ಭಾರತವು ಅನೇಕ ಭಾಷೆಗಳು ಮತ್ತು ಲಿಪಿಗಳನ್ನು ಹೊಂದಿರುವ ಶ್ರೀಮಂತ ದೇಶವಾಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ. ಅದರಲ್ಲೂ ಹಿಂದಿ ಭಾಷೆಯನ್ನು ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಮಾತನಾಡಲಾಗುತ್ತದೆ. ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರೆತಿಲ್ಲವಾದರೂ, ಅಧಿಕೃತ ಭಾಷೆಯಾಗಿ ಹಿಂದಿಗೆ ವಿಶೇಷ ಸ್ಥಾನ ನೀಡಲಾಗಿದೆ.
ಹಿಂದಿ ಭಾಷೆ ಭಾರತೀಯರನ್ನು ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸುತ್ತದೆ. ಹಿಂದಿ ಭಾರತದ ಅಸ್ಮಿತೆ ಮತ್ತು ಹೆಮ್ಮೆ ಎರಡೂ ಆಗಿದೆ. ಹಿಂದಿ ಭಾಷೆಯನ್ನು ಬಳಸುವ ಮೂಲಕ ವಿಶ್ವದ ಎಲ್ಲಾ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸಲು ಪ್ರತಿವರ್ಷ ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ.
ಹಿಂದಿ ದಿನ ಆಚರಿಸುವ ಇತಿಹಾಸ: ಹಿಂದಿ ದಿವಸ್ ಆಚರಣೆಯು ಅಧಿಕೃತವಾಗಿ ಸೆಪ್ಟೆಂಬರ್ 14, 1953 ರಂದು ಪ್ರಾರಂಭವಾಯಿತು. 1953 ರಲ್ಲಿ, ಪಂಡಿತ್ ಜವಾಹರಲಾಲ್ ನೆಹರು ಅವರು ಭಾರತದ ಪ್ರಧಾನ ಮಂತ್ರಿಯಾಗಿ ಸೆಪ್ಟೆಂಬರ್ 14 ಅನ್ನು ರಾಷ್ಟ್ರೀಯ ಹಿಂದಿ ದಿನವಾಗಿ ಆಚರಿಸುವಂತೆ ಕರೆ ನೀಡಿದರು.
ಅಂದಿನಿಂದ, ಪ್ರತಿವರ್ಷ ಈ ದಿನದಂದು ರಾಷ್ಟ್ರೀಯ ಹಿಂದಿ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಭಾಷಾ ಪ್ರಚಾರ ಸಮಿತಿಯ ಶಿಫಾರಸಿನ ನಂತರ, 1953 ರ ಸೆಪ್ಟೆಂಬರ್ 14 ರಿಂದ ಹಿಂದಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ವಿಶ್ವ ಹಿಂದಿ ದಿನವನ್ನು ಜನವರಿ 10 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ವರ್ಷಕ್ಕೆ ಎರಡು ಬಾರಿ ಹಿಂದಿ ದಿನ ಆಚರಿಸಲಾಗುತ್ತದೆ.
ಅತಿ ಹೆಚ್ಚು ಮಾತನಾಡುವ ಭಾಷೆ: ಈಗ ಹಿಂದಿ ವಿಶ್ವದಲ್ಲೇ ಹೆಚ್ಚು ಮಾತನಾಡುವ ಭಾಷೆಯಾಗಿದೆ ಎಂದು ಡೆಹ್ರಾಡೂನ್ನ ಗ್ಲೋಬಲ್ ಹಿಂದಿ ರಿಸರ್ಚ್ ಇನ್ ಸ್ಟಿಟ್ಯೂಟ್ನ 2023ರ ಸಂಶೋಧನಾ ವರದಿಯ 19ನೇ ಆವೃತ್ತಿಯಲ್ಲಿ ತಿಳಿಸಲಾಗಿದೆ. ಈ ಸಂಶೋಧನೆಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು, ಇದನ್ನು 31 ಹಂತಗಳಲ್ಲಿ ಪರಿಶೀಲಿಸಲಾಯಿತು. ಈ ಸಂಶೋಧನೆಯ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರು ವ್ಯಾಪಕವಾಗಿ ಚರ್ಚಿಸಿದರು. ಅಲ್ಲದೆ ಈ ಉದ್ದೇಶಕ್ಕಾಗಿ ಆಯೋಜಿಸಲಾದ ವಿಶೇಷ ಸೆಮಿನಾರ್ಗಳಲ್ಲಿ ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಲಾಯಿತು ಮತ್ತು ಅದರ ಸತ್ಯಾಸತ್ಯತೆಯನ್ನು ಭಾಷಾ ತಜ್ಞರು ದೃಢಪಡಿಸಿದರು. ಈ ವಿಷಯದಲ್ಲಿ ಭಾಷಾಶಾಸ್ತ್ರಜ್ಞರು ಮತ್ತು ಹಿಂದಿ ವಿದ್ವಾಂಸರ ಅಭಿಪ್ರಾಯಗಳನ್ನು ಕೋರಲಾಯಿತು. ಈ ಆಧಾರದ ಮೇಲೆ, ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಎಲ್ಲ ಸರ್ಕಾರಿ ಬ್ಯಾಂಕುಗಳು, ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಸಂಶೋಧನಾ ವರದಿಯನ್ನು ಎಲ್ಲಾ ಹಿಂದಿ ಕಾರ್ಯಾಗಾರಗಳು, ಸೆಮಿನಾರ್ಗಳಲ್ಲಿ ಕಡ್ಡಾಯವಾಗಿ ಕಲಿಸಬೇಕು ಮತ್ತು ಅದನ್ನು ಅವರ ಹೌಸ್ ಜರ್ನಲ್ಗಳಲ್ಲಿ ಪ್ರಕಟಿಸಬೇಕು ಎಂದು ಸೂಚನೆಗಳನ್ನು ನೀಡಿತ್ತು.
