ETV Bharat / bharat

ಓದಿದ್ದು ಬರೀ ಹತ್ತನೇ ತರಗತಿ: ಆದರೀಗ 20 ಕೋಟಿ ವಾರ್ಷಿಕ ಆದಾಯ ಗಳಿಸುತ್ತಿರುವ ಕೃಷಿಕ!; ಈ ಸಾಧನೆಗೆ ಸ್ಪೂರ್ತಿ ಏನು?

ತಮ್ಮ ಈ ಅದ್ಭುತವಾದ ಕೃಷಿ ಸಾಧನೆಗೆ ಅವರ ಅತ್ತೆ- ಮಾವಂದಿರೇ ಸ್ಫೂರ್ತಿ ಎನ್ನುತ್ತಾರೆ ಕೃಷಿಕ ದಶರಥ್​ ಸಾವೊ.

Farmer Dasharath engaged in poultry farming
ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ಕೃಷಿಕ ದಶರಥ್​ (ETV Bharat)
author img

By ETV Bharat Karnataka Team

Published : October 14, 2025 at 3:01 PM IST

6 Min Read
Choose ETV Bharat

ಚತ್ರ (ಜಾರ್ಖಂಡ್​): ಜಾರ್ಖಂಡ್​ನ ಚತ್ರ​ ಜಿಲ್ಲೆಯ ಲ್ಯಾಮ್ಟಾ ಗ್ರಾಮದ ರೈತ ದಶರಥ್​ ಸಾವೊ, ಪುಸ್ತಕಗಳು ಹಾಗೂ ತಮ್ಮ ಅತ್ತೆ ಮಾವಂದಿರಿಂದ ಪಡೆದ ಸಲಹೆಗಳನ್ನೇ ಬಳಸಿಕೊಂಡು ಕೃಷಿ ಮತ್ತು ಕೋಳಿ ಸಾಕಣೆಗೆ ಆಧುನಿಕ ಟಚ್​ ನೀಡಿದ್ದಾರೆ. ಈ ಆಧುನಿಕ ಕೃಷಿ ಶೈಲಿ ದಶರಥ್​​ ಸಾವೊ ಅವರ ಕೈಹಿಡಿದಿದೆ.

ಹತ್ತನೇ ತರಗತಿವರೆಗೆ ಮಾತ್ರ ಓದಿರುವ ದಶರಥ್​, ಸಸ್ಯಗಳ ಬೆಳವಣಿಗೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಮತ್ತು ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಜೀವಶಾಸ್ತ್ರ ಮತ್ತು ಸಸ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ಕಲಿತುಕೊಂಡಿದ್ದಾರೆ. ಆದರೆ, ಅವರ ನಿಜವಾದ ಸ್ಫೂರ್ತಿ ಅವರ ಅತ್ತೆ - ಮಾವ ಎನ್ನುತ್ತಾರೆ ದಶರಥ್​​. ಅತ್ತೆ ಮಾವ ಮಾಡುವ ಕೃಷಿಯಿಂದ ಆಧುನಿಕ ಕೃಷಿಗೆ ಫಲಿತಾಂಶವನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಅದೇ ಇವರ ಕೃಷಿ ಅನ್ವೇಷಣೆಗೆ ಪ್ರೇರಣೆ.

Dashrath's family is involved in agriculture
ಕೃಷಿಯಲ್ಲಿ ತೊಡಗಿಸಿಕೊಂಡಿರುವ ದಶರಥ್​ ಕುಟುಂಬ (ETV Bharat)

ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ಯೋಚಿಸಿದ ರೈತ: ರೈತ ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ಯೋಚಿಸಬೇಕು ಎನ್ನುವುದನ್ನು ಪಾಲಿಸಿದವರು ದಶರಥ್‌. ಈ ಯೋಚನೆಯಿಂದಾಗಿ, ತಮ್ಮ ಸ್ವಂತ ಭೂಮಿಯಲ್ಲಿ ಮಾತ್ರವಲ್ಲದೇ ಗುತ್ತಿಗೆ ಪಡೆದ ಭೂಮಿಯಲ್ಲಿಯೂ ತರಕಾರಿಗಳನ್ನು ಬೆಳೆದು ದಶರಥ್​ ಲಾಭ ಪಡೆಯುತ್ತಿದ್ದಾರೆ. "ನಾನು ಟೊಮೆಟೊ, ಎಲೆಕೋಸು, ಕ್ಯಾಪ್ಸಿಕಂ, ಸೌತೆಕಾಯಿ ಮತ್ತು ಕಲ್ಲಂಗಡಿಗಳನ್ನು ನನ್ನ ಸ್ವಂತ ಭೂಮಿಯಲ್ಲಿ ಜೊತೆಗೆ ಗುತ್ತಿಗೆ ಪಡೆದ 20 ಎಕರೆ ಭೂಮಿಯಲ್ಲೂ ಬೆಳೆದಿದ್ದೇನೆ ಎಂದು ದಶರಥ್ ವಿವರಿಸಿದರು.

ಗ್ರಾಮದ ನೂರಾರು ಜನರಿಗೆ ಉದ್ಯೋಗ: ತಮ್ಮ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಜಾರ್ಖಂಡ್​ ಮಾತ್ರವಲ್ಲದೇ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್​ಗಢ ಹಾಗೂ ನೇಪಾಳಕ್ಕೂ ವಿಸ್ತರಿಸಿರುವ ದಶರಥ್​, ವಾರ್ಷಿಕ 15 ರಿಂದ 20 ಕೋಟಿ ರೂ.ಗಳ ವಹಿವಾಟು ನಡೆಸುತ್ತಾರೆ. ಇಷ್ಟು ದೊಡ್ಡ ಮಟ್ಟದ ವಹಿವಾಟಿನೊಂದಿಗೆ ನಾನು ಸ್ವಾವಲಂಬಿಯಾಗಿದ್ದೇನೆ. ಮತ್ತು ನೂರಾರು ಗ್ರಾಮಸ್ಥರಿಗೆ ಉದ್ಯೋಗ ನೀಡುತ್ತೇನೆ ಎಂಬ ತೃಪ್ತಿ ನನಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಬದಲಾವಣೆ ತಂದವರು ಅತ್ತೆ - ಮಾವ: ಹಳ್ಳಿಯಲ್ಲಿ ವಾಸಿಸುತ್ತಾ, ಸಾಂಪ್ರದಾಯಿಕ ಕೃಷಿಯನ್ನೇ ಅವಲಂಬಿಸಿದ್ದ ನನ್ನ ಜೀವನದಲ್ಲಿ ಬಡತನವೇ ಇತ್ತು. ಸಾಂಪ್ರದಾಯಿಕ ಕೃಷಿಯಿಂದ ಬರುತ್ತಿದ್ದ ಆದಾಯ ನನ್ನ ಕುಟುಂಬಕ್ಕೆ, ಜೀವನ ನಿರ್ವಹಣೆಗೆ ಅಷ್ಟೇನೂ ಸಹಾಯವಾಗುತ್ತಿರಲಿಲ್ಲ. ಹತ್ತನೇ ತರಗತಿ ಓದುತ್ತಿದ್ದಂತಹ ಸಮಯದಲ್ಲಿ ಜೀವಶಾಸ್ತ್ರ ಪುಸ್ತಕಗಳಲ್ಲಿ, ಸಸ್ಯಗಳ ಜಗತ್ತು ಪರಿಚಯವಾಗಿತ್ತು. ಅವುಗಳ ಜೊತೆಗೆ ನಂತರದಲ್ಲಿ ಬೇರೆ ಪುಸ್ತಕಗಳಲ್ಲಿ ಮಣ್ಣಿನ ಆರೋಗ್ಯ, ಸರಿಯಾದ ಪ್ರಮಾಣದಲ್ಲಿ ನೀರು ಹಾಕುವುದು, ಉತ್ಪಾದನೆಗೆ ಕೀಟ ನಿಯಂತ್ರಣ ಎಷ್ಟು ಮುಖ್ಯ ಎನ್ನುವ ಬಗ್ಗೆ ಓದಿ ತಿಳಿದಿದ್ದೆ. ಆದರೆ ನನ್ನ ಇಂದಿನ ಆಧುನಿಕ ಶೈಲಿಯ ಕೃಷಿಗೆ ನಿಜವಾದ ಬದಲಾವಣೆ ತಂದವರು ಅತ್ತೆ- ಮಾವ. ಅತ್ತೆ ಮಾವನ ಮನೆಯಲ್ಲಿ ಕೋಳಿ ಸಾಕಾಣೆ, ಜೊತೆಗೆ ತರಕಾರಿಯನ್ನೂ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವುದನ್ನು ನೋಡಿದೆ. ಅದನ್ನೇ ಯಾಕೆ ನಾನು ಅಳವಡಿಸಿಕೊಳ್ಳಬಾರದು ಎಂದು ಯೋಚಿಸಿ ಕೆಲಸ ಆರಂಭಿಸಿದೆ ಎಂದು ಆಧುನಿಕ ಕೃಷಿಯ ಆರಂಭವನ್ನು ನೆನಪಿಸಿಕೊಂಡರು.

