ಕಲಾಂ ಪ್ರೇರಣೆ: ಬರ ಪೀಡಿತ ಪ್ರದೇಶಗಳಲ್ಲಿ ಕೃಷಿ ಕ್ರಾಂತಿ ಮಾಡಿದ ರೈತ ಮಹಿಳೆ; ಆರೋಗ್ಯ ರಾಷ್ಟ್ರ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ 'ನಿಧಿ'
ಅಬ್ದುಲ್ ಕಲಾಂ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಆದರ್ಶಗಳು ಇನ್ನೂ ಜೀವಂತವಾಗಿವೆ ಅನ್ನೋದಕ್ಕೆ ಉತ್ತರ ಪ್ರದೇಶದ ರೈತ ಮಹಿಳೆ ನಿಧಿ ತ್ರಿಪಾಠಿ ಎಂಬುವರು ಸಾಕ್ಷಿಯಾಗಿದ್ದಾರೆ.

Published : October 9, 2025 at 5:03 PM IST
ಲಖನೌ, ಉತ್ತರಪ್ರದೇಶ: ಭಾರತದ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶ ಹಾಗೂ ಭಾಷಣದಿಂದ ಪ್ರೇರಣೆಗೊಂಡ ಮಹಿಳೆಯೊಬ್ಬಳು, ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ನಿಧಿ ತ್ರಿಪಾಠಿ ಸಾಧನೆ ಮಾಡಿದ ಮಹಿಳೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಸಾಮಾನ್ಯ ರೈತನ ಮಗಳಾದ ನಿಧಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ದೂರವಿಟ್ಟು ಸಾವಯವ ಕೃಷಿಯಲ್ಲಿ ತಮ್ಮದೇಯಾದ ಕೃಷಿ ಪ್ರಪಂಚ ಸೃಷ್ಟಿಸುವ ಮೂಲಕ ಇದೀಗ ಗಮನ ಸೆಳೆಯುತ್ತಿದ್ದಾರೆ. 'ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು' ಎಂಬ ಗಾದೆ ಮಾತಿಗೆ ನಿಧಿ ತ್ರಿಪಾಠಿ ಗುಣವಾಚಕ ಎಂದರೂ ತಪ್ಪಾಗಲಾರದು.
ಕಲಾಂ ಅವರ ಭಾಷಣಗಳನ್ನು ಕೇಳಿದ ಬಳಿಕ ಅನೇಕರು ಪ್ರಬುದ್ಧರಾಗಿರುವ ಸಾಕಷ್ಟು ಉದಾಹರಣೆಗಳಿವೆ. ಹಲವರು ತಮ್ಮ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವುದರ ಜೊತೆಗೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ತಾನೂ ಕೂಡ ಒಬ್ಬಳು ಎಂದು ಹೇಳಿಕೊಂಡಿರುವ ನಿಧಿ, ಸಾಮಾನ್ಯರಂತೆ ಜೀವನ ದೂಡುತ್ತಿದ್ದ ತಾನು ರೈತರಾಗಿದ್ದು ಏಕೆ?. ಕಲಾಂ ಅವರ ಭಾಷಣದ ಯಾವ ಅಂಶವು ತಮ್ಮನ್ನು ಗಾಢವಾಗಿ ಯೋಚಿಸುವಂತೆ ಮಾಡಿದವು?. ಇತ್ತೀಚೆಗೆ ತಮಗೆ 'ಸಂತ ಈಶ್ವರ ಸಮ್ಮಾನ್' ಪ್ರಶಸ್ತಿಯನ್ನು ಏಕೆ ನೀಡಲಾಯಿತು?. ಬರ ಪೀಡಿತ ಪ್ರದೇಶಗಳಲ್ಲಿ ರೈತರ ಅಭಿವೃದ್ಧಿಗಾಗಿ ತಾವು ಮಾಡಿದ ಕಾಯಕ ಏನು?. ಈ ಎಲ್ಲ ಪ್ರಶ್ನೆಗಳಿಗೆ ಅವರೇ ಈಟಿವಿ ಭಾರತಕ್ಕೆ ಉತ್ತರಿಸಿದ್ದಾರೆ.

