ತೆಂಕಾಸಿ: ತಮಿಳುನಾಡಿನಲ್ಲಿ ಸುಡು ಬಿಸಿಲಿನ ಬೇಗೆ ಆರಂಭವಾಗಿದೆ. ಬಿಸಿಲಿನ ಬೇಗೆ ತಡೆಯಲಾಗದೆ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬಾಯಾರಿಕೆ ಹಿಂಗಿಸಿಕೊಳ್ಳಲು ನಿಂಬೆ ಜ್ಯೂಸ್ಗಿಂತ ಉತ್ತಮ ಪಾನೀಯ ಮತ್ತೊಂದಿಲ್ಲ. ನಿಂಬೆ ಶರಬತ್ತು ಬಾಯಾರಿಕೆ ಹಿಂಗಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಶರಬತ್, ಅಡುಗೆ, ಸೋಂಕು ನಿವಾರಕವಾಗಿ ಬಳಕೆ ಹಾಗೂ ಪೂಜೆಗೂ ಬೇಕಾದ ನಿಂಬೆ ಹಣ್ಣು ನಮ್ಮ ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ಪಡೆದಿದೆ.
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಪುಲಿಯಂಗುಡಿ ಹೆಸರಿನ ಊರು ಲೆಮನ್ ಸಿಟಿ ಎಂದೇ ಹೆಸರಾಗಿರುವುದು ವಿಶೇಷ. ಈ ಪ್ರದೇಶದಲ್ಲಿ ವಿವಿಧ ತಳಿಗಳ ನಿಂಬೆ ಹಣ್ಣುಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದ ಅನನ್ಯತೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಭೌಗೋಳಿಕ ಸೂಚಕವನ್ನು ನೀಡಿದೆ. ಈ ಲೆಮನ್ ಸಿಟಿಯ ವಿಶೇಷತೆ ಏನು ಎಂಬುದನ್ನು ನೋಡೋಣ.
ತೆಂಕಾಸಿ ಇದು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ನೈಸರ್ಗಿಕ ಸೌಂದರ್ಯದಿಂದ ಆವೃತವಾದ ಜಿಲ್ಲೆಯಾಗಿದೆ. ಜಿಲ್ಲೆಯ ಪುಲಿಯಂಗುಡಿ ಸುಂದರವಾದ ನೈಸರ್ಗಿಕ ಪರಿಸರದ ನಡುವೆ ಇರುವ ಒಂದು ಪಟ್ಟಣವಾಗಿದೆ. ರಾಜಪಾಲಯಂನಿಂದ ಕೇರಳಕ್ಕೆ ಹೋಗುವ ದಾರಿಯಲ್ಲಿ, ಪುಲಿಯಂಗುಡಿ ಮತ್ತು ಅದರ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಹಳ್ಳಿಗಳು ಮುಖ್ಯವಾಗಿ ನಿಂಬೆ ಕೃಷಿಯಲ್ಲಿ ತೊಡಗಿವೆ. ಇಲ್ಲಿನ ಹವಾಮಾನ ಪರಿಸ್ಥಿತಿಗಳು ಕೂಡ ನಿಂಬೆ ಕೃಷಿಗೆ ಪೂರಕವಾಗಿವೆ. ಈ ಪ್ರದೇಶದ ಸುಮಾರು 5,000 ಎಕರೆ ಪ್ರದೇಶದಲ್ಲಿ 1500 ಕ್ಕೂ ಹೆಚ್ಚು ರೈತರು ನಿಂಬೆ ಕೃಷಿಯಲ್ಲಿ ತೊಡಗಿದ್ದಾರೆ.

ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನೀರು, ಗಾಳಿ ಮತ್ತು ಮಣ್ಣಿನ ಸಂಪನ್ಮೂಲಗಳಿಂದಾಗಿ ಇಲ್ಲಿ ಬೆಳೆಯುವ ನಿಂಬೆ ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಿಟ್ರಿಕ್ ಆಮ್ಲ ಅಧಿಕವಾಗಿರುತ್ತದೆ ಎಂದು ರೈತರು ಹೇಳುತ್ತಾರೆ. ಇದು ಮಾತ್ರವಲ್ಲದೆ ಈ ನಿಂಬೆ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ರಸ ಹೊಂದಿರುವುದು ವಿಶೇಷ. ತನ್ನ ಸುವಾಸನೆಯಿಂದಲೇ ಎಲ್ಲರನ್ನೂ ಆಕರ್ಷಿಸುವ ಈ ನಿಂಬೆ ಹಣ್ಣುಗಳ ಬಗ್ಗೆ ನಮ್ಮ ಈಟಿವಿ ಭಾರತ್ ತಮಿಳುನಾಡು ತಂಡವು ತಯಾರಿಸಿದ ವಿಶೇಷ ವರದಿ ಇಲ್ಲಿದೆ.
ನಾವು ಪುಲಿಯಂಗುಡಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ನಿಂಬೆಹಣ್ಣಿನ ಸುವಾಸನೆ ನಮಗೆ ಆಹ್ಲಾದ ಉಂಟು ಮಾಡಿತು. ಪಶ್ಚಿಮ ಘಟ್ಟಗಳ ಗಾಳಿಯೊಂದಿಗೆ ಬೆರೆತ ನಿಂಬೆಹಣ್ಣಿನ ಪರಿಮಳವನ್ನು ಉಸಿರಾಡುತ್ತಾ ನಾವು ಹಳ್ಳಿಯ ಪಶ್ಚಿಮ ಭಾಗದಲ್ಲಿರುವ ತೋಟಕ್ಕೆ ಹೋದೆವು. ರೈತರು ಎಕರೆಗಟ್ಟಲೆ ನಿಂಬೆ ಮರಗಳನ್ನು ನೆಟ್ಟು ನಿರ್ವಹಿಸುವುದು ಇಲ್ಲಿ ಕಂಡು ಬಂದಿತು. ಇಲ್ಲಿನ ಗಿಡಗಳಲ್ಲಿ ಬೆಳೆದ ಗಾಢ ಹಸಿರು ಬಣ್ಣದ ನಿಂಬೆ ಹಣ್ಣುಗಳು ನೋಡಲು ಆಕರ್ಕವಾಗಿದ್ದವು. ಇನ್ನು ಇವು ಹಣ್ಣಾದಾಗ ಸುಂದರವಾದ ಹಳದಿ ಬಣ್ಣಕ್ಕೆ ತಿರುಗುತ್ತವೆ.

ಹಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಮರದಲ್ಲಿ ಬಿಡುವುದಿಲ್ಲ. ಹಣ್ಣಾದಾಗ ಅವು ತಾವಾಗಿಯೇ ಗಿಡದಿಂದ ಉದುರುವ ಕಾರಣದಿಂದ ರೈತರು ಅದಕ್ಕೂ ಮೊದಲೇ ಅವುಗಳನ್ನು ಕಿತ್ತು ಸಂಗ್ರಹಿಸುತ್ತಾರೆ. ನಾವು ಭೇಟಿ ನೀಡಿದ ಸಮಯದಲ್ಲಿ ಮಹಿಳಾ ಕಾರ್ಮಿಕರು ಮರಗಳಿಂದ ಮಾಗಿದ ಹಣ್ಣುಗಳನ್ನು ಕೀಳುವಲ್ಲಿ ನಿರತರಾಗಿದ್ದರು. ಮತ್ತೊಂದೆಡೆ, ರೈತರು ಅವರನ್ನು ಗ್ರಾಮದ ಮಧ್ಯದಲ್ಲಿರುವ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದರಲ್ಲಿ ನಿರತರಾಗಿದ್ದರು.
ಇಲ್ಲಿ ಕೆಲಸ ಮಾಡುತ್ತಿದ್ದ ರೈತ ಅಬ್ದುಲ್ ಖಾದರ್ ಎಂಬುವರನ್ನು ನಾವು ಮಾತನಾಡಿಸಿದೆವು. ನಿಂಬೆ ಕೃಷಿಯ ಬಗ್ಗೆ ಮಾತನಾಡಿದ ಅವರು, "ಪುಲಿಯಂಗುಡಿ ನಿಂಬೆ ಭೌಗೋಳಿಕ ಟ್ಯಾಗ್ ಪಡೆದಿರುವುದು ಸಂತೋಷದ ಸಂಗತಿ. ಆದರೆ, ನಮ್ಮ ಪ್ರದೇಶದಲ್ಲಿ ನಿಂಬೆ ಸಂಸ್ಕರಣಾ ಸಂಬಂಧಿತ ಕಾರ್ಖಾನೆ ಇಲ್ಲ. ಇಲ್ಲಿ ಕಾರ್ಖಾನೆ ಇದ್ದಿದ್ದರೆ ನಮಗೆ ಉತ್ತಮ ಬೆಲೆ ಸಿಗಬಹುದು. ಪ್ರಸ್ತುತ, ನಾವು ಹಣ್ಣುಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತೇವೆ. ಅವರು ನಮ್ಮಿಂದ ಕಡಿಮೆ ಬೆಲೆಗೆ ಖರೀದಿಸುತ್ತಾರೆ ಮತ್ತು ಸಾಕಷ್ಟು ಲಾಭ ಗಳಿಸುತ್ತಾರೆ." ಎಂದು ಹೇಳಿದರು.