Farmer Dasharath and family engaged in poultry farming
ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ಕೃಷಿಕ ದಶರಥ್​ ಕುಟುಂಬ (ETV Bharat)

ಇದು ತಮಗಿದ್ದ ಸ್ವಲ್ಪ ಭೂಮಿಯಲ್ಲಿ ಹೊಸ ಮಾದರಿಯಲ್ಲಿ ಕೃಷಿ ಆರಂಭಿಸಲು ಸ್ಫೂರ್ತಿಯಾಯಿತು. ಸ್ವಲ್ಪವೇ ಭೂಮಿಯಿದ್ದರೂ, ಯಾವತ್ತೂ ಕೈಚೆಲ್ಲಲಿಲ್ಲ. ಎಕರೆಗೆ 12,000 ರಿಂದ 15,000 ರೂ. ದರದಲ್ಲಿ ಸುಮಾರು 20 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದೇನೆ. ಅದರಲ್ಲಿ ನಾನು 4,000 ರಿಂದ 5,000 ರೂ.ಗಳನ್ನು ಹೂಡಿಕೆ ಮಾಡಿದ್ದೇನೆ.

ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿ: ದಶರಥ್​ ಅವರು ಗೆರುವ, ಲ್ಯಾಮ್ಟಾ ಮತ್ತು ಮಸುರಿಯಾ ಗ್ರಾಮಗಳಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಈ ಹೊಲಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದಶರಥ್​ ಕೃಷಿ ಮಾಡುತ್ತಿದ್ದಾರೆ. ಹನಿ ನೀರಾವರಿ ವ್ಯವಸ್ಥೆಗಳು, ಸಾವಯವ ಗೊಬ್ಬರಗಳು ಮತ್ತು ಸುಧಾರಿತ ಬೀಜಗಳನ್ನು ಬಳಸಿ, ದಶರಥ್ ಉತ್ಪಾದನಾ ಮಟ್ಟವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ವರ್ಷ, ಸುಮಾರು 600 ಟನ್ ಟೊಮೆಟೊ, 900 ಟನ್ ಕ್ಯಾಪ್ಸಿಕಂ, 40 ಟನ್ ಎಲೆಕೋಸು, 150 ಟನ್ ಕಲ್ಲಂಗಡಿ ಮತ್ತು ಅದೇ ಪ್ರಮಾಣದ ಸೌತೆಕಾಯಿಯನ್ನು ಬೆಳೆಯುತ್ತಾರೆ. ಬದನೆಕಾಯಿ, ಬೆಂಡೆಕಾಯಿ ಮತ್ತು ಸೊಪ್ಪುಗಳಂತಹ ಇತರ ತರಕಾರಿಗಳನ್ನು ಸಹ ಋತುವಿಗೆ ಅನುಗುಣವಾಗಿ ಇವರ ಹೊಲಗಳಲ್ಲಿ ಬೆಳೆಯಲಾಗುತ್ತದೆ.

