ಇಲ್ಲಿ ತರಬೇತಿ ಪಡೆದ ಎಲ್ಲ 30 ಬಡಮಕ್ಕಳು JEE ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿ: ಯಾವುದು ಈ ಕೇಂದ್ರ?
ಜೋಧ್‌ಪುರದ ಆಯಿಲ್ ಪ್ರಜ್ಞಾನ್ ಸೂಪರ್ 30 ಕಾರ್ಯಕ್ರಮದ ಅಡಿ ಅನೇಕ ಮಕ್ಕಳು ಐಐಟಿಗೆ ಹೋಗುವ ತಮ್ಮ ಕನಸು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


Published : April 23, 2025 at 8:27 PM IST
ಜೋಧ್‌ಪುರ, ರಾಜಸ್ಥಾನ: ಬಿಹಾರದ ಆನಂದ್ ಕುಮಾರ್ ಅವರ ಸೂಪರ್ 30 ತರಗತಿಗಳು ವಿದ್ಯಾರ್ಥಿಗಳನ್ನು ಐಐಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿವೆ ಎಂಬ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಜೋಧ್‌ಪುರದಲ್ಲಿಯೂ ಇದೇ ರೀತಿಯ ಸೂಪರ್ 30 ಸಂಸ್ಥೆ ಇದ್ದು, ಅಲ್ಲಿ ಸಮಾಜದ ಬಡ ಮತ್ತು ಹಿಂದುಳಿದ ಮಕ್ಕಳು ಐಐಟಿ ಮತ್ತು ಐಐಟಿ ಇತರ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.
ಈ ಸಂಸ್ಥೆಯು ಕೇಂದ್ರ ಸರ್ಕಾರದ ನಿಧಿಯಿಂದ ನಡೆಸಲ್ಪಡುತ್ತಿದ್ದು, ಶೇಕಡಾ 95 ರಷ್ಟು ಯಶಸ್ಸಿನ ಪ್ರಮಾಣ ಹೊಂದಿರುವುದು ಗಮನಾರ್ಹ. ಈ ಬಾರಿ ಎಲ್ಲ 30 ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಆಯಿಲ್ ಇಂಡಿಯಾ ಇಡಿ ಸಂಜಯ್ ವರ್ಮಾ ಮತ್ತು ಸಿಎಸ್ಆರ್ ಡಿಜಿಎಂ ಕೃಷ್ಣ ಹಜಿರ್ಕಾ ಅವರೆಲ್ಲರನ್ನೂ ಸನ್ಮಾನಿಸಿ ಗೌರವಿಸಿದರು. ಆಯಿಲ್ ಇಂಡಿಯಾ ಅಧಿಕಾರಿಗಳು ಎಲ್ಲಾ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.
ಐಐಟಿಯಲ್ಲಿ ಸೀಟು ಗಿಟ್ಟಿಸಿಕೊಂಡ 195 ಮಕ್ಕಳು: ಭಾರತ ಸರ್ಕಾರದ ಒಂದು ಕಾರ್ಯಯೋಜನೆಯಾದ ಸೆಂಟರ್ ಫಾರ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಅಂಡ್ ಲೀಡರ್‌ಶಿಪ್ ಆಫ್ ಆಯಿಲ್ ಇಂಡಿಯಾ ಮೂಲಕ, ಆಯಿಲ್ ಪ್ರಜ್ಞಾನ್ ಸೂಪರ್ 30 ಸೆಂಟರ್ ತೆರೆಯಲಾಗಿದೆ. ಕಳದೆ 11 ವರ್ಷಗಳಲ್ಲಿ ಇಲ್ಲಿಂದ 195 ಮಕ್ಕಳನ್ನು ಐಐಟಿಯನ್‌ಗಳನ್ನಾಗಿ ಮಾಡಲಾಗಿದೆ.
62 ಮಕ್ಕಳಿಗೆ NITಯಲ್ಲಿ ಮತ್ತು 36 ಮಕ್ಕಳಿಗೆ ದೇಶದ ಇತರ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪ್ರವೇಶ ಸಿಕ್ಕಿದೆ. ಈ ವರ್ಷವೂ ಶೇ. 100 ರಷ್ಟು ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಇಡಬ್ಲ್ಯೂಎಸ್ ವಿಭಾಗದಲ್ಲಿ ಅರ್ನವ್ ಗರ್ಗ್ ಶೇ. 99.56 ರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಕಡಿಮೆ ಸಂಪನ್ಮೂಲಗಳಲ್ಲಿ ಯಶಸ್ಸು ಸಾಧಿಸುವುದು ಹೇಗೆ?: ಅಲ್ವಾರ್‌ನ ಭಿವಾಂಡಿಯಲ್ಲಿ ವಾಸಿಸುವ ಅರ್ನಬ್ ಗರ್ಗ್ ಅವರ ತಂದೆ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ 12 ಗಂಟೆಗಳ ಕೆಲಸ ಇವರದ್ದು. ಕಳೆದ ವರ್ಷ ನಾನು ಮೇನ್ಸ್ ನಲ್ಲಿ ಯಶಸ್ವಿಯಾಗಲಿಲ್ಲ. ತನ್ನ ತಂಗಿಯೂ ಓದಬೇಕಾಗಿರುವುದರಿಂದ ತನ್ನ ತಂದೆಗೆ ದುಬಾರಿ ತರಬೇತಿ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅರ್ನಬ್ ಹೇಳಿದರು. ನನಗೆ ಆಯಿಲ್ ಇಂಡಿಯಾ ಬಗ್ಗೆ ತಿಳಿದಾಗ, ನಾನು ಪರೀಕ್ಷೆ ಬರೆದು ಇಲ್ಲಿ ಪ್ರವೇಶ ಪಡೆದುಕೊಂಡೆ. ಈ ಬಾರಿ ಅವರು ಇಡಬ್ಲ್ಯೂಎಸ್ ವಿಭಾಗದಲ್ಲಿ 99.56 ಪ್ರತಿಶತ ಅಂಕಗಳೊಂದಿಗೆ 794 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅರ್ನಬ್ ತನಗೆ ಐಐಟಿ ಸೀಟು ಸಿಗುತ್ತದೆ ಎಂದು ಹೇಳುತ್ತಿದ್ದಾರೆ
ರಾಜ್ಸಮಂದ್‌ನ ಮಾನವ್‌ನದ್ದು ಮತ್ತೊಂದು ಕಥೆ: ರಾಜ್ಸಮಂದ್‌ನ ಗಿಲುಂಡ್ ಗ್ರಾಮದ ನಿವಾಸಿ ಮಾನವ್ ರಾಯ್ಗರ್ ಅವರ ತಂದೆ ಹಳ್ಳಿಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. 12ನೇ ತರಗತಿ ಉತ್ತೀರ್ಣರಾದ ನಂತರ ನನ್ನ ಕುಟುಂಬಕ್ಕೆ ನನಗೆ ದುಬಾರಿ ತರಬೇತಿ ಕೊಡಿಸಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಜವಾಹರ್ ನವೋದಯದಲ್ಲಿ ಆಯಿಲ್ ಇಂಡಿಯಾದ ಪರೀಕ್ಷೆ ಬರೆದು ಇಲ್ಲಿ ತರಬೇತಿಗೆ ಸೇರಿ ಯಶಸ್ಸು ಪಡೆದಿದ್ದೇನೆ ಅಂತಾರೆ ಮಾನವ್
ಕೋಟಾದ ಪ್ರಿಯಾಂಶುಗೆ 977ನೇ ರ‍್ಯಾಂಕ್ : ಪ್ರಿಯಾಂಶು ಮೀನಾ ಕೋಟದ ದಿಯಾರಾ ಪಟ್ಟಣದಲ್ಲಿ ವಾಸಿಸುತ್ತಿರುವ ರೈತ ಕುಟುಂಬದಿಂದ ಬಂದವರು. ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ನಂತರ ನಾನು 12 ನೇ ತರಗತಿಯವರೆಗೆ ಓದಲು ಸಾಧ್ಯವಾಯಿತು. ಆದರೆ ಕೋಟಾದಲ್ಲಿ ಹೆಚ್ಚಿನ ತರಬೇತಿ ಪಡೆಯಲು ನನ್ನ ಬಳಿ ಹಣವಿರಲಿಲ್ಲ. ಆಗ ನಾನು ಆಯಿಲ್ ಪ್ರಜ್ಞಾನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಜೋಧ್‌ಪುರದಲ್ಲಿ ತಯಾರಿ ನಡೆಸಲು ನನಗೆ ಅವಕಾಶ ಸಿಕ್ಕಿತು. ಇದರಿಂದಾಗಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ 977 ನೇ ರ‍್ಯಾಂಕ್ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ
4 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ಕುಟುಂಬಗಳ ಮಕ್ಕಳಿಗೆ ಇಲ್ಲಿ ತರಬೇತಿ : ಆಯಿಲ್ ಇಂಡಿಯಾದ ಈ ಉಪಕ್ರಮದಡಿ ವಾರ್ಷಿಕ 4 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ಕುಟುಂಬಗಳ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಯೋಜನಾ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಈ ಬಗ್ಗೆ ಮಾತನಾಡಿ, ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೂಪರ್ 30 ಗೆ ಆಯ್ಕೆಯಾದ 30 ಮಕ್ಕಳನ್ನು ಜೋಧ್‌ಪುರದಲ್ಲಿ ಇರಿಸಿ ತರಬೇತಿ ನೀಡಲಾಗುತ್ತದೆ. ಈ ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಆಯಿಲ್ ಇಂಡಿಯಾ ಕಂಪನಿ ಭರಿಸುತ್ತದೆ ಎಂದು ತಿಳಿಸಿದ್ದಾರೆ.

