ಮುಂಬೈ(ಮಹಾರಾಷ್ಟ್ರ): 2025-26ರ ಶೈಕ್ಷಣಿಕ ವರ್ಷದಿಂದ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸಲಾಗುತ್ತಿದೆ ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಹೊಸ ಪಠ್ಯಕ್ರಮವನ್ನು ಹಂತಹಂತವಾಗಿ ಜಾರಿ ಮಾಡಲಾಗುತ್ತದೆ. 2025-26ರ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಿಂದ ಪ್ರಾರಂಭವಾಗಿ 2028-29ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ, ಸರ್ಕಾರ 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಪಠ್ಯಕ್ರಮ ಅಭಿವೃದ್ಧಿಯನ್ನು ಎಸ್‌ಸಿಇಆರ್‌ಟಿ (ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಮತ್ತು ಬಾಲಭಾರತಿ ನಿರ್ವಹಿಸುತ್ತದೆ.
ವಿದ್ಯಾರ್ಥಿಗಳು ಹಳೆಯದರಿಂದ ನೇರವಾಗಿ ಹೊಸ ಪಠ್ಯಕ್ರಮಕ್ಕೆ ಪರಿವರ್ತನೆಗೊಳ್ಳುವ ತರಗತಿಗಳಿಗೆ SCERT ಸೇತುವೆ ಕೋರ್ಸ್ ಅನ್ನು ಸಹ ಸಿದ್ಧಪಡಿಸಿದೆ. 2025ರ ವೇಳೆಗೆ ಶೇ.80ರಷ್ಟು ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್ ಪರಿಕರಗಳಲ್ಲಿ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
ಹೊಸ ಪಠ್ಯಕ್ರಮದಡಿಯಲ್ಲಿ ಪರಿಚಯಿಸಿದ 5+3+3+4 ಶೈಕ್ಷಣಿಕ ರಚನೆಯ ಪ್ರಕಾರ, ಶಾಲಾ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಂಗಡಿಸುತ್ತದೆ. ಮೂಲಭೂತ ಹಂತ, ಪೂರ್ವಸಿದ್ಧತಾ ಹಂತ, ಮಧ್ಯಮ ಹಂತ ಮತ್ತು ಮಾಧ್ಯಮಿಕ ಹಂತವಾಗಿ ನಾಲ್ಕು ಹಂತಗಳನ್ನು ವಿಂಗಡಿಸುತ್ತದೆ ಎಂದೂ ಸಹ ಉಲ್ಲೇಖಿಸಿದೆ.
''ಹೊಸ ನೀತಿಯು ಹಿಂದಿನ 10+2+3 ವ್ಯವಸ್ಥೆಯನ್ನು 5+3+3+4 ಸ್ವರೂಪಕ್ಕೆ ಪುನರ್ ರಚಿಸುತ್ತದೆ. ಇದು ಮೂಲಭೂತ ಹಂತದಿಂದ ಉನ್ನತ ಮಟ್ಟದವರೆಗೆ ಶಿಕ್ಷಣವನ್ನು ಒಳಗೊಂಡಿದೆ. ಈ ನೀತಿಯನ್ನು ರಾಜ್ಯದಲ್ಲಿ ಇಡಿಯಾಗಿ ತರದೇ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಪ್ರವೇಶ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆ ಎಂಬ ಐದು ಸ್ತಂಭಗಳ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. 2030ರ ವೇಳೆಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುವಂತೆ ಯೋಜನೆ ರೂಪಿಸಿಕೊಳ್ಳಲಾಗಿದೆ'' ಎಂದು ರಾಜ್ಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ತುಷಾರ್ ಮಹಾಜನ್ ಅಧಿಸೂಚನೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಧಿಸೂಚನೆಯ ಪ್ರಕಾರ, ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಶಿಫಾರಸು ಮಾಡಿದಂತೆ 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಇದರಲ್ಲಿ ಮೊದಲ ಐದು ವರ್ಷಗಳು (3 ವರ್ಷ ಪೂರ್ವ ಪ್ರಾಥಮಿಕ, 1 ಮತ್ತು 2ನೇ ತರಗತಿಗಳು) ಮೂಲಭೂತ ಹಂತವಾಗಿರುತ್ತವೆ. 3ರಿಂದ 5ನೇ ತರಗತಿಗಳು ಪೂರ್ವಸಿದ್ಧತಾ ಹಂತವಾಗಿರುತ್ತವೆ. 6ರಿಂದ 8ನೇ ತರಗತಿಗಳು ಮಾಧ್ಯಮಿಕ ಶಾಲೆಯ ಅಡಿಯಲ್ಲಿ ಒಳಗೊಂಡಿರುತ್ತವೆ. ಕೊನೆಯ ನಾಲ್ಕು ವರ್ಷಗಳು (9ರಿಂದ 12ನೇ ತರಗತಿಗಳು) ಮಾಧ್ಯಮಿಕ ಶಿಕ್ಷಣವಾಗಿರುತ್ತದೆ.
ಮಹಾರಾಷ್ಟ್ರ ಸರ್ಕಾರವು ಹಂತ ಹಂತವಾಗಿ ಅನುಷ್ಠಾನಕ್ಕಾಗಿ ಹಲವಾರು ಸಮಿತಿಗಳನ್ನು ರಚಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಇದರಲ್ಲಿ ಶಾಲಾ ಶಿಕ್ಷಣ ಸಚಿವರ ಅಧ್ಯಕ್ಷತೆಯ ರಾಜ್ಯ ಸ್ಟೀರಿಂಗ್ ಸಮಿತಿಯೂ ಸೇರಿದೆ. ಇದಲ್ಲದೆ, ಮಹಾರಾಷ್ಟ್ರ ರಾಜ್ಯ ಮಂಡಳಿಯ ಪಠ್ಯಪುಸ್ತಕಗಳು ಇದೀಗ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಭಿವೃದ್ಧಿಪಡಿಸಿದ ಪಠ್ಯಕ್ರಮವನ್ನು ಆಧರಿಸಿದ್ದು, ಮಹಾರಾಷ್ಟ್ರದ ಸ್ಥಳೀಯ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಅದರಂತೆ, 1ನೇ ತರಗತಿಯ ಪಠ್ಯಪುಸ್ತಕಗಳನ್ನು ಬಾಲಭಾರತಿ ಪ್ರಕಟಿಸುತ್ತಿದೆ.
ಇದನ್ನೂ ಓದಿ: 1ನೇ ತರಗತಿ ಪ್ರವೇಶ ವಯೋಮಿತಿ 5 ವರ್ಷ 5 ತಿಂಗಳಿಗೆ ಇಳಿಸಿದ ರಾಜ್ಯ ಸರ್ಕಾರ - ADMISSION TO CLASS 1