ETV Bharat / bharat

ತುಂಡು ಭೂಮಿ, ಕೂಲಿ ಮಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣ: ಸಣ್ಣ ಕೋಣೆಯಲ್ಲಿ ಓದಿ NEET ಪಾಸಾದ ಸಹೋದರಿಯರು; ರೈತನ ಮಕ್ಕಳ ಸ್ಪೂರ್ತಿದಾಯಕ ಪ್ರಯಾಣ!

ತುಂಡು ಭೂಮಿ ಹೊಂದಿದ್ದ ರೈತನ ಇಬ್ಬರು ಹೆಣ್ಣುಮಕ್ಕಳ ಸಾಧನೆಯ ಕಿರೀಟ- ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನ ಕಿನಾಳ ಗ್ರಾಮದ ಹೆಸರು ಬೆಳಗಿದ ಪುತ್ರಿಯರು - ಸಾಕ್ಷಿ ಮತ್ತು ಪ್ರಿಯಾ ಭೋಸಲೆ NEETನಲ್ಲಿ ಯಶಸ್ವಿ

MH Daughters of farmers passing NEET exam for MBBS
ಸಣ್ಣ ಕೋಣೆಯಲ್ಲಿ ಓದಿ NEET ಪಾಸಾದ ಸಹೋದರಿಯರು (ETV Bharat)
author img

By ETV Bharat Karnataka Team

Published : October 10, 2025 at 9:22 PM IST

4 Min Read
Choose ETV Bharat

ನಾಂದೇಡ್​, ಮಹಾರಾಷ್ಟ್ರ: ಹೊಲದಲ್ಲಿ ಬಿತ್ತನೆ ಮಾಡುವ ಈ ಕೈಗಳು ಈಗ ಜನರ ಜೀವ ಉಳಿಸುವ ದಿವ್ಯ ಕಾರ್ಯಕ್ಕೆ ಸಜ್ಜಾಗಿವೆ. ಮಕ್ಕಳ ಈ ಸಾಧನೆಯಿಂದ ತಾಯಿ -ತಂದೆಗೆ ಮಾತ್ರವಲ್ಲ, ಇಡೀ ಕಿನಾಳ ಗ್ರಾಮಕ್ಕೆ ಹೆಮ್ಮೆಯ ಕ್ಷಣ. ಏಕೆಂದರೆ, ಎರಡು ಹೊತ್ತಿನ ಊಟಕ್ಕೂ ಚಿಂತೆಯಾಗಿರುವ ಈ ಊರಿನಲ್ಲಿ ಬೆಳೆಯು ಕೆಲವೊಮ್ಮೆ ಮಳೆಯ ಅವಕೃಪೆ ತುತ್ತಾಗುತ್ತಿತ್ತು. ಇನ್ನು ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಮಣ್ಣು ಪಾಲಾಗುತ್ತಿತ್ತು. ಆದರೆ, ಈಗ ಈ ಕಷ್ಟದ ಚಕ್ರ ಒಡೆಯಲ್ಪಟ್ಟಿದೆ.

ಈ ಇಬ್ಬರು ಹೆಣ್ಣುಮಕ್ಕಳು ನೀಟ್​ ಪರೀಕ್ಷೆಯಲ್ಲಿ ಪಾಸಾಗಿ ಎಂಬಿಬಿಎಸ್​ ವ್ಯಾಸಂಗಕ್ಕೆ ಪ್ರವೇಶ ಪಡೆದುಕೊಂಡು ತಮ್ಮ ಕುಟುಂಬವನ್ನು ಮಾತ್ರವಲ್ಲ, ಇಡೀ ಗ್ರಾಮಕ್ಕೇ ದೊಡ್ಡ ಗೌರವ ತಂದುಕೊಟ್ಟಿದ್ದಾರೆ. ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನ ಕಿನಾಳ ಗ್ರಾಮದ ಭೋಸಲೆ ಕುಟುಂಬ ಸಾಕ್ಷಿ ಮತ್ತು ಪ್ರಿಯಾ ಎಂಬ ಈ ಇಬ್ಬರು ಸಹೋದರಿಯರಿಂದ ಬೆಳಕಿನ ದಾರಿಯನ್ನು ಕಂಡುಕೊಂಡಿದ್ದಾರೆ.

