ನಾಗ್ಪುರ(ಮಹಾರಾಷ್ಟ್ರ): ಗುಜರಾತ್ನ ಜಾಮ್ ನಗರ ಜಿಲ್ಲೆಯಲ್ಲಿರುವ ಅನಂತ್ ಅಂಬಾನಿ ಒಡೆತನದ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಾದ ವಂತಾರಾ 43 ಜಾತಿಯ ಎರಡು ಸಾವಿರಕ್ಕೂ ಹೆಚ್ಚು ಪ್ರಾಣಿಗಳಿಗೆ ನೆಲೆ ಕಲ್ಪಿಸಿದೆ. ಪ್ರಾಣಿಗಳನ್ನು ಸಂರಕ್ಷಿಸಲು ಮಹಾರಾಷ್ಟ್ರ ಸರ್ಕಾರವು ಗುಜರಾತ್ನ ವಂತಾರಾದಂತೆ 'ಸೂರ್ಯತಾರಾ' ಎಂಬ ವನ್ಯಜೀವಿ ಅಭಯಾರಣ್ಯ ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ ಸಹಕಾರ ನೀಡುವಂತೆ ಅನಂತ್ ಅಂಬಾನಿ ಅವರನ್ನು ಕೋರಲಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ ಮೂರು ತಿಂಗಳಲ್ಲಿ ವಿವಿಧ ಕಾರಣಗಳಿಂದ 19 ಹುಲಿಗಳ ಮೃತಪಟ್ಟಿವೆ ಮತ್ತು ಬೇಟೆಗಾರರಿಂದ ನಾಲ್ಕು ಹುಲಿಗಳು ಬಲಿಯಾಗಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆ ರಾಜ್ಯ ಅರಣ್ಯ ಸಚಿವ ಗಣೇಶ್ ನಾಯಕ್ ನಾಗ್ಪುರದ ಅರಣ್ಯ ಇಲಾಖೆಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಾಣಿಗಳ ಸಾವು ತಡೆಯುವ ಸಂಬಂಧ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ.
ಪ್ರಸ್ತುತ, ರಾಜ್ಯದಲ್ಲಿ 446 ಹುಲಿಗಳಿವೆ. ಚಂದ್ರಾಪುರ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹುಲಿಗಳಿವೆ. ಕಳೆದ ಮೂರು ತಿಂಗಳಲ್ಲಿ 19 ಹುಲಿಗಳು ಸಾವನ್ನಪ್ಪಿದ್ದು, ನಾಲ್ಕು ಹುಲಿಗಳನ್ನು ಬೇಟೆಯಾಡಲಾಗಿದೆ. ಕೆಲವು ಹಸಿವಿನಿಂದ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೂರ್ಯತಾರಾ ನಿರ್ಮಿಸಲು ಭೂಮಿ ಗುರುತಿಸಲಾಗಿದೆ: ಮಹಾರಾಷ್ಟ್ರದ ಥಾಣೆಯಲ್ಲಿ ಸೂರ್ಯತಾರಾ ಅಭಯಾರಣ್ಯ ಪ್ರಾರಂಭಿಸಲು ಸಹಕಾರ ನೀಡುವಂತೆ ಕೋರಿ ಅನಂತ್ ಅಂಬಾನಿ ಅವರಿಗೆ ಪತ್ರವನ್ನು ಬರೆಯಲಾಗಿದೆ. ಈ ಯೋಜನೆಗೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾನಾ ಯೋಜನೆಗಳ ಅನುಷ್ಠಾನದಲ್ಲಿ ಅರಣ್ಯ ಇಲಾಖೆಯಿಂದ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಗಣೇಶ್ ನಾಯಕ್ ಮಾಹಿತಿ ನೀಡಿದರು.
ವಿವಿಧ ಉಪಕ್ರಮಗಳ ಮೂಲಕ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ, ಲಭ್ಯ ಇರುವ ಭೂಮಿಯಲ್ಲಿ ಬಿದಿರನ್ನು ನೆಡಲು ಅರಣ್ಯ ಅಭಿವೃದ್ಧಿ ನಿಗಮವನ್ನು ಸೂಚಿಸಲಾಗಿದೆ. ಇದರೊಂದಿಗೆ, ಮರಾಠಾವಾಡದಲ್ಲಿ ಮೂಸಂಬಿ, ವಿದರ್ಭದಲ್ಲಿ ಕಿತ್ತಳೆ, ನಾಸಿಕ್ ಪ್ರದೇಶದಲ್ಲಿ ದ್ರಾಕ್ಷಿ ಮತ್ತು ಪಶ್ಚಿಮ ಮಹಾರಾಷ್ಟ್ರದ ದಾಳಿಂಬೆಯಂತಹ ಹಣ್ಣಿನ ಮರಗಳನ್ನು ನೆಡುವ ಮೂಲಕ ಹಣ್ಣಿನ ರಸ ಉತ್ಪಾದನೆ ಮೂಲಕ ಇಲಾಖೆಯ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದರ ಜೊತೆಗೆ ಅರಣ್ಯ ಇಲಾಖೆಯು ಸಮೃದ್ಧಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಮರ ನೆಡುವಿಕೆ ಕಾರ್ಯ ಮಾಡುತ್ತಿದೆ. ಅರಣ್ಯದ ಮರಗಳಿಂದ ಗುಣಮಟ್ಟದ ಪೀಠೋಪಕರಣಗಳನ್ನು ತಯಾರಿಸಲು ನಾಗ್ಪುರದಲ್ಲಿ ದೊಡ್ಡ ಕಾರ್ಖಾನೆ ಪ್ರಾರಂಭಿಸುವ ಕನಸನ್ನು ಮಾಜಿ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೊಂದಿದ್ದರು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಏಳು ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಮಾಸಿಕ 10 ಕೋಟಿ ರೂ. ಹೂಡಿಕೆಯಲ್ಲಿ ಪೀಠೋಪಕರಣ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಕಾಡುಗಳ್ಳರು ಹಿಂದೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಆದರೆ ಇದೀಗ ಅವರು ನಗರಗಳಲ್ಲಿ ನೆಲೆಸಿದ್ದಾರೆ. ರಾಜೂರದಲ್ಲಿ ಸಿಕ್ಕಿಬಿದ್ದ ಕಳ್ಳ ಬೇಟೆಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕವಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕಳ್ಳಬೇಟೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಶೀಘ್ರ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಜಾಮ್ನಗರ್ನಲ್ಲಿ ವಂತಾರಾ ಉದ್ಘಾಟಿಸಿದ ಪ್ರಧಾನಿ ; ವನ್ಯ ಪ್ರಾಣಿಗಳೊಂದಿಗೆ ಬೆರೆತು ಮೋದಿ ಸಂತಸ