ನವದೆಹಲಿ: ಮುಸ್ಲಿಮರ ವಾರ್ಷಿಕ ಹಜ್ ಯಾತ್ರೆ ಆರಂಭವಾಗಿದೆ. ಸುಮಾರು 15 ಲಕ್ಷ ಜನರು ಸೌದಿ ಅರೇಬಿಯಾದ ಮೌಂಟ್ ಅರಾಫತ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಮೆಕ್ಕಾದ ಆಗ್ನೇಯದಲ್ಲಿರುವ ಅರಾಫತ್ ಪರ್ವತಕ್ಕೆ ಇಸ್ಲಾಂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಕುರಾನ್‌ನಲ್ಲೂ ಇದರ ಕುರಿತು ಉಲ್ಲೇಖವಿದೆ. ಇದೇ ಸ್ಥಳದಲ್ಲಿ ಪ್ರವಾದಿ ಮಹಮ್ಮದ್ ಅವರು ಹಜ್ನ ಕೊನೆಯ ಧರ್ಮೋಪದೇಶ ನೀಡಿದ್ದರು ಎಂಬುದು ನಂಬಿಕೆ. ಇದೇ ಕಾರಣಕ್ಕೆ ಯಾತ್ರಿಕರು ಅರಾಫತ್‌ನಲ್ಲಿಯೇ ಮಧ್ಯರಾತ್ರಿಯಿಂದ ಸೂರ್ಯಾಸ್ತದವರೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಹಜ್ ಯಾತ್ರೆ ಎಂಬುದು ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿಯೊಬ್ಬ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ ವಾರ್ಷಿಕ ಇಸ್ಲಾಮಿಕ್ ಯಾತ್ರೆ. ಈ ಯಾತ್ರೆ ಕಠಿಣವಾಗಿದೆ. ಇದನ್ನು ಪೂರೈಸಲು ದೈಹಿಕವಾಗಿ ಸಮರ್ಥವಾಗಿರುವುದು ಮುಖ್ಯ. ಯಾತ್ರೆಯು ಆಧ್ಯಾತ್ಮಿಕ ಮಹತ್ವದ್ದಗಿದ್ದರೂ ಭಾಷೆ, ದಿನಚರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಅಪರಿಚಿತವಾಗಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ಮುನ್ನ ಮಾನಸಿಕ ಮತ್ತು ದೈಹಿಕ ಸಿದ್ಧತೆಯೂ ಅಗತ್ಯವಾಗಿರುತ್ತದೆ.
ದೈಹಿಕ ಸಿದ್ಧತೆ ಹೇಗೆ?: ಹಜ್ ಯಾತ್ರಿಕರು ತಮ್ಮ ಪ್ರಯಾಣ ಆರಂಭಿಸುವ ಮುನ್ನ ತಮ್ಮ ಆಧ್ಯಾತ್ಮಿಕ ಸಿದ್ಧತೆಗಳ ಮೇಲೆ ಗಮನ ಹರಿಸುವ ಜೊತೆಗೆ ದೈಹಿಕ ಸಿದ್ಧತೆಗಳನ್ನೂ ನಡೆಸುವುದು ಬಹಳ ಮುಖ್ಯ. ಯಾತ್ರಿಕರು ಆಚರಣೆಯ ಭಾಗವಾಗಿ ದೊಡ್ಡ ಜನಸಂದಣಿಯಲ್ಲಿ ದಿನಕ್ಕೆ 25 ಕಿ.ಮೀ ದೂರ ನಡೆಯಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ.
ಅಧಿಕ ತಾಪಮಾನ, ದೈಹಿಕ ಶ್ರಮ ಹೃದಯಬಡಿತ ಹೆಚ್ಚಿಸುತ್ತದೆ. ಯಾತ್ರಿಕರು ನಿರಂತರ ವ್ಯಾಯಮ ಮಾಡುವವರಲ್ಲವಾದಲ್ಲಿ, ಅವರು ದೀರ್ಘಕಾಲ ಹೊರಂಗಣದಲ್ಲಿ ಕಳೆಯುವ ಸ್ಥಿತಿ ಉದ್ಭವಿಸುತ್ತದೆ. ಅವರು ದೇಹವನ್ನು ಸಿದ್ದಪಡಿಸಿಕೊಳ್ಳಬೇಕು. ನಿಷ್ಕ್ರಿಯ ಜೀವನಶೈಲಿಯಿಂದ ನೇರವಾಗಿ ಹಜ್‌ಗೆ ಹೋಗುವುದು ಕಷ್ಟಕರವಾಗುತ್ತದೆ.