Farmer Dasharath engaged in poultry farming
ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ಕೃಷಿಕ ದಶರಥ್​ ಸಾವೊ (ETV Bharat)

"ಮೊದಲು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದೆ. ಆದರೆ, ಈಗ ಹೊಸ ತಂತ್ರಜ್ಞಾನದೊಂದಿಗೆ, ಕೃಷಿಯಲ್ಲಿ ಬರುವ ಉತ್ಪಾದನೆ ದ್ವಿಗುಣಗೊಂಡಿದೆ ಅಥವಾ ಮೂರು ಪಟ್ಟು ಹೆಚ್ಚಾಗಿದೆ. ನಾನು ಮಣ್ಣು ಪರೀಕ್ಷೆ ಮಾಡಿಸಿ, ಅದಕ್ಕೆ ಸರಿಯಾದ ಅನುಪಾತದಲ್ಲಿ ರಸಗೊಬ್ಬರ ಹಾಕಲು ಪ್ರಾರಂಭಿಸಿದೆ. ಉತ್ತಮ ಇಳುವರಿಗೆ ಕೀಟ ನಿರ್ವಹಣೆಯೂ ಮುಖ್ಯವಾಗುತ್ತದೆ. ನಮ್ಮ ಹೊಲಗಳಲ್ಲಿ ಬೆಳೆಯುವ ತರಕಾರಿಗಳು ಉತ್ತಮ ಗುಣಮಟ್ಟದ್ದಾಗಿದ್ದು, ಅವು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯುತ್ತವೆ ಎಂದು ಅವರು ವಿವರಿಸಿದರು.

ದಶರಥ್​ ಅವರು ಬೆಳೆದ ತರಕಾರಿಗಳು ಜಾರ್ಖಂಡ್‌ನ ಸ್ಥಳೀಯ ಮಾರುಕಟ್ಟೆಗಳಿಗೆ ಹೋಗುತ್ತವೆ. ಜೊತೆಗೆ ಬಿಹಾರದ ಪಾಟ್ನಾ ಮತ್ತು ಮುಜಫರ್‌ಪುರ, ಪಶ್ಚಿಮ ಬಂಗಾಳದ ಕೋಲ್ಕ, ಛತ್ತೀಸ್‌ಗಢದ ರಾಯ್‌ಪುರ, ಮತ್ತು ನೇಪಾಳದ ಕಠ್ಮಂಡುಗಳಿಗೂ ತಲುಪುತ್ತವೆ. ಇವರು ಬೆಳೆಯುವ ಕ್ಯಾಪ್ಸಿಕಂ ಮತ್ತು ಟೊಮೆಟೊಗಳು ರಾಸಾಯನಿಕ ಮುಕ್ತ ಮತ್ತು ತಾಜಾ ಆಗಿರುವುದರಿಂದ ನೇಪಾಳದಲ್ಲೂ ಹೆಚ್ಚಿನ ಬೇಡಿಕೆಯಿದೆ.

ಕೃಷಿ ಜೊತೆಗೆ ಕೋಳಿ ಸಾಕಣೆ: ಕೃಷಿ ಜೊತೆಗೆ, ದಶರಥ್ ಕೋಳಿ ಸಾಕಣೆಯಲ್ಲೂ ತೊಡಗಿಕೊಂಡಿದ್ದಾರೆ. ಐದರಿಂದ ಏಳು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿ 45 ಲಕ್ಷ ರೂ. ಸಾಲ ಪಡೆದು ಈ ಕೋಳಿ ಸಾಕಾಣೆ ಪ್ರಾರಂಭಿಸಿದರು.

