ಮುಂಬೈ, ಮಹಾರಾಷ್ಟ್ರ: ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಸ್ಥಳೀಯ ರೈಲಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮುಂಬೈನ ದಿವಾ ಮತ್ತು ಮುಂಬ್ರಾ ನಿಲ್ದಾಣಗಳ ನಡುವೆ ಜನದಟ್ಟಣೆಯಿಂದಾಗಿ ಸ್ಥಳೀಯ ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಮೃತಪಟ್ಟಿದ್ದರು.
ಅಪಘಾತದ ಸಮಯದಲ್ಲಿ ರೈಲು ಪ್ರಯಾಣಿಕರ ಭಾರಿ ದಟ್ಟಣೆಯಿಂದಾಗಿ ತುಂಬಿ ತುಳುಕುತ್ತಿತ್ತು. ಹೀಗಾಗಿ ಅನೇಕ ಪ್ರಯಾಣಿಕರು ಬಾಗಿಲುಗಳಲ್ಲಿ ನಿಂತು ಜೋತಾಡುತ್ತಿದ್ದರು. ಈ ವೇಳೆ, ಪಕ್ಕದ ಹಳಿಯಿಂದ ಬರುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಅವರು ಕಸಾರಾ ಸ್ಥಳೀಯ ರೈಲು ನಿಲ್ದಾಣದಲ್ಲಿ ಬಿದ್ದು ಮೃತಪಟ್ಟಿದ್ದರು.
ಈ ಅಪಘಾತದ ನಂತರ ರೈಲ್ವೆ ಮಂಡಳಿ ಎಚ್ಚೆತ್ತುಕೊಂಡಿದೆ. ಪ್ರಯಾಣಿಕರ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಹೀಗಾಗಿ ರೈಲ್ವೆ ಮಂಡಳಿ ಕೆಲವು ಸೂಚನೆಗಳನ್ನು ಹೊರಡಿಸಿದೆ. ಇಂದಿನಿಂದ, ಮುಂಬೈ ಉಪನಗರ ಪ್ರದೇಶದ ಎಲ್ಲ ಸ್ಥಳೀಯ ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳ ಸೌಲಭ್ಯ ಕಡ್ಡಾಯಗೊಳಿಸಲಾಗುವುದು ಎಂದು ಘೋಷಿಸಿದೆ.
ಚಲಿಸುವ ರೈಲಿನಲ್ಲಿ ಬಾಗಿಲುಗಳು ತೆರೆದಿರುವುದಿಲ್ಲ ಮತ್ತು ಯಾವುದೇ ಪ್ರಯಾಣಿಕರು ನೇತಾಡುತ್ತಾ ಪ್ರಯಾಣಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಅಲ್ಲದೇ ಪ್ರಸ್ತುತ ಸೇವೆಯಲ್ಲಿರುವ ಎಲ್ಲ ಬೋಗಿಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು, ಈ ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲು ಮುಚ್ಚುವ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗುವುದು ಎಂದು ರೈಲ್ವೆ ಮಂಡಳಿ ಘೋಷಿಸಿದೆ.
ಕೆಳಗೆ ಬಿದ್ದ 8 ಜನರಲ್ಲಿ ಐವರು ಸಾವು, ಮೂವರಿಗೆ ಗಂಭೀರ ಗಾಯ: ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ 8 ಜನರು ರೈಲಿನಿಂದ ಕೆಳಕ್ಕೆ ಬಿದ್ದಿದ್ದರು. ಇದರಲ್ಲೊ 5 ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಥಾಣೆಯ ಮುಂಬ್ರಾ ರೈಲು ನಿಲ್ದಾಣದಿಂದ CSMT ಗೆ ಹೋಗುವಾಗ ಕೆಲವು ಪ್ರಯಾಣಿಕರು ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸೆಂಟ್ರಲ್ ರೈಲ್ವೆ ಖಚಿತ ಪಡಿಸಿದೆ. ಭಾರಿ ಜನದಟ್ಟಣೆಯೇ ಕಾರಣ ಎಂದು ರೈಲ್ವೆ ಹೇಳಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ರೈಲ್ವೆ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದರು. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.