MH Daughters of farmers passing NEET exam for MBBS education inspirational journey
ಸಣ್ಣ ಕೋಣೆಯಲ್ಲಿ ಓದಿ NEET ಪಾಸಾದ ಸಹೋದರಿಯರು (ETV Bharat)

ಸಂಕಷ್ಟದ ನಡುವೆ ಕೂಲಿ ನಾಲಿ ಮಾಡಿ ಅಂದು ಕೊಂಡಿದ್ದನ್ನ ಸಾಧಿಸಿದ ಕುಟುಂಬ: ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿತ್ತು. ಎರಡು ಹೆಣ್ಣುಮಕ್ಕಳ ಜನನದ ನಂತರ, ಸಂಬಂಧಿಕರಿಂದ, ಗ್ರಾಮಸ್ಥರಿಂದ ನಿಂದನೆ, ಕೊಳಕು ಮಾತುಗಳನ್ನು ಕೇಳುವಂತಾಗಿತ್ತು. ಆದರೆ ಭೋಸಲೆ ದಂಪತಿಗಳು ಈ ಎಲ್ಲವನ್ನೂ ಲೆಕ್ಕಿಸದೆ, ತಮ್ಮ ಹೆಣ್ಣುಮಕ್ಕಳನ್ನೇ ತಮ್ಮ ಜೀವನದ ಕೇಂದ್ರವನ್ನಾಗಿಸಿಕೊಂಡರು. ಅವರನ್ನು ಲಕ್ಷ್ಮೀಯಂತೆ ಕಾಣದೇ, ಸರಸ್ವತಿಯ ಶಕ್ತಿಯನ್ನು ಅವರ ಕೈಗಿತ್ತರು. ಇಂದು ಆ ಸರಸ್ವತಿಯರೇ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿ MBBS ಗೆ ವ್ಯಾಸಂಗಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ - ತಂದೆಯ ಆಶಯದಂತೆ ಡಾಕ್ಟರ್ ಆಗುವ ಕನಸನ್ನು ಸಾಕಾರಗೊಳಿಸಿದ್ದಾರೆ.

ಅವಮಾನ ಮಾತುಗಳಿಗೆ ಅಂಜದೇ ಅಳುಕದೇ ನೀಟ್ ಪಾಸ್​ ಮಾಡಿದ ಸಾಕ್ಷಿ -ಪ್ರಿಯಾ: ಕಿನಾಳ ಗ್ರಾಮದ ರೈತ ಹನುಮಂತ ಭೋಸಲೆ ಮತ್ತು ಅವರ ಪತ್ನಿ ಸುನೀತಾ ಭೋಸಲೆ ದಂಪತಿ ಕೇವಲ ಎರಡು ಎಕರೆ ಜಮೀನಿನ ಜೊತೆಗೆ ಇತರರ ಹೊಲದಲ್ಲಿ ಕೂಲಿಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸಿದರು. ಕಷ್ಟದ ನಡುವೆಯೂ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಿದರು. ತಮ್ಮ ಕಷ್ಟದ ಬದುಕಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಂಡರು. ಇಂದು ಆ ಇಬ್ಬರು ಮಕ್ಕಳು ನೀಟ್​(NEET) ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದಕ್ಕೆ ಹನುಮಂತ ಮತ್ತು ಸುನೀತಾ ದಂಪತಿಗಳು ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸಣ್ಣ ಕೋಣೆಯಲ್ಲಿ ಓದಿ NEET ಪಾಸಾದ ಸಹೋದರಿಯರು; ರೈತನ ಮಕ್ಕಳ ಸ್ಪೂರ್ತಿದಾಯಕ ಪ್ರಯಾಣ (ETV Bharat)