ಯೋಚಿಸುವಂತೆ ಮಾಡಿದ ಕಲಾಂ ಪ್ರಶ್ನೆ: ಕೆಲವು ವರ್ಷಗಳ ಹಿಂದೆ, ಅಬ್ದುಲ್ ಕಲಾಂ ಅವರು ಇಲ್ಲಿಯ ಒಂದು ಸಮ್ಮೇಳನದಲ್ಲಿ ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಹಳ ಭಾವುಕರಾಗಿ ಮಾತನಾಡುತ್ತಿದ್ದ ಆ ಸಮ್ಮೇಳನದಲ್ಲಿ ಗಮನವಿಟ್ಟು ಕೇಳುತ್ತಿದ್ದವರಲ್ಲಿ ನಾನೂ ಕೂಡ ಇದ್ದೆ. ಈ ವೇಳೆ ಕಲಾಂ ಮಾತನಾಡುತ್ತಾ, ''ನಿಮ್ಮಲ್ಲಿ ಎಷ್ಟು ಮಂದಿ ರೈತರಾಗಲು ಬಯಸುತ್ತೀರಿ?'' ಎಂದು ಸಭಿಕರಲ್ಲಿ ಒಂದು ಪ್ರಶ್ನೆ ಹಾಕಿದರು. ಕಲಾಂ ಅವರ ಪ್ರಶ್ನೆಗೆ ಯಾರೂ ಕೈ ಎತ್ತಲಿಲ್ಲ. ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತು. ಕೃಷಿಯೇ ಪ್ರಧಾನವಾಗಿರುವ ಈ ದೇಶದಲ್ಲಿ ಯಾರೂ ರೈತರಾಗಲು ಬಯಸದಿರುವುದು ತುಂಬಾ ದುರದೃಷ್ಟಕರ ಎಂದೆನಿಸಿತು. ಆ ದಿನವೇ ನಾನು ಪ್ರತಿಜ್ಞೆ ಮಾಡಿದೆ. ಎಷ್ಟೇ ಕಷ್ಟವಾದರೂ ಸರಿ, ಕೃಷಿ ಮಾಡಿ ರೈತನಾಗಲು ನಿರ್ಧರಿಸಿದೆ ಎಂದು ನಿಧಿ ತ್ರಿಪಾಠಿ ತಮ್ಮ ಕೃಷಿ ಆಗಮನದ ಬಗ್ಗೆ ಹೇಳಿಕೊಂಡಿದ್ದಾರೆ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ವಿದಾಯ: ನನ್ನ ತಂದೆ ಕೂಡ ರೈತರು. ಕೃಷಿ ಉದ್ದೇಶಗಳಿಗಾಗಿ ಅವರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದರು. ಆದರೆ, ಏಳು ವರ್ಷಗಳ ಹಿಂದೆ (2018) ನಾನು ಹೊಲಕ್ಕೆ ಕಾಲಿಟ್ಟಾಗ ಎಲ್ಲವೂ ಬದಲಾಯಿತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ವಿದಾಯ ಹೇಳಲಾಯಿತು. ಬದಲಾಗಿ ಹಸುವಿನ ಸಗಣಿ, ಮಲ ಜೊತೆಗೆ ಕೆಟ್ಟ ಹಣ್ಣು, ತರಕಾರಿ ಮತ್ತು ಆಹಾರ ತ್ಯಾಜ್ಯದಿಂದ ಸಾವಯವ ಗೊಬ್ಬರಗಳನ್ನು ತಯಾರಿಸಲು ಶುರು ಮಾಡಿದೆವು. ಇದರೊಂದಿಗೆ ಜೈವಿಕ ಗೊಬ್ಬರಗಳ ಬಳಕೆಗೂ ಆದ್ಯತೆ ನೀಡಿದೆವು. ಸಾವಯವ ಕೃಷಿಯತ್ತ ಹೆಚ್ಚು ಆಸಕ್ತಿ ಬೆಳೆಯಿತು. ಅಲ್ಲಿ - ಇಲ್ಲಿ ಕೇಳಿ ತಿಳಿದು ಕಲಿತುಕೊಂಡೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಗ್ಗೆ ಓದಿಕೊಂಡೆ. ಜಾನುವಾರುಗಳಿಗೆ ನೀಡುವ ಆಹಾರವು ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ದೇಶದ ಜನರು ಕೂಡ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಮುಕ್ತವಾದ ಶುದ್ಧ ಆಹಾರವನ್ನು ಬಯಸುತ್ತಿದ್ದು, ರೈತರು ಅಂತಹ ಶುದ್ಧ ಆಹಾರವನ್ನು ಒದಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಂಡೆ. ಅದಕ್ಕಾಗಿ ನಾನೇ ಸ್ವತಃ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಬೆಳೆಗಳನ್ನು ಬೆಳೆಯಲು ಶುರು ಮಾಡಿದೆ. ಅದರಲ್ಲಿ ಯಶ್ವಸಿ ಕೂಡ ಆದೆ. ತಮ್ಮ ಜಮೀನಿನಲ್ಲಿ ವಿವಿಧ ಧಾನ್ಯಗಳು, ಮೆಣಸಿನಕಾಯಿಗಳು, ಅರಿಶಿನ, ಕೊತ್ತಂಬರಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಆಲೂಗಡ್ಡೆ ಸೇರಿದಂತೆ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದಿರುವೆ. ಮಣ್ಣಿನ ಫಲವತ್ತತೆ ಹಿನ್ನೆಲೆ ಪ್ರತಿ ವರ್ಷ ಬೆಳೆ ಸರದಿ ಪದ್ಧತಿಯ ಪ್ರಕಾರ ಬೆಳೆಗಳನ್ನು ಬದಲಾಯಿಸುತ್ತಿರುವೆ ಎಂದು ನಿಧಿ ಹೇಳಿಕೊಂಡಿದ್ದಾರೆ.