ಎಥ್ನೋಲಾಗ್ನಲ್ಲಿ ಹಿಂದಿ ಶ್ರೇಯಾಂಕ: ಅಮೆರಿಕದ ಪ್ರತಿಷ್ಠಿತ ಎಥ್ನೋಲಾಗ್ ಹೆಸರಿನ ಸಂಸ್ಥೆಯು ವಿಶ್ವದ ಭಾಷೆಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. ಮಾತನಾಡುವ ಅಥವಾ ತಿಳಿದಿರುವ ಜನರ ಸಂಖ್ಯೆಯ ದೃಷ್ಟಿಯಿಂದ ಹಿಂದಿ ವಿಶ್ವದ ಮೂರನೇ ಅತಿದೊಡ್ಡ ಭಾಷೆಯಾಗಿದೆ ಎಂದು ಎಥ್ನೋಲಾಗ್ ಹೇಳಿದೆ.
ಹಿಂದಿ ಪರ್ಷಿಯನ್ ಪದ ಹಿಂದ್ನಿಂದ ಬಂದಿದೆ: ಹಿಂದಿ ಎಂಬ ಹೆಸರು ಪರ್ಷಿಯನ್ ಪದ ಹಿಂದ್ನಿಂದ ಬಂದಿದೆ. ಇದರರ್ಥ ಸಿಂಧೂ ನದಿಯ ಭೂಮಿ. 11 ನೇ ಶತಮಾನದ ಆರಂಭದಲ್ಲಿ ಗಂಗಾ ನದಿಯ ಬಯಲು ಮತ್ತು ಪಂಜಾಬ್ ಮೇಲೆ ಆಕ್ರಮಣ ಮಾಡಿದ ಪರ್ಷಿಯನ್ ಮಾತನಾಡುವ ಟರ್ಕರು ಸಿಂಧೂ ನದಿಯ ಉದ್ದಕ್ಕೂ ಮಾತನಾಡುವ ಭಾಷೆಗೆ ಹಿಂದಿ ಎಂಬ ಹೆಸರನ್ನು ನೀಡಿದರು. ಈ ಭಾಷೆ ಭಾರತದ ಅಧಿಕೃತ ಭಾಷೆಯಾಗಿದೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮಾನ್ಯತೆ ಪಡೆದ ಅಲ್ಪಸಂಖ್ಯಾತ ಭಾಷೆಯಾಗಿದೆ.
ಹಿಂದಿ ಭಾಷೆಯನ್ನು ಉತ್ತೇಜಿಸಲು ಸರ್ಕಾರದ ಉಪಕ್ರಮಗಳು: ಹಿಂದಿ ಭಾಷೆಯ ಬಳಕೆ ಮತ್ತು ಸ್ಥಾನಮಾನವನ್ನು ಹೆಚ್ಚಿಸಲು ಕೇಂದ್ರವು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳ ಪೈಕಿ ಪ್ರಮುಖವಾದುವು ಹೀಗಿವೆ:
ಪ್ರಶಸ್ತಿ ಮತ್ತು ವಿದ್ಯಾರ್ಥಿವೇತನಗಳು: ಹಿಂದಿ ಭಾಷೆಯನ್ನು ಉತ್ತೇಜಿಸಲು ನೀಡಿದ ಕೊಡುಗೆಗಳಿಗಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ರಾಜಭಾಷಾ ಗೌರವ್ ಪುರಸ್ಕಾರ ಮತ್ತು ರಾಜ ಭಾಷಾ ಕೀರ್ತಿ ಪುರಸ್ಕಾರದಂತಹ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಹಿಂದಿ ಸಾಹಿತ್ಯ ಸಮ್ಮೇಳನ (ಮಾನ್ಯತೆ) ಕಾಯ್ದೆ, 1956: ಈ ಕಾಯ್ದೆಯು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲು, ಲೇಖಕರನ್ನು ಬೆಂಬಲಿಸಲು ಮತ್ತು ಹಿಂದಿ ಸಾಹಿತ್ಯವನ್ನು ಬೆಳೆಸಲು ಸಂಸ್ಥೆಯೊಂದನ್ನು ಸ್ಥಾಪಿಸಿದೆ.