"ವ್ಯಾಪಾರಿಗಳು ನಮ್ಮಿಂದ ಪ್ರತಿ ಕೆ.ಜಿ.ಗೆ 20 ರೂ.ಗಳಂತೆ ಖರೀದಿಸುತ್ತಾರೆ ಮತ್ತು ಅನೇಕ ಪಟ್ಟು ಲಾಭ ಇಟ್ಟು ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ನಮ್ಮ ಪ್ರದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಬೇಕು. ಹಾಗೆಯೇ ಬೆಲೆ ಕಡಿಮೆಯಾದಾಗ ಹಣ್ಣುಗಳನ್ನು ಸಂಸ್ಕರಿಸಲು ಇಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಆರಂಭಿಸಬೇಕೆಂದು ನಾವು ಅನೇಕ ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಒಂದು ನಿಂಬೆ ಮರ ಹಣ್ಣು ಬಿಡಲು ಗರಿಷ್ಠ 7 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ, ಮರಗಳನ್ನು ನಿರ್ವಹಿಸುವಲ್ಲಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ವಿಶೇಷವಾಗಿ ಕಾಡು ಪ್ರಾಣಿಗಳ ಸಮಸ್ಯೆಗಳಿವೆ. ಅರಣ್ಯ ಇಲಾಖೆ ಕಚೇರಿಯನ್ನು ನಮ್ಮ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಕಾಡು ಪ್ರಾಣಿಗಳು ನಿಂಬೆ ಮರಗಳಿಗೆ ಹಾನಿ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಖಾದರ್ ತಿಳಿಸಿದರು.

ನಿಂಬೆಹಣ್ಣಿನ ಕಟ್ಟುಗಳನ್ನು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ತುಂಬಿಸಿದ ಖಾದರ್, ಮಾರುಕಟ್ಟೆ ಬೆಳಿಗ್ಗೆ 11 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ಹೇಳಿ ಅವಸರದಲ್ಲಿ ಹೊರಟರು.
ನಂತರ ನಾವು ಅವರೊಂದಿಗೆ ಮಾರುಕಟ್ಟೆಗೆ ಹೋದೆವು. ಮಾರುಕಟ್ಟೆಯಲ್ಲಿ ಏಜೆಂಟರು ರೈತರಿಂದ ಹಣ್ಣುಗಳನ್ನು ಖರೀದಿಸಿ ವ್ಯಾಪಾರಿಗಳಿಗೆ ಹರಾಜು ಮಾಡಲು ಪ್ರಾರಂಭಿಸಿದರು. ನೆರೆಯ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದ ವ್ಯಾಪಾರಿಗಳು ಹರಾಜಿನಲ್ಲಿ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಖರೀದಿಸಿದ್ದು ಕಂಡು ಬಂದಿತು. ಪುಲಿಯಂಗುಡಿ ನಿಂಬೆಹಣ್ಣುಗಳು ತಮಿಳುನಾಡಿಗಿಂತ ಕೇರಳದಲ್ಲಿ ಹೆಚ್ಚು ಜನಪ್ರಿಯವಾಗಿರುವುದನ್ನು ನಾವು ಕಂಡುಕೊಂಡೆವು.
ಮಾರುಕಟ್ಟೆಯಲ್ಲಿನ ವ್ಯಾಪಾರಿ ಮೊಹಮ್ಮದ್ ಇಬ್ರಾಹಿಂ ಎಂಬುವರನ್ನು ನಾವು ಮಾತನಾಡಿಸಿದೆವು.