'ಅವು ಸ್ಥಿರ ಠೇವಣಿಗಳಂತೆ': ಮೊದಲ ಎರಡ್ಮೂರು ವರ್ಷಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿತ್ತು. ಆದರೆ, ನಾಲ್ಕನೇ ವರ್ಷದಿಂದ ಇಳುವರಿ ಹೆಚ್ಚಾಯಿತು. ಮೊದಲ ಮೂರು ವರ್ಷಗಳಲ್ಲಿನ ನರ್ಷವನ್ನು ನಾಲ್ಕನೇ ವರ್ಷಕ್ಕೆ ತೆಗೆದುಬಿಟ್ಟೆ. ಅಲ್ಲಿಂದ ಕ್ರಮೇಣ ಇಳುವರಿಯ ಜೊತೆಗೆ ಆದಾಯ ಕೂಡ ಹೆಚ್ಚಾಗುತ್ತಿದೆ. ಇದರ ತಮ್ಮ ಜಮೀನಿನ ಗಡಿಗಳಲ್ಲಿ ನೀಲಗಿರಿ ಮತ್ತು ರೋಸ್‌ವುಡ್ ನೆಟ್ಟಿದ್ದು, ನೆಟ್ಟ ಐದಾರು ವರ್ಷಗಳಲ್ಲಿ ಇವು ಕೂಡ ಉತ್ತಮ ಆದಾಯ ತಂದು ಕೊಡುತ್ತಿವೆ. ಮಾರುಕಟ್ಟೆಯಲ್ಲಿ ಈ ಮರಕ್ಕೆ ಭಾರಿ ಬೆಲೆ ಇದೆ. ನಾವು ಬ್ಯಾಂಕುಗಳಲ್ಲಿ 5 -10 ವರ್ಷಗಳಲ್ಲಿ ಇಡುವ ಸ್ಥಿರ ಠೇವಣಿ ಎಷ್ಟು ಪ್ರಮಾಣದ ಲಾಭ ನೀಡುತ್ತವೆಯೋ ಈ ಮರಗಳು ರೈತರಿಗೆ ಅದಕ್ಕಿಂತ ಹೆಚ್ಚಿನ ಲಾಭ ನೀಡುತ್ತವೆ ಎನ್ನುತ್ತಾರೆ ನಿಧಿ.

ಜಲ ಕ್ರಾಂತಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಡಿಕೊಂಡಿರುವ ಬುಂದೇಲ್‌ಖಂಡ್ ಬರಗಾಲ ಪೀಡಿತಕ್ಕೆ ಹೆಸರುವಾಸಿ. ಇಲ್ಲಿ ನೀರಿನ ಲಭ್ಯತೆ ತುಂಬಾ ಕಡಿಮೆ. ನೀರಿನ ಸಮಸ್ಯೆ ನಿವಾರಿಸಲೆಂದೇ ನಮ್ಮ ಹೊಲದಲ್ಲಿ ಒಂದು ಬೃಹತ್ ಕೊಳ ತೋಡಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಭರ್ತಿಯಾಗುವ ಈ ಕೊಳದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಯಿತು. ನನ್ನನ್ನು ನೋಡಿ 1100ಕ್ಕೂ ಹೆಚ್ಚು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಣ್ಣ ಕೊಳಗಳನ್ನು ತೋಡಿದರು. ಇದೊಂದು ರೀತಿ ಕ್ರಾಂತಿ ಅಂದರೂ ತಪ್ಪಿಲ್ಲ. ಮೊದಲಿದ್ದ ನೀರಿನ ಸಮಸ್ಯೆ ಈಗಿಲ್ಲ. ಅಲ್ಲದೇ ನಾನು ಕಂಡ ಸಾವಯವ ಕೃಷಿ ಮತ್ತು ಬೆಳೆ ಸರದಿ ವಿಧಾನಗಳನ್ನು ಎಷ್ಟೋ ರೈತರು ಅನುಸರಿಸುವ ಮೂಲಕ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಳೆದ ಏಳು ವರ್ಷಗಳಲ್ಲಿ 1,225 ರೈತರು ಸಾವಯವ ಕೃಷಿಯತ್ತ ವಾಲಿದ್ದಾರೆ. ಮಣ್ಣಿನ ಫಲವತ್ತತೆ ಹೆಚ್ಚಾದಂತೆ, ಬೆಳೆಯ ಇಳುವರಿಯೂ ಹೆಚ್ಚಾಗುತ್ತದೆ ಎಂಬುದನ್ನು ಗುರುತಿಸಿಕೊಂಡಿರುವ ರೈತರು, ಬೆಳೆ ಸರದಿ ವಿಧಾನಗಳನ್ನು ಅನುಸರಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ರೈತರಿಗೆ ಈ ಮಾರ್ಗವೇ ಸರಿ. ಇದನ್ನೇ ಅನುಸರಿಸುವಂತೆ 100ಕ್ಕೂ ಹೆಚ್ಚು ರೈತರಿಗೆ ರಾಸಾಯನಿಕ ಮುಕ್ತ, ಸುಸ್ಥಿರ ಕೃಷಿಯ ಕುರಿತು ತರಬೇತಿ ಸಹ ನೀಡಿರುವೆ ಎಂದು ನಿಧಿ ತ್ರಿಪಾಟಿ ತಮ್ಮ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಗ್ರಾಮೀಣ ಮಹಿಳೆಯರಿಗೆ ಉಚಿತ ವೈದ್ಯಕೀಯ ಶಿಬಿರ: ನಿಧಿ ತ್ರಿಪಾಠಿ ಗ್ರಾಮೀಣ ಮಹಿಳೆಯರಿಗಾಗಿ 25 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದು, ಈ ಶಿಬಿರಗಳ ಮೂಲಕ ನೂರಾರು ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಸೇವೆಯನ್ನು ಗುರುತಿಸಿ ನಿಧಿ ತ್ರಿಪಾಠಿಗೆ ಕಳೆದ ಭಾನುವಾರ (ಅಕ್ಟೋಬರ್ 5)'ಸಂತ ಈಶ್ವರ ಸಮ್ಮಾನ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಆರೋಗ್ಯಕರ ಆಹಾರಕ್ಕಾಗಿ ಸಾವಯವ ಕೃಷಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದ, ಜನರಲ್ಲಿ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯಕರ ಆಹಾರದ ವಿಷಯಗಳ ಕುರಿತು ಸಾಕಷ್ಟು ತಿಳುವಳಿಕೆ ಬಂದಿದೆ. ಇವುಗಳಿಗೆ ಆದ್ಯತೆ ನೀಡುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ಒದಗಿಸುವ ಆಹಾರವನ್ನು ಬೆಳೆಸಬೇಕಾದವರು ರೈತರು. ಹಾಗಾಗಿ ರೈತರು ತಮ್ಮ ದಿಕ್ಕನ್ನು ಬದಲಿಸಿಕೊಳ್ಳಬೇಕಿದೆ. ಉತ್ತಮ ಆಹಾರವನ್ನು ನೀಡುವವರು ರೈತರು. ಸಾವಯವ ಕೃಷಿ ಮೂಲಕ ಆರೋಗ್ಯ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ಇಲ್ಲದಿದ್ದರೆ, ದೇಶದ ಜನರಿಗೆ ಅವರು ಬಯಸುವ ಆರೋಗ್ಯಕರ ಆಹಾರ ಸಿಗುವುದು ಕಷ್ಟಸಾಧ್ಯ. ಅದಕ್ಕಾಗಿಯೇ ನಾನು ಸಾವಯವ ಕೃಷಿ ವಿಧಾನಗಳ ಬಗ್ಗೆ ಅಷ್ಟು ಒತ್ತು ಕೊಟ್ಟಿರುವೆ. ಅನೇಕ ರೈತರನ್ನು ಆ ದಿಕ್ಕಿನಲ್ಲಿ ಕರೆತಂದ ಖುಷಿ ನನಗಿದೆ. ದೇಶದ ಜನರಿಗೆ ಶುದ್ಧ ಆಹಾರವನ್ನು ಒದಗಿಸುವ ನನ್ನ ಧ್ಯೇಯವು ಬುಂದೇಲ್ಖಂಡ್ನಲ್ಲಿ ಯಶಸ್ವಿಯಾಗಿದೆ. ಇದನ್ನು ದೇಶಾದ್ಯಂತ ರೈತರಿಗೆ ತಲುಪಿಸಬೇಕು ಎನ್ನುತ್ತಾರೆ ನಿಧಿ ತ್ರಿಪಾಠಿ.