ಹೊಲದ ಬೆಳೆಗೆ ಭರವಸೆ ಇರಲಿಲ್ಲ. ಜೇಬಿನ ಹಣಕ್ಕೆ ಗ್ಯಾರಂಟಿಯೂ ಇರಲಿಲ್ಲ: ಆದರೂ ಈ ತಂದೆ ತನ್ನ ಮಕ್ಕಳಿಗಾಗಿ ಮಳೆ - ಗಾಳಿ ಚಳಿ ಎನ್ನದೇ ಹಗಲು ರಾತ್ರಿ ಕಷ್ಟ ಪಟ್ಟು ದುಡಿದರು. ತನ್ನ ಜೀವನದ ಸವಾಲುಗಳನ್ನು ಎದುರಿಸಿ, ಮಕ್ಕಳನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸಿದರು. ಹೆಣ್ಣುಮಕ್ಕಳಿಗೆ ಇಷ್ಟೊಂದು ಶಿಕ್ಷಣ ಯಾಕೆ? ಎಂದು ಗ್ರಾಮಸ್ಥರು ಕೇಳಿದಾಗಲೂ ಈ ದಂಪತಿಗಳು ಹಿಂದೆ ಸರಿಯಲಿಲ್ಲ. ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಸಾಕಾರಗೊಳಿಸಿದರು. ಆ ಹೆಣ್ಣುಮಕ್ಕಳು ಕೂಡ ಯಾವುದೇ ಸಾಧನಗಳಿಲ್ಲದೆ, ಟ್ಯೂಶನ್‌ ಇಲ್ಲದೇ ಆನ್‌ಲೈನ್ ವಿಧಾನದ ಮೂಲಕ ಓದಿ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ತಾಯಿ - ತಂದೆಯ ಕನಸನ್ನು ನನಸಾಗಿಸಿದರು.

ಸಣ್ಣಕೋಣೆ, ಸೌಲಭ್ಯಗಳ ಕೊರತೆ ನಡುವೆ ಓದಿ ಸಕ್ಸಸ್​: ಸಣ್ಣ ಕೋಣೆಯೊಂದರಲ್ಲಿ ದೊಡ್ಡ ಸಾಧನ ಸಾಮಗ್ರಿಗಳಿಲ್ಲದೇ ರಾತ್ರಿಹಗಲು ಶ್ರಮಿಸಿದ ಈ ಇಬ್ಬರು ಹೆಣ್ಣುಮಕ್ಕಳು ಎಂಬಿಬಿಎಸ್ ಗೆ ಪ್ರವೇಶ ಪಡೆಯಲು NEET ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಯಶಸ್ವಿಯಾಗಿದ್ದಾರೆ. ತಮ್ಮ ತಾಯಿ - ತಂದೆಯ ಡಾಕ್ಟರ್ ಆಗುವ ಕನಸನ್ನು ಈ ಇಬ್ಬರು ಸಹೋದರಿಯರು ನನಸಾಗಿಸಿದ್ದಾರೆ.

18 ವರ್ಷ ತುಂಬಿದರೆ ಹೆಣ್ಣಿನ ಮದುವೆ ಮಾಡಿ ಎಂಬ ಸಮಾಜದ ಮಾತಿಗೆ ಸಾಕ್ಷಿ ಮತ್ತು ಪ್ರಿಯಾ ತಮ್ಮ ಸಾಧನೆಯ ಮೂಲಕ ಜೋರಾದ ಉತ್ತರವನ್ನೇ ನೀಡಿದ್ದಾರೆ. ಹೆಣ್ಣು ಶಿಕ್ಷಣ ಪಡೆದರೆ ಜಗತ್ತನ್ನೇ ಗೆಲ್ಲಬಹುದು ಎಂಬ ಸತ್ಯವನ್ನು ಈ ಇಬ್ಬರು ತೋರಿಸಿಕೊಟ್ಟಿದ್ದಾರೆ.

ತಂದೆ ತಾಯಿ ಕನಸು ನನಸು ಮಾಡಿದ ಸಾಕ್ಷಿ ಮತ್ತು ಪ್ರಿಯಾ: ಕಠಿಣ ಪಯಣದ ನಡುವೆ ಸಾಕ್ಷಿ ಮತ್ತು ಪ್ರಿಯಾ ತಮ್ಮ ತಾಯಿ - ತಂದೆಯ ಕನಸುಗಳಿಗಾಗಿ ರಾತ್ರಿಹಗಲು ಶ್ರಮಿಸಿದರು. ಗ್ರಾಮಸ್ಥರ ಮಾತುಗಳನ್ನು ಸಮಾಜದ ಟೀಕೆಗಳನ್ನು ಎದುರಿಸಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ತಮ್ಮ ಗುರಿಯತ್ತ ದೃಢವಾಗಿ ಸಾಗಿದರು. ಯಾವುದೇ ಸಾಧನಸಾಮಗ್ರಿಗಳಿಲ್ಲದೆ ಆನ್‌ಲೈನ್ ವಿಧಾನದ ಮೂಲಕ ಓದಿ NEETಗಾಗಿ ಓದಿ ಎಂಬಿಬಿಎಸ್ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಸಾಕ್ಷಿ ನೀಟ್ ನಲ್ಲಿ 481 ಅಂಕಗಳನ್ನು ಗಳಿಸಿದರೆ, ಪ್ರಿಯಾ 507 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಾಕ್ಷಿ ಅಮರಾವತಿಯ ಡಾ. ರಾಜೇಂದ್ರ ಗೋಡೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದರೆ, ಪ್ರಿಯಾ ಚಂದ್ರಾಪುರದ ಜೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಈ ಯಶಸ್ಸು ಕೇವಲ ಭೋಸಲೆ ಕುಟುಂಬಕ್ಕೆ ಮಾತ್ರವಲ್ಲ ಇಡೀ ಮಹಾರಾಷ್ಟ್ರದ ತಂದೆ ತಾಯಂದಿರಿಗೆ ಸ್ಫೂರ್ತಿಯ ಆಶಾ ಕಿರಣವಾಗಿದ್ದಾರೆ.

