ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಅಮೆರಿಕದಿಂದ ಕರೆತರಲಾದ ತಹವ್ವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ. ಭಯೋತ್ಪಾದಕ ದಾಳಿಯನ್ನು ಯೋಜಿಸಲು ಸಹಾಯ ಮಾಡಿದವರ ವಿವರಗಳನ್ನು ರಾಣಾನಿಂದ ಬಾಯ್ಬಿಡಿಸುತ್ತಿದ್ದಾರೆ.
ದೊಡ್ಡ ಪ್ರಮಾಣದ ದಾಳಿಗೆ ಯೋಜನೆ ರಚನೆಯಾಗಿದ್ದು ಹೇಗೆ?, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಇದರ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದ್ದಾನಾ? ಇದ್ದರೆ, ದಾವೂದ್ ಮತ್ತು ರಾಣಾಗೂ ಸಂಬಂಧವಿದೆಯೇ? ಎಂಬ ಎಲ್ಲ ಕೋನಗಳಲ್ಲೂ ತನಿಖೆ ನಡೆಯುತ್ತಿದೆ.
2006ರಲ್ಲಿ ಮುಂಬೈಗೆ ಉಗ್ರ ಡೇವಿಡ್ ಹೆಡ್ಲಿ ಬಂದಾಗ ಆತನನ್ನು ನಿಗೂಢ ವ್ಯಕ್ತಿಯೊಬ್ಬ ಬರಮಾಡಿಕೊಂಡಿದ್ದ. ದುಬೈ ಮೂಲದ ಆ ವ್ಯಕ್ತಿಗೆ ದಾಳಿಯ ಯೋಜನೆಗಳ ಬಗ್ಗೆ ಮೊದಲೇ ತಿಳಿದಿತ್ತು ಎಂದು ಎನ್ಐಎ ಶಂಕಿಸಿದೆ. ಆ ನಿಗೂಢ ವ್ಯಕ್ತಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಏನಾದರೂ ಸಂಪರ್ಕವಿದೆಯೇ?. ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಮತ್ತು ಲಷ್ಕರ್-ಎ- ತೊಯ್ಬಾ ಜೊತೆ ರಾಣಾಗೆ ಇರುವ ಸಂಪರ್ಕದ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.
ಹೆಡ್ಲಿ, ರಾಣಾ ಫೋನ್ ಕರೆಗಳ ವಿಚಾರಣೆ: ಮುಂಬೈ ದಾಳಿಯ ಪ್ರಮುಖ ಸಂಚುಕೋರರಾದ ತಹವ್ವುರ್ ರಾಣಾ ಮತ್ತು ಡೇವಿಡ್ ಹೆಡ್ಲಿ ನಡುವಿನ ಫೋನ್ ಕರೆಗಳನ್ನು ಎನ್ಐಎ ಪರಿಶೀಲಿಸುತ್ತಿದೆ. ಇಬ್ಬರು ದೂರವಾಣಿಯ ಮೂಲಕ ಸಂಪರ್ಕ ಸಾಧಿಸಿದ್ದರೇ?, ಅವರ ನಡುವಿನ ಸಂಭಾಷಣೆಗಳೇನು ಎಂಬ ವಿವರಗಳನ್ನು ಹೆಕ್ಕಿ ತೆಗೆಯಲಾಗುತ್ತಿದೆ. ಶಂಕಿತರ ಚಟುವಟಿಕೆಗಳು ಮತ್ತು ದಾಳಿಯ ಹಿಂದಿನ ವ್ಯಕ್ತಿಗಳನ್ನು ಪತ್ತೆ ಮಾಡಲು ಇದು ಉಪಯುಕ್ತ ಅಂಶವಾಗಿದೆ.
ರಾಣಾ ಧ್ವನಿ ಮಾದರಿ ಸಂಗ್ರಹ: ವಿಚಾರಣೆಯ ಭಾಗವಾಗಿ, ರಾಣಾನ ಧ್ವನಿ ಮಾದರಿಯನ್ನು ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯ ಸಮಯದಲ್ಲಿ ಆತ ಇತರರೊಂದಿಗೆ ಮಾತನಾಡಿದ್ದಾರೆ ಎಂದು ಶಂಕಿಸಲಾಗಿರುವ ಹಲವಾರು ಕರೆ ದಾಖಲೆಗಳನ್ನು ದೃಢೀಕರಿಸಲು ಈ ಮಾದರಿಯ ಪರೀಕ್ಷೆ ನಡೆಸಲಾಗುತ್ತಿದೆ. ಆದಾಗ್ಯೂ, ಧ್ವನಿ ಮಾದರಿಗೆ ಆರೋಪಿಯ ಅನುಮತಿಯೂ ಅಗತ್ಯವಾಗಿರುತ್ತದೆ. ಆತ ನಿರಾಕರಿಸಿದರೆ, ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನ್ಯಾಯಾಲಯ ಒಪ್ಪಿಗೆ ನೀಡಿದ ನಂತರ ಅವರ ಧ್ವನಿಯನ್ನು ರೆಕಾರ್ಡ್ ಮಾಡಬಹುದು.
ದಾಳಿಯಲ್ಲಿ ರಾಣಾ ವಿರುದ್ಧ ಸಾಕಷ್ಟು ಪುರಾವೆ: ಬಂಧಿತನಾಗಿರುವ ತಹವ್ವುರ್ ರಾಣಾ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು NIA ನ್ಯಾಯಾಲಯಕ್ಕೆ ಹೇಳಿದೆ. ಈ ದಾಳಿಯ ಹಿಂದಿನ ಪಿತೂರಿಯನ್ನು ಬಯಲು ಮಾಡಲು ರಾಣಾನ ಕಸ್ಟಡಿ ವಿಚಾರಣೆ ಅಗತ್ಯ ಎಂದು ಹೇಳಿತ್ತು. ರಾಣಾನನ್ನು 18 ದಿನಗಳ ಕಸ್ಟಡಿಗೆ ನೀಡಿ ಎನ್ಐಎ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್‌ಜಿತ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮುಂಬೈ ದಾಳಿ ಮಾಸ್ಟರ್‌ಮೈಂಡ್ ತಹವ್ವುರ್ ರಾಣಾ 18 ದಿನಗಳ ಕಾಲ NIA ಕಸ್ಟಡಿಗೆ
26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವುರ್ ರಾಣಾ ಭಾರತಕ್ಕೆ: ಎನ್‌ಐಎ ಘೋಷಣೆ