ವಯನಾಡ್(ಕೇರಳ): ಲೆಬನಾನ್ನಾದ್ಯಂತ ಮಂಗಳವಾರ ಮತ್ತು ಬುಧವಾರ ಸಂಭವಿಸಿದ ಪೇಜರ್ಗಳು ಮತ್ತು ವಾಕಿಟಾಕಿಗಳ ಸ್ಪೋಟ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 2,931ಕ್ಕೆ ತಲುಪಿದೆ ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ಗುರುವಾರ ತಿಳಿಸಿದ್ದರು. ಇದರ ನಡುವೆ ಈಗ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕೇರಳ ಮೂಲದ ವ್ಯಕ್ತಿ ನಂಟು ಹೊಂದಿರುವ ಶಂಕೆ ಇದ್ದು, ಕಂಪನಿಯ ವಿರುದ್ಧ ತನಿಖೆ ಆರಂಭವಾಗುವ ಬಗ್ಗೆ ತಿಳಿದು ಬಂದಿದೆ.
ಲೆಬನಾನ್ ಪೇಜರ್ ಸ್ಫೋಟ ಪ್ರಕರಣದಲ್ಲಿ ರಿನ್ಸನ್ ಜೋಸ್ ನಂಟು ಹೊಂದಿರುವ ನೋರ್ಟಾ ಗ್ಲೋಬಲ್ ಲಿಮಿಟೆಡ್ ಕಂಪನಿಯ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂಬ ಸುದ್ದಿಯನ್ನು ವಿದೇಶಿ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ ಎಂದು ರಿನ್ಸನ್ ಚಿಕ್ಕಪ್ಪ ತಂಗಚನ್ ಹೇಳಿದ್ದಾರೆ.
ಸಂಪರ್ಕ ಸಾಧ್ಯವಾಗುತ್ತಿಲ್ಲ: ರಿನ್ಸನ್ ಕಳೆದ ನವೆಂಬರ್‌ನಲ್ಲಿ ನಾರ್ವೆಯಿಂದ ಮನೆಗೆ ಬಂದಿದ್ದ. ನಂತರ ಅವರು ಈ ವರ್ಷದ ಜನವರಿಯಲ್ಲಿ ನಾರ್ವೆಗೆ ಮರಳಿದ್ದರು. ರಿನ್ಸನ್ ತನ್ನ ಹೆಂಡತಿಯೊಂದಿಗೆ ನಾರ್ವೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ, ಕಳೆದ ಮೂರು ದಿನಗಳಿಂದ ಇಬ್ಬರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಂಗಚನ್ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಕೇರಳ ಪೊಲೀಸ್ ಸ್ಪೆಷಲ್ ಬ್ರಾಂಚ್ ರಿನ್ಸನ್ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಪಿ.ಎಲ್. ಸೈಜು ಮಾತನಾಡಿ, ರಿನ್ಸನ್ಗೆ ಸಂಬಂಧಿಸಿದ ಕಂಪನಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ಕುಟುಂಬಕ್ಕೆ ಮಾಹಿತಿಯ ಕೊರತೆಯಿದೆ ಎಂದು ತಿಳಿಸಿದ್ದಾರೆ. ಇನ್ನು ರಿನ್ಸನ್ ಕುಟುಂಬದ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಂಬಿಎ ವ್ಯಾಸಂಗ ಮಾಡಿರುವ ರಿನ್ಸನ್: ವಯನಾಡಿನ ಮಾನಂತವಾಡಿ ನಿವಾಸಿಯಾದ ರಿನ್ಸನ್, ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ 2008 ರಿಂದ 2010 ರವರೆಗೆ ಎಂಬಿಎ ವ್ಯಾಸಂಗ ಮಾಡಿ ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ನಾರ್ವೆಗೆ ಹೋಗಿ ಸಮಾಜಕಾರ್ಯ ಮತ್ತು ಧರ್ಮಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದು ಅವರ ಲಿಂಕ್ಡ್‌ಇನ್ ಖಾತೆಯಿಂದ ಸ್ಪಷ್ಟವಾಗಿದೆ. 2015 ರಿಂದ ನಾರ್ವೆಯಲ್ಲಿ ಖಾಯಂ ನಿವಾಸಿಯಾಗಿರುವ ರಿನ್ಸನ್ ಜೋಸ್ ಅವರು ನಾರ್ವೆಯ ಪೌರತ್ವವನ್ನೂ ಪಡೆದಿದ್ದಾರೆ. ನಾರ್ವೆಯ ಓಸ್ಲೋದಲ್ಲಿ ಶಾಶ್ವತ ನಿವಾಸಿಯಾದ ರಿನ್ಸನ್ ಅವರು ಬಲ್ಗೇರಿಯಾದಲ್ಲಿ ಶೆಲ್ ಕಂಪನಿ ಪ್ರಾರಂಭಿಸಿದ್ದಾರೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ.