ಮಂಡಿ (ಹಿಮಾಚಲ ಪ್ರದೇಶ): ಇಲ್ಲಿನ ಮಸೀದಿಯ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿರುವುದನ್ನು ವಿರೋಧಿಸಿ ವಿವಿಧ ಹಿಂದೂ ಸಂಘಟನೆಗಳು ಹಾಗೂ ನಾಗರಿಕ ಸಮಾಜದಿಂದ ಭಾರೀ ಪ್ರತಿಭಟನೆಗಳು ನಡೆದಿದ್ದು, ಅಕ್ರಮವಾಗಿ ನಿರ್ಮಿಸಿರುವ ಎರಡು ಮಹಡಿಗಳನ್ನು 30 ದಿನಗಳೊಳಗೆ ಕೆಡವಲು ನಗರಸಭೆ ಆಯುಕ್ತ ಹೆಚ್.ಎಸ್.ರಾಣಾ ನೇತೃತ್ವದ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ಜೈಲ್ ರಸ್ತೆಯಲ್ಲಿರುವ 30 ವರ್ಷಗಳಷ್ಟು ಹಳೆಯದಾದ ಮೂರಂತಸ್ತಿನ ಕಟ್ಟಡವಾಗಿರುವ ಮಸೀದಿಯು ಅದರ ಎರಡು ಮಹಡಿಗಳನ್ನು ಸರಿಯಾದ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಜಮೀನು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯ ಹೆಸರಿನಲ್ಲಿ ನೋಂದಣಿಯಾಗಿದೆ. ಇನ್ನು, ಮಾರ್ಚ್‌ನಲ್ಲಿ ನಿರ್ಮಾಣದ ಭಾಗವು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಸೇರಿದ ಭೂಮಿಗೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ಮಸೀದಿ ನಿರ್ಮಾಣವನ್ನು ನಿಲ್ಲಿಸುವಂತೆ ನಗರಸಭೆ ಜೂನ್‌ನಲ್ಲಿ ನೋಟಿಸ್ ನೀಡಿತ್ತು. ನ್ಯಾಯಾಲಯದ ಕಲಾಪ ನಡೆಯುವಾಗ ಸ್ಥಳೀಯ ಹಿಂದೂ ಸಂಘಟನೆಗಳು ‘ಕಟ್ಟಡ ನಿಯಮಾವಳಿ ಜಾರಿ’ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದವು.
ಈ ಕುರಿತು ಮಂಡಿ ಮಹಾನಗರ ಪಾಲಿಕೆ ಆಯುಕ್ತ ಹೆಚ್.ಎಸ್. ರಾಣಾ ಮಾತನಾಡಿ, ‘ಮಸೀದಿಯ ನೂತನ ಕಟ್ಟಡದ ಕಾಮಗಾರಿ 2023ರ ಅಕ್ಟೋಬರ್‌ನಲ್ಲಿ ಆರಂಭಗೊಂಡಿದ್ದು, ಅದರ ನಕ್ಷೆ ಇಲ್ಲದಿರುವ ಬಗ್ಗೆ ಪಾಲಿಕೆಗೆ ದೂರು ಬಂದ ಬಳಿಕ ನಂತರ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗೆ ಹೊಂದಿಕೊಂಡಂತೆ ಗೋಡೆ ನಿರ್ಮಿಸಲಾಗಿದೆ. ಅಕ್ರಮವಾಗಿ ನಿರ್ಮಿಸಿರುವುದು ಗೊತ್ತಾಗಿದೆ ಎಂದರು.