ಆರಂಭದಲ್ಲಿ ನಾನು 500 ಕೋಳಿಗಳನ್ನು ಹಾಕಬಹುದಾದ ಸಣ್ಣ ಫಾರ್ಮ್ ಹೊಂದಿದ್ದೆ. ಇಂದು, ನಾನು 20,000 ಬ್ರಾಯ್ಲರ್ ಕೋಳಿಗಳನ್ನು ಸಾಕುತ್ತೇನೆ. ನನ್ನ ಫಾರ್ಮ್ ಪರಿಸರ ನಿಯಂತ್ರಣ ವ್ಯವಸ್ಥೆಯೊಂದಿಗೆ ಆಧುನಿಕ ವಿಧಾನಗಳನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ತಾಪಮಾನ, ತೇವಾಂಶ ಮತ್ತು ವಾತಾವರಣವನ್ನು ನಿಯಂತ್ರಿಸಲು AC ಮತ್ತು ಹೀಟರ್‌ಗಳನ್ನು ಬಳಸಲಾಗುತ್ತದೆ ಎಂದು ಅವರು ಮಾಹಿತಿ ಒದಗಿಸಿದರು.

ಕೋಳಿಗಳಿಗೆ ಪೌಷ್ಟಿಕ ಮತ್ತು ರೋಗ ನಿರೋಧಕವಾದ ವಿಶೇಷ ಆಹಾರವನ್ನು ಅಭಿವೃದ್ಧಿಪಡಿಸಿದ್ದೇನೆ. ಆ ಆಹಾರ ಕೋಳಿಗಳು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಲಾಭವನ್ನು ನೀಡುತ್ತದೆ. ನಮ್ಮ ಬ್ರಾಯ್ಲರ್ ಕೋಳಿಗಳನ್ನು ಜಾರ್ಖಂಡ್‌ನ ಹೊರಗೆ ಸಹ ಮಾರಾಟ ಮಾಡಲಾಗುತ್ತದೆ. ಕೃಷಿ ಮತ್ತು ಕೋಳಿ ಎರಡೂ ಸೇರಿ ನಮ್ಮ ವಾರ್ಷಿಕ ವಹಿವಾಟು ರೂ 15-20 ಕೋಟಿ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ಇತರ ರೈತರಿಗೆ ದಶರಥ್​ ಅವರೇ ಮಾದರಿ: ದಶರಥ್​ ಅವರ ತಮ್ಮ ಯಶಸ್ಸನ್ನು ತಾವೇ ಇಟ್ಟುಕೊಳ್ಳದೇ, ಇಡೀ ಹಳ್ಳಿಯ ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಾರೆ. ತಾವು ಕೃಷಿಯಲ್ಲಿ ಅಳವಡಿಸಿರುವ ಆಧುನಿಕ ವಿಧಾನಗಳನ್ನು ಗ್ರಾಮದ ರೈತರಿಗೂ ತಿಳಿಸಿಕೊಟ್ಟಿದ್ದಾರೆ. ದಶರಥ್​ ಅವರಿಂದ ಪ್ರೇರಣೆಗೊಂಡು ಲ್ಯಾಮ್ಟಾ ಗ್ರಾಮದ ಅನೇಕ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿ, ಪಾಲಿಹೌಸ್‌ಗಳು ಮತ್ತು ಸಾವಯವ ಕೀಟನಾಶಕಗಳೊಂದಿಗೆ ಹೇಗೆ ಸಾಂಪ್ರದಾಯಿಕ ಕೃಷಿಯನ್ನು ಆಧುನಿಕ ಕೃಷಿಗೆ ಬದಲಾಯಿಸಬೇಕು ಎನ್ನುವ ಬಗ್ಗೆ ದಶರಥ್​ ತಮ್ಮ ಗ್ರಾಮ ರೈತರಿಗೆ ಮಾಹಿತಿ ನೀಡುತ್ತಾರೆ. ದಶರಥ್​ ಅವರದು ಮಾತ್ರವಲ್ಲದೇ ಗ್ರಾಮದ ಇತರ ರೈತರ ಆದಾಯವೂ ಈಗ ದ್ವಿಗುಣಗೊಂಡಿದೆ.

