ಚೆನ್ನೈ: ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸನ್ ಇಂದು ನಿಧನರಾಗಿದ್ದಾರೆ. 95 ವರ್ಷದ ಅವರು ತಮಿಳುನಾಡಿನ ಉದಕಮಂಡಲದಲ್ಲಿ ಅಂತಿಮ ದಿನಗಳನ್ನು ಕಳೆಯುತ್ತಿದ್ದರು.
1955ರಲ್ಲಿ ಪರಮಾಣು ಇಂಧನ ಇಲಾಖೆ ಸೇರಿದ ಅವರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಅನೇಕ ಪರಮಾಣು ಇಂಧನ ಯೋಜನೆಗಳಲ್ಲಿ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪರಮಾಣು ಪಿತಾಮಹ ಹೋಮಿ ಭಾಭಾ ಅವರ ಜೊತೆಗೆ ಭಾರತದ ಮೊದಲ ಪರಮಾಣ ಸಂಶೋಧನಾ ರಿಯಾಕ್ಟರ್ನ ನಿರ್ಮಾಣದಲ್ಲಿ ಶ್ರೀನಿವಾಸನ್ ಕಾರ್ಯ ನಿರ್ವಹಿಸಿದ್ದಾರೆ. 1959ರಲ್ಲಿ ದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರಧಾನ ಯೋಜನಾ ಎಂಜಿನಿಯರ್ ಆಗಿ ಇವರನ್ನು ನೇಮಿಸಲಾಯಿತು. 1967 ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯ ಯೋಜನಾ ಎಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡರು. ಇಲ್ಲಿ ಅನೇಕ ಸ್ವಾವಲಂಬಿ ಪರಮಾಣು ವಿದ್ಯುತ್ ಸಾಮರ್ಥ್ಯ ರೂಪಿಸಲು ಇವರು ಸಹಾಯ ಮಾಡಿದರು.
ಇದನ್ನೂ ಓದಿ: ಭಾರತದ ಮೊದಲ ಪರಮಾಣು ಪರೀಕ್ಷೆ ನಡೆದಿದ್ದೆಲ್ಲಿ, ಯಾವಾಗ?: ‘ಸ್ಮೈಲಿಂಗ್ ಬುದ್ಧ’ ಯಶಸ್ಸಿಗೆ 51 ವರ್ಷ ಪೂರ್ಣ
1974ರಲ್ಲಿ ಡಿಎಇಯಲ್ಲಿ ವಿದ್ಯುತ್ ಯೋಜನೆಗಳ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾದರು. ದಶಕದ ಬಳಿಕ ಅವರು ಪರಮಾಣು ವಿದ್ಯುತ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ ಭಾರತ ಪರಮಾಣು ಸೌಕರ್ಯದಲ್ಲಿ ವೇಗದ ಬೆಳವಣಿಗೆ ಕಂಡಿತು. ಶ್ರೀನಿವಾಸನ್ ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳ ಯೋಜನೆ, ನಿರ್ಮಾಣ ಮತ್ತು ಕಾರ್ಯಾರಂಭದ ಮೇಲ್ವಿಚಾರಣೆ ನಡೆಸಿದ್ದಾರೆ.
1987ರಲ್ಲಿ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಇವರು ನೇಮಕವಾಗಿದ್ದರು. ಅದೇ ವರ್ಷ, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್)ನ ಸ್ಥಾಪಕ ಅಧ್ಯಕ್ಷರಾದರು.
ಪರಮಾಣು ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ ಇವರ ಕೊಡುಗೆ ಅಪಾರವಾಗಿದೆ. ಭಾರತದ ಎರಡನೇ ಅತ್ಯುತ್ತಮ ನಾಗರಿಕ ಪ್ರಶಸ್ತ್ರಿ ಪದ್ಮ ವಿಭೂಷಣಕ್ಕೆ ಭಾಜನರಾಗಿರುವ ಶ್ರೀನಿವಾಸನ್ ಅವರ ದೂರದೃಷ್ಟಿಯ ನಾಯಕತ್ವ, ತಾಂತ್ರಿಕ ನೈಪುಣ್ಯತೆ ಮತ್ತು ದೇಶಕ್ಕೆ ಅವಿರಹಿತ ಸೇವೆಯು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನವಾಗಲಿದೆ.
ಇದನ್ನೂ ಓದಿ: ಪರಮಾಣು ಮಾಧ್ಯಮದಲ್ಲಿ ಕ್ವಾಂಟಮ್ ಒಳಗೊಳ್ಳುವಿಕೆಯಿಂದ ಬೆಳಕು ಸಂಗ್ರಹ: ಭಾರತೀಯ ವಿಜ್ಞಾನಿಗಳ ಸಾಧನೆ