ಥಾಣೆ, ಮಹಾರಾಷ್ಟ್ರ: ಕಲ್ಯಾಣ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯ ಸ್ಲ್ಯಾಬ್ ಕೆಳಗಿನ ಮಹಡಿ ಮೇಲೆ ಕುಸಿದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಎರಡು ವರ್ಷದ ಬಾಲಕಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
52 ಕುಟುಂಬಗಳನ್ನು ಹೊಂದಿದ್ದ 30 ವರ್ಷ ಹಳೆಯ ಶ್ರೀ ಸಪ್ತಶೃಂಗಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನೆಲಹಾಸು ಕೆಲಸ ಮಾಡುವಾಗ ಈ ಘಟನೆ ಸಂಭವಿಸಿದೆ ಎಂದು ಕಲ್ಯಾಣ್ ಉಪ-ವಿಭಾಗೀಯ ಅಧಿಕಾರಿ (ಎಸ್‌ಡಿಒ) ವಿಶ್ವಾಸ್ ಗುಜಾರ್ ಹೇಳಿದ್ದಾರೆ. ಈ ಕಟ್ಟಡವು ಕಲ್ಯಾಣ್ ಪೂರ್ವದ ಜನನಿಬಿಡ ಮಂಗಳರಾಘೋ ನಗರದಲ್ಲಿದೆ.
ಆರಂಭದಲ್ಲಿ ನಾಲ್ಕನೇ ಮಹಡಿಯ ಸ್ಲ್ಯಾಬ್ ಕುಸಿದಿದ್ದರಿಂದ 11 ನಿವಾಸಿಗಳು ಅವಶೇಷಗಳ ಅಡಿ ಸಿಲುಕಿಕೊಂಡರು ಎಂದು ಎಸ್‌ಡಿಒ ತಿಳಿಸಿದ್ದಾರೆ. ಕುಸಿತದ ನಂತರ, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಮತ್ತು ಜಿಲ್ಲಾ ವಿಪತ್ತು ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಮೃತರನ್ನು ನಮಸ್ವಿ ಶ್ರೀಕಾಂತ್ ಶೇಲಾರ್ (2), ಪ್ರಮೀಳಾ ಕಲ್ಚರಣ್ ಸಾಹು (56), ಸುನೀತಾ ನೀಲಾಂಚಲ್ ಸಾಹು (38), ಸುಶೀಲಾ ನಾರಾಯಣ್ ಗುಜರ್ (78), ವೆಂಕಟ್ ಭೀಮಾ ಚವಾಣ್ (42) ಮತ್ತು ಸುಜಾತಾ ಮನೋಜ್ ವಾಡಿ (38) ಎಂದು ಗುರುತಿಸಲಾಗಿದೆ.
ಮೃತರಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ: ಮೂರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಮೃತರ ಸಂಬಂಧಿಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ .
ಆರು ಜೀವಗಳನ್ನು ಬಲಿ ಪಡೆದ ಕಲ್ಯಾಣ್‌ನಲ್ಲಿ ಕಟ್ಟಡ ಕುಸಿತದ ಸುದ್ದಿಯಿಂದ ತೀವ್ರ ನೋವುಂಟಾಗಿದೆ. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಫಡ್ನವೀಸ್ ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಗತ್ಯವಿರುವ ಎಲ್ಲ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿವೆ ಎಂದು ಅವರು ಭರವಸೆ ನೀಡಿದರು.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ ಡಿಸಿಎಂ: ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗಾಯಾಳುಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ತ್ವರಿತ ರಕ್ಷಣಾ ಕಾರ್ಯಾಚರಣೆಗೆ ನಿರ್ದೇಶನ ನೀಡಿದ್ದಾರೆ. ಅಗತ್ಯವಿದ್ದರೆ, ಮೃತರ ಸಂಬಂಧಿಕರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಶಿಂಧೆ ಹೇಳಿದ್ದಾರೆ.
ಕಟ್ಟಡದ ಉಳಿದ ನಿವಾಸಿಗಳನ್ನು ತಾತ್ಕಾಲಿಕ ಆಶ್ರಯಗಳಿಗೆ ಸ್ಥಳಾಂತರಿಸಬೇಕು ಎಂದು ಅವರು ಸೂಚನೆ ನೀಡಿದರು. ಕೆಡಿಎಂಸಿ ಹೆಚ್ಚುವರಿ ಮುನ್ಸಿಪಲ್ ಆಯುಕ್ತ ಹರ್ಷಲ್ ಗಾಯಕ್ವಾಡ್ ಮಾತನಾಡಿ, ಈ ಕಟ್ಟಡವು ಸುಮಾರು 30 ವರ್ಷ ಹಳೆಯದಾಗಿದೆ. ಆದರೆ ಅದು ಅಪಾಯಕಾರಿ ಕಟ್ಟಡಗಳ ಪಟ್ಟಿಯಲ್ಲಿಲ್ಲ ಎಂದು ತಿಳಿಸಿದ್ದಾರೆ.
ಕೆಡಿಎಂಸಿ ತನ್ನ ಮಿತಿಯಲ್ಲಿರುವ 513 ಕಟ್ಟಡಗಳನ್ನು ಅಪಾಯಕಾರಿ ಅಥವಾ ಅತ್ಯಂತ ಅಪಾಯಕಾರಿ ಎಂದು ಘೋಷಿಸಿದೆ ಎಂಬ ಮಾಹಿತಿಯನ್ನು ಇದೇ ವೇಳೆ ಅವರು ನೀಡಿದ್ಧಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕುಸಿತದ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ.
ತಡರಾತ್ರಿಯ ವೇಳೆಗೆ ಶೋಧ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಕಟ್ಟಡದ ನಿವಾಸಿಗಳನ್ನು ಹತ್ತಿರದ ಜ್ಞಾನಮಂದಿರ ವಿದ್ಯಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ:ಶಿವಗಂಗೈ ಬಳಿಯ ಕ್ವಾರಿಯಲ್ಲಿ ಭೂಕುಸಿತ: ಐವರು ಕಾರ್ಮಿಕರು ಸಾವು