
ಕೆಮ್ಮಿನ ಸಿರಪ್ಗೆ 19 ಮಕ್ಕಳು ಬಲಿ ಶಂಕೆ: ಕೇಂದ್ರದ ಮಾರ್ಗಸೂಚಿ ಪಾಲನೆಗೆ ಸೂಚನೆ
ಆಸ್ಪತ್ರೆಯಲ್ಲಿ ದಾಖಲಾಗಿರುವ 36 ಮಕ್ಕಳಲ್ಲಿ 19 ಮಕ್ಕಳು ಸಾವನ್ನಪ್ಪಿದ್ದು, ಇದರಲ್ಲಿ 13 ಮಕ್ಕಳು ಮಧ್ಯಪ್ರದೇಶದವರಾಗಿದ್ದಾರೆ.


Published : October 8, 2025 at 11:24 AM IST
ನಾಗ್ಪುರ್ (ಮಹಾರಾಷ್ಟ್ರ): ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಲುಷಿತ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ 13 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ಇಲಾಖೆ ತಿಳಿಸಿದೆ.
ಕೆಲವು ದಿನಗಳ ಹಿಂದೆ, ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಕೆಲವು ಮಕ್ಕಳ ಆರೋಗ್ಯ ಹದಗೆಟ್ಟಿತ್ತು. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ನಾಗ್ಪುರದ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅವರಲ್ಲಿ 13 ಕಂದಮ್ಮಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ. ಈ ರೀತಿಯ ಪ್ರಕರಣಗಳು ಕಳೆದ ಆಗಸ್ಟ್ ತಿಂಗಳಿನಿಂದ ಆಸ್ಪತ್ರೆಯಲ್ಲಿ ಕಂಡುಬಂದಿವೆ. ಇಲ್ಲಿಯವರೆಗೆ, ನಾಗ್ಪುರದಲ್ಲಿ 36 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 19 ಮಕ್ಕಳು ಸಾವನ್ನಪ್ಪಿದ್ದಾರೆ. ಈ 19 ಮಕ್ಕಳಲ್ಲಿ 13 ಮಕ್ಕಳು ಮಧ್ಯಪ್ರದೇಶದವರು ಮತ್ತು 6 ಮಕ್ಕಳು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಆದಾಗ್ಯೂ ಕೆಮ್ಮಿನ ಸಿರಪ್ ಸೇವನೆಯಿಂದ ಅವರ ಸಾವು ಸಂಭವಿಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ನಡೆಸಿದ ತನಿಖೆಯಲ್ಲಿ ರೋಗಿಗಳು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಡೈಥಿಲೀನ್ ಗ್ಲೈಕೋಲ್ (ಡಿಇಜಿ) ಕಂಡು ಬಂದಿದೆ. ಡೈಥಿಲೀನ್ ಗ್ಲೈಕೋಲ್ ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುವ ವಿಷಕಾರಿ ದ್ರವವಾಗಿದ್ದು, ಇದು ಮಕ್ಕಳ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.
ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾದರಿಗಳಲ್ಲಿ ಡೈಥಿಲೀನ್ ಗ್ಲೈಕಾಲ್ ಕಂಡು ಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಗಳು ತಕ್ಷಣವೇ ಈ ಸಿರಪ್ ಮಾರಾಟ ನಿಲ್ಲಿಸಿವೆ. ಅಲ್ಲದೆ, ಕೇಂದ್ರ ಔಷಧ ಮಾನದಂಡಗಳ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಆರು ರಾಜ್ಯಗಳಲ್ಲಿನ ಔಷಧ ತಯಾರಿಕಾ ಕಂಪನಿಗಳ ತಪಾಸಣೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಕ್ಕಳಿಗೆ ಕೆಮ್ಮು ಸಿರಪ್ ಬಳಕೆ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಈ ಹಿನ್ನೆಲೆ ನಾಗ್ಪುರ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪತ್ರ ರವಾನೆಯಾಗಿದ್ದು, ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಇಲ್ಲವೆ ಎಂದು ಖಚಿತಪಡಿಸಿಕೊಳ್ಳಲು ಪುರಸಭೆಯ ಆರೋಗ್ಯ ಇಲಾಖೆಯು ನಗರದ ಆಸ್ಪತ್ರೆಗಳಿಗೆ ಸೂಚನೆಗಳನ್ನು ನೀಡಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಚಿಕ್ಕ ಮಕ್ಕಳಲ್ಲಿ ಕೆಮ್ಮು ಹೆಚ್ಚಾಗಿ ಔಷಧಿಗಳಿಲ್ಲದೆ ಸ್ವಯಂ ಗುಣವಾಗುತ್ತದೆ. ಮಕ್ಕಳು ಕೆಮ್ಮಿನಿಂದ ಬಳಲುವ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಮತ್ತು ಸಾಕಷ್ಟು ನೀರು ಕುಡಿಯುವುದು ಹಾಗೂ ಔಷಧೀಯವಲ್ಲದ ಕ್ರಮಗಳು ಪ್ರಥಮ ಚಿಕಿತ್ಸೆಯಾಗಿ ಸಾಕು. ಆದ್ದರಿಂದ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶೀತ ಮತ್ತು ಕೆಮ್ಮಿಗೆ ಔಷಧ ನೀಡುವುದನ್ನು ತಪ್ಪಿಸಬೇಕು ಎಂದು ತಿಳಿಸಲಾಗಿದೆ.
5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅಗತ್ಯವಿದ್ದಲ್ಲಿ ವೈದ್ಯರ ಮುನ್ನೆಚ್ಚರಿಕೆ ಸಲಹೆ ಮತ್ತು ಮೇಲ್ವಿಚಾರಣೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಔಷಧವನ್ನು ನೀಡಬೇಕು. ಏಕ ಕಾಲದಲ್ಲಿ ಬಹು ಔಷಧ ಸೇವನೆ ತಪ್ಪಿಸಬೇಕು. ಸಾರ್ವಜನಿಕರಿಗೆ ವೈದ್ಯಕೀಯ ಸಲಹೆಯ ಮೇರೆಗೆ ಮಾತ್ರ ಔಷಧಿಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಎರಡು ವರ್ಷದೊಳಗಿನ ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡುವುದು ಬೇಡ: ಸರಕಾರದ ಮಾರ್ಗಸೂಚಿಯಲ್ಲೇನಿದೆ?
ಇದನ್ನೂ ಓದಿ: ಭಾರತದಲ್ಲಿ ತಯಾರಿಸಿದ 40ಕ್ಕೂ ಹೆಚ್ಚು ಕೆಮ್ಮಿನ ಸಿರಪ್ಗಳು ಪ್ರಮಾಣಿತ ಗುಣಮಟ್ಟದಲಿಲ್ಲ: ವರದಿಯಲ್ಲಿ ಬಹಿರಂಗ