ಹಿಂದಿ ಭಾಷಾ ಕೋರ್ಸ್ಗಳು: ಕೇಂದ್ರೀಯ ಹಿಂದಿ ತರಬೇತಿ ಸಂಸ್ಥೆ (ಸಿಎಚ್ ಟಿಐ) ಇದು ಹಿಂದಿಯೇತರ ಭಾಷಿಕರಿಗೆ ಹಿಂದಿ ಕಲಿಸಲು ವಿವಿಧ ಕೋರ್ಸ್ಗಳನ್ನು ನಡೆಸುತ್ತಿದೆ.
ತಂತ್ರಜ್ಞಾನದಲ್ಲಿ ಹಿಂದಿ ಬಳಕೆ: ಯುನಿಕೋಡ್ ಬೆಂಬಲ ಸೇರಿದಂತೆ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಮತ್ತು ತಂತ್ರಜ್ಞಾನದಲ್ಲಿ ಹಿಂದಿಯ ಬಳಕೆಯನ್ನು ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಪ್ರಚಾರ: ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯಾಗಿ ಜಾಗತಿಕವಾಗಿ ಗುರುತಿಸಲು ಮತ್ತು ಸೇರಿಸಲು ಭಾರತ ಮತ್ತು ಮಾರಿಷಸ್ 1999 ರಲ್ಲಿ ವಿಶ್ವ ಹಿಂದಿ ಸಚಿವಾಲಯವನ್ನು (ಡಬ್ಲ್ಯುಎಚ್ಎಸ್) ಸ್ಥಾಪಿಸಿವೆ.
ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾದ ಹಿಂದಿ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದರ ದೇವನಾಗರಿ ಲಿಪಿ ಮತ್ತು ವೈವಿಧ್ಯಮಯ ಉಪಭಾಷೆಗಳು ಭಾರತೀಯ ಉಪಖಂಡದ ಭಾಷಾ ಶ್ರೀಮಂತಿಕೆಗೆ ಕೊಡುಗೆ ನೀಡುತ್ತವೆ. ಹಿಂದಿಯ ಸಾಂಸ್ಕೃತಿಕ ಮಹತ್ವವು ಬಾಲಿವುಡ್ ಚಲನಚಿತ್ರಗಳು ಮತ್ತು ಶಾಸ್ತ್ರೀಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಹಿಂದಿಯಲ್ಲಿ ಮೊದಲ ಕವಿತೆಯನ್ನು ಪ್ರಸಿದ್ಧ ಕವಿ 'ಅಮೀರ್ ಖುಸ್ರೋ' ಬರೆದಿದ್ದಾರೆ. ಹಿಂದಿ ಭಾಷೆಯ ಇತಿಹಾಸದ ಬಗ್ಗೆ ಪುಸ್ತಕ ಬರೆದ ಮೊದಲ ಲೇಖಕ ಭಾರತೀಯನಲ್ಲ. ಅದನ್ನು ಫ್ರೆಂಚ್ ಲೇಖಕ ಗ್ರಾಸಿಮ್ ಡಿ ತೈಸಿ ಬರೆದಿದ್ದಾರೆ. 1977 ರಲ್ಲಿ, ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಹೆಮ್ಮೆಯಿಂದ ಭಾಷಣ ಮಾಡಿದ್ದು ಇತಿಹಾಸ.
ಜನವರಿ 26, 1950 ರಂದು, ಸಂಸತ್ತಿನ 343 ನೇ ವಿಧಿಯ ಅಡಿಯಲ್ಲಿ ಹಿಂದಿಯನ್ನು ಪ್ರಾಥಮಿಕ ಭಾಷೆ ಎಂದು ಪರಿಗಣಿಸಲಾಯಿತು. 'ಅಚ್ಛಾ' ಮತ್ತು 'ಸೂರ್ಯ ನಮಸ್ಕಾರ'ದಂತಹ ಅನೇಕ ಹಿಂದಿ ಪದಗಳನ್ನು ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಸೇರಿಸಲಾಗಿದೆ.
1950ರಲ್ಲಿ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರೆಯಿತು. 2009 ರಲ್ಲಿ, ಗೂಗಲ್ ತನ್ನ ಸರ್ಚ್ ಇಂಜಿನ್ನಲ್ಲಿ ಹಿಂದಿಯನ್ನು ಪರಿಚಯಿಸಿತು. ಭಾರತವಲ್ಲದೆ, ಮಾರಿಷಸ್, ಫಿಲಿಪೈನ್ಸ್, ನೇಪಾಳ, ಫಿಜಿ, ಗಯಾನಾ, ಸುರಿನಾಮ್, ಟ್ರಿನಿಡಾಡ್, ಟಿಬೆಟ್ ಮತ್ತು ಪಾಕಿಸ್ತಾನದಲ್ಲಿ ಹಿಂದಿಯನ್ನು ಮಾತನಾಡಲಾಗುತ್ತದೆ ಮತ್ತು ಅರ್ಥಮಾಡಿಕೊಳ್ಳಲಾಗುತ್ತದೆ.