ಏರುತ್ತಿರುವ ತಾಪಮಾನ: ಈ ವರ್ಷ ಹಜ್ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆ ಇದೆ. ದೇಹ 37 ಡಿಗ್ರಿ ಸೆಲ್ಸಿಯಸ್ ತಾಪವನ್ನು ಮಾತ್ರ ತಡೆಯುವ ಸಾಮರ್ಥ್ಯ ಹೊಂದಿದ್ದು, 4 ಡಿಗ್ರಿ ಉಷ್ಣಾಂಶ ಹೆಚ್ಚಳವೂ ಮಾರಣಾಂತಿಕವಾಗಬಹುದು. ಶಾಖ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆ ಮತ್ತು UV ಕೊಡೆಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಇದು ದೇಹ ಮತ್ತು ಬಟ್ಟೆಗಳು ಬಿಸಿಯಾಗುವುದನ್ನು ತಪ್ಪಿಸುತ್ತದೆ. ಬೆವರು ಮತ್ತು ದೈಹಿಕ ಪರಿಶ್ರಮದ ಮೂಲಕ ಕಳೆದುಹೋಗುವ ಎಲೆಕ್ಟ್ರೋಲೈಟ್‌ಗಳನ್ನು ಮರುತುಂಬಿಸಲು ಓರಲ್ ರೀಹೈಡ್ರೇಶನ್ ಸ್ಯಾಚೆಟ್‌ಗಳು ಸಹಾಯ ಮಾಡುತ್ತವೆ.
ಇದನ್ನೂ ಓದಿ: ಹಜ್ ಯಾತ್ರೆಗೆ ಸೌದಿ ರಾಜರಿಂದ ಆಹ್ವಾನ: ಪವಿತ್ರ ಯಾತ್ರೆಗೆ ಹೊರಟ ಮಂಗಳೂರಿನ ಸಫ್ವಾನ್ ಜುನೈದ್
ಬಿಸಿ ತಾಕದಂತೆ ತಲೆ ಮೇಲೆ ಹ್ಯಾಂಡ್ಸ್ ಫ್ರೀ ಕೊಡೆಗಳು ಲಭ್ಯವಿದೆ. ಇವು ಯಾತ್ರಿಕರ ಪ್ರಾರ್ಥನೆ, ಆಚರಣೆಗೆ ಅನುವು ಮಾಡಿಕೊಡುತ್ತದೆ. ನಡೆಯಲು ಆರಾಮವಾಗುವಂತಹ ಸ್ಯಾಂಡಲ್‌ಗಳು ಅಥವಾ ಸ್ಲೈಡರ್‌ಗಳು ಸೂಕ್ತವಾಗಿವೆ. ಕಾರಣ ಇಲ್ಲಿ ಸುಸಜ್ಜಿತ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿವೆ. ಇಲ್ಲಿ ಮುಸ್ಲಿಮರು ಕಾಲ್ನಡಿಗೆಯಲ್ಲಿ ನಗರಕ್ಕೆ ಬರುವುದು ಸಾಮಾನ್ಯ. ಕಾಬಾವನ್ನು ಸುತ್ತುವಾಗ ಬರಿಗಾಲಿನಲ್ಲಿ ಹೋಗುತ್ತಾರೆ, ಅಲ್ಲಿ ಹವಾಮಾನ ಏನೇ ಇರಲಿ ಅಮೃತಶಿಲೆಯ ನೆಲಹಾಸು ಚರ್ಮಕ್ಕೆ ತಂಪಾಗಿರುತ್ತದೆ.