ಹೆಣ್ಣುಮಕ್ಕಳನ್ನು ಶೀಘ್ರವಾಗಿ ಮದುವೆ ಮಾಡಬೇಕು ಎಂಬ ಒತ್ತಡಕ್ಕೆ ಒಳಗಾಗುವ ಬದಲು ಶಿಕ್ಷಣದ ಮೂಲಕ ಅವರಿಗೆ ಗಗನದ ಎತ್ತರಕ್ಕೆ ಏರಲು ಅವಕಾಶ ನೀಡಬೇಕೆಂಬ ಸಂದೇಶವನ್ನು ಇವರ ಬದುಕು ಎಲ್ಲರಿಗೂ ಮಾದರಿಯಾಗಿದೆ.

ಸಾಕ್ಷಿ ಮತ್ತು ಪ್ರಿಯಾ ಭೋಸಲೆಯವರ ಈ ಯಶಸ್ಸಿನ ಕಥೆಯು ಕೇವಲ ಒಂದು ಕುಟುಂಬದ ಗೆಲುವಿನ ಕಥೆಯಲ್ಲ. ಇದು, ಕಿರು ಭೂಮಿಯ ರೈತ ಕುಟುಂಬವೊಂದು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣದ ಬೆಳಕಿನಲ್ಲಿ ಜೀವನದ ಶಿಖರವನ್ನು ತಲುಪಿಸಿದ ಮಹಾನ್ ಸಾಧನೆಯ ಕಥೆ.

ಈ ಕಥೆಯು ಇತರ ತಂದೆ ತಾಯಿಯರಿಗೆ ಸಮಾಜಕ್ಕೆ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವಂತೆ ಪ್ರೇರೇಪಿಸುತ್ತದೆ. ಸಾಕ್ಷಿ ಮತ್ತು ಪ್ರಿಯಾ ತಮ್ಮ ಕಠಿಣ ಶ್ರಮ, ದೃಢಸಂಕಲ್ಪ ಮತ್ತು ತಂದೆ ತಾಯಿಯ ಕನಸಿನೊಂದಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣವೇ ಜೀವನದ ಶಕ್ತಿಯಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇವುಗಳನ್ನು ಓದಿ: ಹತ್ತಿ ಹೊಲದಿಂದ ಡಿಎಸ್​ಪಿ ಹುದ್ದೆಗೆ! ಬಡತನ ಮೆಟ್ಟಿ ನಿಂತ ಪಂಕ್ಚರ್ ಅಂಗಡಿಯಾತನ ಮಗಳು

160 ಸರ್ಕಾರಿ ಹುದ್ದೆಗಳನ್ನು ಪಡೆದು ದಾಖಲೆ ನಿರ್ಮಿಸಿದ ಶ್ರೀಕೃಷ್ಣ ದೇವರಾಯ ವಿವಿ ವಿದ್ಯಾರ್ಥಿಗಳು

ಕುಗ್ರಾಮದಿಂದ ಸರ್ಕಾರಿ ಉದ್ಯೋಗದವರೆಗೆ: ಕ್ರೀಡಾ ಶಿಕ್ಷಕರ ಬೆಂಬಲದೊಂದಿಗೆ Govt ನೌಕರಿ ಪಡೆದ 7 ಮಂದಿ!

ಭಾರತೀಯ ಸೇನೆಗಾಗಿ ಹೈಸ್ಪೀಡ್​ ಡ್ರೋನ್​ ವಿನ್ಯಾಸಗೊಳಿಸಿದ ಇಂಜಿನಿಯರಿಂಗ್​ ವಿದ್ಯಾರ್ಥಿ