"ನಾವು ಇಲ್ಲಿ ದಿನಕ್ಕೆ 250 ಟನ್ ನಿಂಬೆಹಣ್ಣು ಮಾರಾಟ ಮಾಡುತ್ತೇವೆ. ಈ ವರ್ಷ ಇಳುವರಿ ಹೆಚ್ಚಾಗಿದೆ, ಆದರೆ ಬೇಡಿಕೆ ಕಡಿಮೆ ಇದೆ. ಈ ಮೊದಲು, ನಾವು ವಿದೇಶಗಳಿಗೆ ಸಾಕಷ್ಟು ರಫ್ತು ಮಾಡುತ್ತಿದ್ದೆವು. ಆದರೆ ಈಗ ರಫ್ತು ದೊಡ್ಡ ಪ್ರಮಾಣದಲ್ಲಿ ಇಲ್ಲ. ಈ ವ್ಯವಹಾರವು ಕೇರಳವನ್ನು ಆಧರಿಸಿದೆ. ವ್ಯಾಪಾರಿಗಳು ಹಸಿರು ಹಣ್ಣುಗಳಿಗೆ ಆದ್ಯತೆ ನೀಡುತ್ತಾರೆ." ಎಂದು ಇಬ್ರಾಹಿಂ ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಮತ್ತೊಬ್ಬ ವ್ಯಾಪಾರಿ ಸೀನಿಸಾಮಿ, "ವಿಯೆಟ್ನಾಂನಲ್ಲಿ ಸರ್ಕಾರವು ನಿಂಬೆಹಣ್ಣುಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಒದಗಿಸಿದೆ. ಈ ಮೂಲಕ ಅವರು ದೊಡ್ಡ ಪ್ರಮಾಣದಲ್ಲಿ ನಿಂಬೆಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಈ ಮೊದಲು ಇಲ್ಲಿಂದ ಮಾಲ್ಡೀವ್ಸ್ ಗೆ ದಿನಕ್ಕೆ 10 ಟನ್ ನಿಂಬೆಹಣ್ಣುಗಳನ್ನು ರಫ್ತು ಮಾಡಲಾಗುತ್ತಿತ್ತು. ಅಲ್ಲದೆ ನಾವು ಪ್ರತಿದಿನ ದುಬೈಗೆ 24 ಟನ್ ರಫ್ತು ಮಾಡಿದ್ದೇವೆ. ಆದರೆ ಕೊರೊನಾ ಬಂದ ನಂತರ ಈ ಎರಡು ದೇಶಗಳಿಗೆ ರಫ್ತು ಸಂಪೂರ್ಣವಾಗಿ ನಿಂತುಹೋಗಿದೆ." ಎಂದರು.
"ಈ ಪ್ರದೇಶದಲ್ಲಿ ರೈಲು ಸಾರಿಗೆಯ ಕೊರತೆಯಿಂದಾಗಿ ನಾವು ಇತರ ರಾಜ್ಯಗಳಿಗೆ ಹಣ್ಣು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಂತ ರಾಜ್ಯಗಳಿಗೆ ನಿಂಬೆ ಕಳುಹಿಸಬೇಕಾದರೆ ನಾವು ಇಲ್ಲಿಂದ 90 ಕಿ.ಮೀ ದೂರದಲ್ಲಿರುವ ತಿರುನೆಲ್ವೇಲಿಗೆ ಹೋಗಿ ಅಲ್ಲಿಂದ ರೈಲಿಗೆ ನಿಂಬೆ ಹಣ್ಣು ಹಾಕಬೇಕಾಗುತ್ತದೆ. ಇದನ್ನು ತಪ್ಪಿಸಲು ಹತ್ತಿರದ ತೆಂಕಾಸಿ ಮತ್ತು ಸೆಂಗೊಟ್ಟೈನಿಂದ ಹೆಚ್ಚುವರಿ ರೈಲು ಸೌಲಭ್ಯಗಳನ್ನು ಒದಗಿಸಬೇಕು." ಎಂದು ಅವರು ಹೇಳಿದರು.
ಭೌಗೋಳಿಕ ಟ್ಯಾಗ್ (ಜಿಐ) ಮೂಲಕ ಇಲ್ಲಿನ ನಿಂಬೆಹಣ್ಣುಗಳು ಜಾಗತಿಕ ಮಾನ್ಯತೆಯನ್ನು ಪಡೆದಿರುವುದು ರೈತರು ಮತ್ತು ವ್ಯಾಪಾರಿಗಳಲ್ಲಿ ಸಂತೋಷ ತಂದಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರುಕಟ್ಟೆಯನ್ನು ಸರಳೀಕರಿಸಲು ಸಹಾಯ ಮಾಡಬೇಕು ಎಂದು ಅವರು ಒತ್ತಿಹೇಳಿದರು.
ಲೇಖನ: ಆರ್.ಮಣಿಕಂದನ್
ಇದನ್ನೂ ಓದಿ : ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಏ.17ರಂದು ಅಂತಿಮ ನಿರ್ಧಾರ - CASTE CENSUS REPORT