ಮುಜ್ದಲಿಫಾದಲ್ಲಿ ಭೂಪ್ರದೇಶ ಬದಲಾಗುತ್ತದೆ. ಇಲ್ಲಿ ಸೈತಾನನನ್ನು ಪ್ರತಿನಿಧಿಸುವ ಕಂಬಗಳಿಗೆ ಕಲ್ಲು ಹೊಡೆಯಲು ಜನರು ಬೆಣಚುಕಲ್ಲುಗಳನ್ನು ಸಂಗ್ರಹಿಸುತ್ತಾರೆ. ಇಲ್ಲಿ ಮುಚ್ಚಿದ ಬೂಟುಗಳನ್ನು ಧರಿಸುವುದು ಉತ್ತಮ ಮತ್ತು ಮೌಂಟ್ ಅರಾಫತ್‌ನಲ್ಲಿ ಜನರು ಬಂಡೆಗಳ ಮೇಲೆ ಹತ್ತಿ ಬೆಟ್ಟದ 70 ಮೀಟರ್ ಎತ್ತರದ ಶಿಖರ ಹತ್ತಿ ಪ್ರಾರ್ಥನೆ ಸಲ್ಲಿಸುತ್ತಾರೆ.

ವೈಯಕ್ತಿಕ ಶುದ್ದಿ: ಕೆಮ್ಮು, ನೆಗಡಿ, ಗಂಟಲು ನೋವು, ಜ್ವರಗಳು ಯಾತ್ರೆಯಲ್ಲಿ ಸಾಮಾನ್ಯ. ಹಾಗಾಗಿ ಮಾಸ್ಕ್ ಧರಿಸುವುದು ಉತ್ತಮ. ಧಾರ್ಮಿಕ ಅಗತ್ಯತೆಗಳಿಗೆ ಮುಖ ಮುಚ್ಚುವುದು ಅಗತ್ಯವಲ್ಲ. ಆದರೆ, ಸೋಂಕು ಕಡಿಮೆ ಮಾಡಲು ಇದನ್ನು ಧರಿಸಲಾಗುವುದು.
ಯಾತ್ರಿಕರು ಪ್ರಯಾಣದಲ್ಲಿ ಹೊಸ ಸೂಕ್ಷ್ಮಜೀವಿ, ಹೊಸ ಪರಿಸರಗಳು ಮತ್ತು ಹೊಸ ದಿನಚರಿಗಳಿಗೆ ಒಡ್ಡಿಕೊಳ್ಳುತ್ತಾರೆ. ಇದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಕಠಿಣ ಪರಿಣಾಮ ಬೀರುತ್ತದೆ. ಹಜ್ ಜ್ವರ ಬರುವ ಅಥವಾ ಅದನ್ನು ಇತರರಿಗೆ ಹರಡುವ ಸಾಧ್ಯತೆಗಳನ್ನು ಕಡಿಮೆ ಮಾಡಲು, ಯಾತ್ರಿಕರು ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಮೊದಲು ಕಡ್ಡಾಯ ಮತ್ತು ಶಿಫಾರಸು ಮಾಡಿರುವ ಲಸಿಕೆ ಪಡೆಯುವುದು ಅಗತ್ಯ.
ಮಾನಸಿಕ ಆರೋಗ್ಯ ಮುಖ್ಯ: ಹಜ್ ಯಾತ್ರೆಯ ಪ್ರಮಾಣ, ಧಾರ್ಮಿಕ ಮಹತ್ವ, ಪ್ರಾಯೋಗಿಕ ತೊಂದರೆಗಳು, ದೈಹಿಕ ಪರಿಶ್ರಮ ಮುಖ್ಯವಾಗಿದೆ. ನಿದ್ರಾಹೀನತೆ, ವಿಶಾಲವಾದ ಸಾಂಸ್ಕೃತಿಕ ಮತ್ತು ಭಾಷಾ ವ್ಯತ್ಯಾಸಗಳು ಕೂಡ ಸವಾಲಾಗುತ್ತವೆ.
ಈ ಅಂಶಗಳು ನಿಮ್ಮ ಶಾಂತತೆ, ದಯೆ ಮತ್ತು ತಾಳ್ಮೆಯನ್ನು ಕೆರಳಿಸಬಹುದು. ನಿಮ್ಮ ಆರೋಗ್ಯಕ್ಕೆ ಆದ್ಯತೆ, ಅಗತ್ಯವಿದ್ದಾಗ ವಿಶ್ರಾಂತಿ ಪಡೆಯುವುದರಿಂದ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: 2025ರ ಹೊಸ ಹಜ್ ನೀತಿ: ಸರ್ಕಾರಿ ಕೋಟಾದಡಿ ಪ್ರಯಾಣಿಸುವ ಯಾತ್ರಿಕರ ಸಂಖ್ಯೆ ಶೇ 10ರಷ್ಟು ಇಳಿಕೆ