ನಾನು ಸರ್ಕಾರಿ ಸಬ್ಸಿಡಿಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಅನೇಕ ರೈತರಿಗೆ ಮುದ್ರಾ ಸಾಲಗಳನ್ನು ಪಡೆಯಲು ಸಹಾಯ ಮಾಡಿದೆ. ಸುಮಾರು 100 ರೈತ ಕಾರ್ಮಿಕರು ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಭೂಮಿಯನ್ನು ಹೊಂದಿರುವವರು ಕೋಳಿ ಸಾಕಣೆ ಕೇಂದ್ರಗಳನ್ನು ಸ್ವತಃ ನಡೆಸುತ್ತಿದ್ದಾರೆ ಮತ್ತು ಇತರರಿಗೆ ಉದ್ಯೋಗ ನೀಡುತ್ತಿದ್ದಾರೆ. ಗ್ರಾಮದ ಆರ್ಥಿಕತೆಯೂ ಬಲಬವಾಗುತ್ತಿದೆ ಎಂದರು.

ದಶರಥ್​ಗೆ ಕುಟುಂಬದ ಸಾಥ್​: ಇವರ ಈ ಪ್ರಯಾಣದ ಉದ್ದಕ್ಕೂ ಅವರ ಕುಟುಂಬ ಬೆಂಬಲವಾಗಿ ನಿಂತಿದೆ. ಪದವೀಧರರಾಗಿರುವ ಅವರು ಇಬ್ಬರು ಗಂಡು ಮಕ್ಕಳು ಬೇರೆ ಉದ್ಯೋಗಕ್ಕೆ ಹೋಗುವ ಬದಲು ತಂದೆಯ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆಯ ಯಶಸ್ಸೇ ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ನನಗೆ ಸ್ಫೂರ್ತಿ ನೀಡುತ್ತದೆ ಎನ್ನುತ್ತಾರೆ ಹಿರಿಯ ಮಗ ಕನ್ಹಯ್ಯಾ ಪ್ರಸಾದ್​.

10 ಎಕರೆ ಭೂಮಿಯಿಂದ ಆರಂಭಿಸಿ, ಇಂದು 20 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇವೆ. 100 ಜನರಿಗೆ ಉದ್ಯೋಗ ನೀಡುತ್ತಿದ್ದೇವೆ. 4-5 ಎಕರೆ ಭೂಮಿಯಲ್ಲಿ ಕ್ಯಾಪ್ಸಿಕಂ ಬೆಳೆಯುತ್ತೇವೆ. ಕುಟುಂಬ ಒಟ್ಟಾಗಿ ಕೆಲಸ ಮಾಡುತ್ತದೆ. ಜೊತೆಗೆ ಅನೇಕ ಸವಾಲುಗಳಿವೆ. ವಿದ್ಯುತ್​ ದೊಡ್ಡ ಸಮಸ್ಯೆ. ವಿದ್ಯುತ್​ ಇಲಾಖೆಯಿಂದ ಟ್ರಾನ್ಸ್​ಫಾರ್ಮರ್​ ಅಳವಡಿಸಲಾಗಿದೆ. ಆದರೆ, ವಿದ್ಯುತ್​ ಕಡಿತದ ಸಮಯದಲ್ಲಿ ನಾವು ಜನರೇಟರ್​ಗಳನ್ನು ಅವಲಂಬಿಸಬೇಕಾಗಿದೆ ಎನ್ನುತ್ತಾರೆ ಕನ್ಹಯ್ಯಾ.

