲಿ ಇಂದು ಬೆಳಗ್ಗೆ ನಿಧನರಾದರು.
ಕುಮುದಿನಿ ಲಖಿಯಾ ಅವರು 1930ರ ಮೇ 17 ರಂದು ಅಹಮದಾಬಾದ್ನಲ್ಲಿ ಜನಿಸಿದರು. ಭಾರತೀಯ ಕಥಕ್ ನರ್ತಕಿ ಹಾಗೂ ನೃತ್ಯ ಸಂಯೋಜಕಿಯಾಗಿ ಖ್ಯಾತರಾಗಿದ್ದರು. 1967 ರಲ್ಲಿ ಅಹಮದಾಬಾದ್ನಲ್ಲಿ ಕದಂಬ ನೃತ್ಯ ಮತ್ತು ಸಂಗೀತ ಶಾಲೆಯನ್ನು ಸ್ಥಾಪಿಸಿದ್ದು, ಇಂದು ಈ ಸಂಸ್ಥೆ ಭಾರತೀಯ ನೃತ್ಯ ಮತ್ತು ಸಂಗೀತಕ್ಕೆ ಮೀಸಲಾದ ಸಂಸ್ಥೆಯಾಗಿದೆ. ಕಥಕ್ ಕ್ಷೇತ್ರದಲ್ಲಿ ನವೀನ ಪ್ರಯೋಗಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕುಮುದಿನಿ ಲಖಿಯಾ ಅವರಿಗೆ 1987ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ನಂತರ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 2025 ರಲ್ಲಿ ಅಂದರೆ ಇತ್ತೀಚೆಗೆ ಕಲಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಗಿತ್ತು.
ಇದನ್ನೂ ಓದಿ: ಗಂಗಾ ನದಿಯಲ್ಲಿ ನಟ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜಿಸಿದ ಕುಟುಂಬಸ್ಥರು