ನಾಸಿಕ್, ಮಹಾರಾಷ್ಟ್ರ: ಭಾರತದಿಂದ ರಫ್ತಾಗುವ ಈರುಳ್ಳಿ ಮೇಲೆ ಶೇ.20ರಷ್ಟು ಸುಂಕ ವಿಧಿಸಲಾಗುತ್ತದೆ. ಇದರಿಂದಾಗಿ ಪಾಕಿಸ್ತಾನ ಹಾಗೂ ಚೀನಾ ಭಾರತಕ್ಕಿಂತ ಹೆಚ್ಚು ಈರುಳ್ಳಿ ರಫ್ತು ಮಾಡುತ್ತಿವೆ. ಪರಿಣಾಮ ಈರುಳ್ಳಿ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಈರುಳ್ಳಿ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕಬೇಕು ಎಂದು ಈರುಳ್ಳಿ ರಫ್ತುದಾರರ ಸಂಘ ಒತ್ತಾಯಿಸಿದೆ.
"ಭಾರತೀಯ ಈರುಳ್ಳಿ ರಫ್ತುದಾರರು ಶೇ. 20ರಷ್ಟು ರಫ್ತು ಸುಂಕ ಪಾವತಿಸಬೇಕಾಗಿದೆ. ಭಾರತದ ಈರುಳ್ಳಿಗಿಂತ ಕಡಿಮೆ ಬೆಲೆಯಿಂದಾಗಿ ಪಾಕಿಸ್ತಾನ ಮತ್ತು ಚೀನಾದಿಂದ ಹೆಚ್ಚಿನ ರಫ್ತು ಮಾಡಲಾಗುತ್ತದೆ. ಪರಿಣಾಮವಾಗಿ ಭಾರತೀಯ ರಫ್ತಿಗೆ ಬೇಡಿಕೆ ಕಡಿಮೆಯಾಗಿದೆ. ನಾಸಿಕ್ ಜಿಲ್ಲೆಯ ಮಾರುಕಟ್ಟೆ ಸಮಿತಿಗೆ ಕೆಂಪು ಈರುಳ್ಳಿ ಆಗಮನ ಗಣನೀಯವಾಗಿ ಹೆಚ್ಚಾಗಿದೆ. ಪರಿಣಾಮವಾಗಿ, ಈರುಳ್ಳಿ ಬೆಲೆ ಕುಸಿದಿದೆ. ಇದರಿಂದ ಕೃಷಿ ಸಚಿವ ಮಾಣಿಕ್ರಾವ್ ಕೊಕಟೆ ಹಾಗೂ ಕೇಂದ್ರ ಸರ್ಕಾರ ರಫ್ತು ಸುಂಕವನ್ನು ತೆಗೆದುಹಾಕಬೇಕು" ಎಂದು ಈರುಳ್ಳಿ ರಫ್ತುದಾರರ ಸಂಘದ ಉಪಾಧ್ಯಕ್ಷ ವಿಕಾಸ್ ಸಿಂಗ್ ಆಗ್ರಹಿಸಿದರು.
ದೇಶದಲ್ಲಿ ಈರುಳ್ಳಿ ಕೊರತೆ ಇದೆ ಎಂಬ ಕಾರಣ ನೀಡಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಫ್ತು ನಿಷೇಧಿಸಿತ್ತು. ರೈತರ ತೀವ್ರ ವಿರೋಧದ ನಂತರ ಅದನ್ನು ಹಿಂಪಡೆಯಲಾಯಿತು. ಆದರೆ, ವಿಧಿಸಲಾಗಿದ್ದ 20 ಶೇ. ರಫ್ತು ಸುಂಕ ಮಾತ್ರ ಇಂದಿಗೂ ಜಾರಿಯಲ್ಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೆಜಿಗೆ 15 ರಿಂದ 20 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಭಾರಿ ಪ್ರತಿಭಟನೆ ಮಾಡಿದ್ದ ರೈತರು: ಕೆಲವು ದಿನಗಳ ಹಿಂದೆ ಕ್ವಿಂಟಾಲ್‌ಗೆ 2500 ರಿಂದ 3000ಕ್ಕೆ ತಲುಪಿದ್ದ ಈರುಳ್ಳಿ, ಈಗ ಕ್ವಿಂಟಲ್‌ಗೆ 600 ರಿಂದ 1300 ರೂಪಾಯಿಗಳಿಗೆ ಇಳಿದಿದೆ. ಈ ಬೆಲೆ ರೈತರ ಉತ್ಪಾದನಾ ವೆಚ್ಚವನ್ನು ಸಹ ಭರಿಸುವುದಿಲ್ಲ. ಕೆಲವು ದಿನಗಳ ಹಿಂದೆ, ಲಸಲ್‌ಗಾಂವ್ ಮಾರುಕಟ್ಟೆ ಸಮಿತಿಯಲ್ಲಿ ರೈತರು ನೀರಿನ ಟ್ಯಾಂಕ್‌ಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದರು. ಶನಿವಾರ, ಪಿಂಪಾಲ್‌ಗಾಂವ್ ಮಾರುಕಟ್ಟೆ ಸಮಿತಿಯಲ್ಲಿಯೂ ರೈತರು ಪ್ರತಿಭಟನೆ ನಡೆಸಿದ್ದರು. ಆದ್ದರಿಂದ, ಸರ್ಕಾರವು ರಫ್ತು ಸುಂಕವನ್ನು ಶೂನ್ಯಕ್ಕೆ ಇಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
"ಮಾರುಕಟ್ಟೆ ಸಮಿತಿಗೆ ಬರುತ್ತಿರುವ ಈರುಳ್ಳಿ ಹೆಚ್ಚಾಗಿದೆ. ರಫ್ತು ಸುಂಕವನ್ನು ರದ್ದುಗೊಳಿಸಿದರೆ, ರಫ್ತು ಹೆಚ್ಚಾಗುತ್ತದೆ. ಆದ್ದರಿಂದ, ಮಾರುಕಟ್ಟೆಯಲ್ಲಿ ಕಡಿಮೆ ಈರುಳ್ಳಿ ಇದ್ದರೆ, ಬೆಲೆಗಳು ಹೆಚ್ಚಾಗುತ್ತವೆ. ಆದರೆ ನಗರ ಮತ್ತು ಉತ್ತರ ಭಾರತದ ನಾಗರಿಕರನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ರಫ್ತು ಸುಂಕವನ್ನು ಕಡಿಮೆ ಮಾಡುತ್ತಿಲ್ಲ. ಸರ್ಕಾರವು ರೈತರ ಬಗ್ಗೆ ಯೋಚಿಸಬೇಕು" ಎಂದು ಮಹಾರಾಷ್ಟ್ರ ಈರುಳ್ಳಿ ಉತ್ಪಾದಕರ ಸಂಘದ ಅಧ್ಯಕ್ಷ ಭರತ್ ದಿಘೋಲೆ ಹೇಳಿದರು.
ಕನಿಷ್ಠ 2800- 3000 ರೂ. ಖಾತರಿ ಬೆಲೆ ನೀಡಿ: ಈಟಿವಿ ಭಾರತ ಜೊತೆಗೆ ಮಾತನಾಡಿದ ಈರುಳ್ಳಿ ರೈತ ಸಮಾಧಾನ್ ಕಾಕಡ್, "ನಾನು ಹಲವಾರು ವರ್ಷಗಳಿಂದ ಲಸಲ್ಗಾಂವ್‌ನಲ್ಲಿ ಈರುಳ್ಳಿ ಕೃಷಿ ಮಾಡುತ್ತಿದ್ದೇನೆ. ಆರಂಭದಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿತ್ತು, ಆದರೆ ಕಳೆದ ಎರಡು ಅಥವಾ ಮೂರು ದಿನಗಳಲ್ಲಿ ಈರುಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಯ ಆಗಮನ ಹೆಚ್ಚಾದ ಕಾರಣ ಬೆಲೆಗಳು ಕುಸಿದಿವೆ. ಇಂದು ನನ್ನ ಈರುಳ್ಳಿಗೆ ಕ್ವಿಂಟಾಲ್‌ಗೆ ಕೇವಲ 800 ರೂ. ಬೆಲೆ ಸಿಕ್ಕಿದೆ. ಇದು ನನ್ನ ಉತ್ಪಾದನಾ ವೆಚ್ಚವನ್ನು ಸಹ ಭರಿಸುತ್ತಿಲ್ಲ. ಸರ್ಕಾರ ಈರುಳ್ಳಿಯ ಮೇಲೆ ವಿಧಿಸಿರುವ ಶೇಕಡಾ 20 ರಷ್ಟು ರಫ್ತು ಸುಂಕವನ್ನು ತಕ್ಷಣವೇ ರದ್ದುಗೊಳಿಸಬೇಕು. ನಮ್ಮ ಈರುಳ್ಳಿಗೆ 2800 ರಿಂದ 3000 ರೂ.ಗಳ ಖಾತರಿ ಬೆಲೆಯನ್ನು ನೀಡಬೇಕು. ಆಗ ಮಾತ್ರ ರೈತರು ಬದುಕುಳಿಯಬಹುದು" ಎಂದು ವಿವರಿಸಿದರು.
ಇದನ್ನೂ ಓದಿ: 10 ಕೆಜಿ ಗಾತ್ರದ ಕುಂಬಳಕಾಯಿ, 7 ಅಡಿ ಉದ್ದದ ಸೋರೆಕಾಯಿ, 8 ಅಡಿ ಉದ್ದದ ಪಾಲಕ್ಕಿ ಸೊಪ್ಪು ನೋಡಿದ್ದೀರಾ?