ನಗರ ಪ್ರದೇಶಗಳಲ್ಲಿ ಯಾವುದೇ ಕಟ್ಟಡದ ನಕ್ಷೆಯನ್ನು ಸಲ್ಲಿಸಿ ಅನುಮೋದನೆ ಪಡೆದ ನಂತರ ಅದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬಹುದು. ಆದಾಗ್ಯೂ, ಮಸೀದಿ ಸಮಿತಿಯು ಅದರ ನಕ್ಷೆಯನ್ನು ಸಲ್ಲಿಸಲು ಪದೇ ಪದೇ ನೋಟಿಸ್ ನೀಡಿದ ನಂತರವೂ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಹೆಚ್‌ಎಸ್ ರಾಣಾ ಹೇಳಿದರು.
"ನಾವು ಪರಿಶೀಲಿಸಿದಾಗ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ನಕ್ಷೆಯನ್ನು ಅನುಮೋದಿಸದ ಕಾರಣ ಕಟ್ಟಡವು ಅಕ್ರಮವಾಗಿರುವುದು ದೃಢಪಟ್ಟಿದೆ. ಅಲ್ಲದೆ, ಸೊಸೈಟಿಯು 231 ಚದರ್ ಮೀಟರ್ ಭೂಮಿಯನ್ನು ಹೊಂದಿದೆ. ಆದರೆ, ಪ್ರಸ್ತುತ ಮಾಪನದಲ್ಲಿ ಅದರ ವಶದಲ್ಲಿರುವ ಒಟ್ಟು ಜಮೀನು 240 ಚದರ್ ಮೀಟರ್ ಎಂದು ಕಂಡುಬಂದಿದೆ. ಈ ಹೆಚ್ಚುವರಿ ಭೂಮಿ ಪಿಡಬ್ಲ್ಯುಡಿ ಒಡೆತನದಲ್ಲಿದೆ" ಎಂದು ರಾಣಾ ಮಾಹಿತಿ ನೀಡಿದರು.
ವಿಷಯದ ತಳಹದಿಯನ್ನು ಪಡೆಯಲು, ನಗರಸಭೆಯು ಜುಲೈ 27 ರಂದು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ಹೆಚ್‌ಎಸ್ ರಾಣಾ ಹೇಳಿದರು. “ಇಂದು, ಈ ಪ್ರಕರಣದ ಆರನೇ ವಿಚಾರಣೆಯ ಸಂದರ್ಭದಲ್ಲಿ, ಮಸೀದಿ ಸಮಿತಿಯ ವಾದಗಳು ಸೂಕ್ತವೆಂದು ಕಂಡುಬಂದಾಗ, ಆದೇಶ ಅನುಮತಿಯಿಲ್ಲದೆ ನಿರ್ಮಿಸಿರುವ ಕಟ್ಟಡವನ್ನು 30 ದಿನಗಳಲ್ಲಿ ಕೆಡವಲು ಆದೇಶ ನೀಡಲಾಗಿದೆ,'' ಎಂದು ವಿವರಿಸಿದರು.
ಶುಕ್ರವಾರ, ಸೆಪ್ಟೆಂಬರ್ 13 ರಂದು, ಹಿಂದೂ ಸಂಘಟನೆಗಳಿಗೆ ಸೇರಿದ ಚಳವಳಿಗಾರರು ಮಧ್ಯಾಹ್ನ ಮಸೀದಿಯನ್ನು ತಲುಪುವ ಮೊದಲು ಪ್ರತಿಭಟನೆ ನಡೆಸಿದರು. ಅನೇಕರು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು ಮತ್ತು ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ನೀರಿನ ಫಿರಂಗಿಗಳನ್ನು ಬಳಸಬೇಕಾಯಿತು. ಮಂಡಿ ಜಿಲ್ಲಾಧಿಕಾರಿಯವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.
ಇದನ್ನೂ ಓದಿ: ದಾಖಲೆಗಳಲ್ಲಿ ಹೆಸರು ಬದಲಾಯಿಸಿ ಮತ್ತೊಬ್ಬರ ಹೆಸರಿದ್ದ ತಕ್ಷಣ ಆಸ್ತಿ ಮಾಲೀಕತ್ವ ಬದಲಾಗದು: ಹೈಕೋರ್ಟ್ - High Court