ಪತ್ನಿ ಮೀನಾದೇವಿ ಸಂತಸ ಹಂಚಿಕೊಂಡಿದ್ದು ಹೀಗೆ: ದಶರಥ್​ ಅವರ ಈ ಸಾಧನೆಯಲ್ಲಿ ಪತ್ನಿ ಮೀನಾ ದೇವಿ ಅವರ ಪಾತ್ರವೂ ದೊಡ್ಡದು. ಸದಾ ಪತಿಗೆ ಬೆಂಬಲವಾಗಿ ನಿಂತವರು ಮೀನಾದೇವಿ. ಕೋಳಿ ಸಾಕಾಣೆ ಕಲೆಯನ್ನು ನಾನು ನನ್ನ ತವರುಮನೆಯಲ್ಲೇ ಕಲಿತಿದ್ದೆ. ನಮ್ಮಲ್ಲೂ ಪ್ರಾರಂಭಿಸುವಂತೆ ನನ್ನ ಗಂಡನಿಗೆ ಸಲಹೆ ನೀಡಿದೆ. ಇಂದು ಕೋಳಿ ಸಾಕಣೆಯಿಂದ ಉತ್ತಮ ಆದಾಯ ಗಳಿಸುತ್ತಿದ್ದೇವೆ. ಬಡತನದಲ್ಲಿ ಬದುಕುತ್ತಿದ್ದೆವು. ಆದರೆ ಈಗ ಸಂತೋಷವಾಗಿದ್ದೇವೆ. ಮಕ್ಕಳು ಸಹ ಕೃಷಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಖುಷಿ ಹಂಚಿಕೊಂಡರು ಮೀನಾ ದೇವಿ.

ದಶರಥ್​ ಸಾಧನೆಗೆ ಅಧಿಕಾರಿಗಳಿಂದ ಮೆಚ್ಚುಗೆ: ದಶರಥ್​ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೃಷಿ ಅಧಿಕಾರಿ ಗೌತಮ್​ ಕುಮಾರ್​, "ದಶರಥ್​ ಸಾವೊ ಹಳ್ಳಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದ್ದಾರೆ. ಇದು ಶ್ಲಾಘನೀಯ. ಸರ್ಕಾರ ಅವರಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ. ಅವರ ಕೃಷಿಯನ್ನು ಕೃಷಿ ಯೋಜನೆಗಳಿಗೆ ಲಿಂಕ್​​ ಮಾಡಲಾಗುತ್ತದೆ. ತಮ್ಮ ಕೃಷಿಯನ್ನು ಇನ್ನೂ ಹೆಚ್ಚು ವಿಸ್ತರಿಸಲು ದಶರಥ್​ ಅವರು ಯೋಜಿಸುತ್ತಿದ್ದಾರೆ. ನಾವು ಅವರಿಗೆ ಹೆಚ್ಚಿನ ಭೂಮಿಯನ್ನು ಗುತ್ತಿಗೆಗೆ ನೀಡಿ, ಸಾವಯವ ಕೃಷಿಯತ್ತ ಗಮನ ಹರಿಸುತ್ತೇವೆ. ಹಳ್ಳಿಯ ಯುವಕರಿಗೆ ಈ ಬಗ್ಗೆ ತರಬೇತಿ ನೀಡುತ್ತೇವೆ ಎಂದು ತಿಳಿಸಿದರು.

ದಶರಥ್​ ಅವರ ಯಶಸ್ಸು ಜಾರ್ಖಂಡ್​ನ ಇತರ ರೈತರಿಗೂ ಸ್ಫೂರ್ತಿಯಾಗಿದೆ. ಹವಾಮಾನ ಬದಲಾವಣೆ ಮತ್ತು ಮಾರುಕಟ್ಟೆ ಸವಾಲುಗಳಂತಹ ಸಮಸ್ಯೆಗಳಿದ್ದರೂ ದಶರಥ್​ ಅವರು ಆಧುನಿಕ ಕೃಷಿ ಪದ್ಧತಿಯಿಂದ ಅದೆಲ್ಲವನ್ನು ಮೆಟ್ಟಿ ನಿಲ್ಲಬಹುದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಕಲಾಂ ಪ್ರೇರಣೆ: ಬರ ಪೀಡಿತ ಪ್ರದೇಶಗಳಲ್ಲಿ ಕೃಷಿ ಕ್ರಾಂತಿ ಮಾಡಿದ ರೈತ ಮಹಿಳೆ; ಆರೋಗ್ಯ ರಾಷ್ಟ್ರ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ 'ನಿಧಿ'