ನವದೆಹಲಿ: 13,000 ಕೋಟಿ ರೂ. ಪಿಎನ್‌ಬಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ವಜ್ರದ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳ ಹಸ್ತಾಂತರ ಕೋರಿಕೆಯ ಮೇರೆಗೆ ಈ ಬಂಧನ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. ಆದಾಗ್ಯೂ ಚೋಕ್ಸಿ ಬಂಧನದ ಅಧಿಕೃತ ದೃಢೀಕರಣ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ
ಭಾರತೀಯ ಏಜೆನ್ಸಿಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಅವರನ್ನು ಬೆಲ್ಜಿಯಂನಿಂದ ಹಸ್ತಾಂತರಿಸುವಂತೆ ಬೆಲ್ಜಿಯಂ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು ಎಂದು ಮೂಲಗಳು ತಿಳಿಸಿವೆ.
65 ವರ್ಷದ ಅವರನ್ನು ಶನಿವಾರ (ಏಪ್ರಿಲ್ 12) ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದ್ಯಮಿ ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ 'ರೆಸಿಡೆನ್ಸಿ ಕಾರ್ಡ್' ಪಡೆದು ಪತ್ನಿ ಪ್ರೀತಿ ಚೋಕ್ಸಿಯೊಂದಿಗೆ ವಾಸಿಸುತ್ತಿದ್ದಾರೆ. ಅನಾರೋಗ್ಯ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಅವರು ಜಾಮೀನು ಕೋರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅವರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇವೆಲ್ಲ ಬೆಳವಣಿಗೆಗಳ ನಡುವೆ ಬೆಲ್ಜಿಯಂ ನ್ಯಾಯಾಲಯಗಳಲ್ಲಿನ ಕಾನೂನು ಅಡಚಣೆಗಳು, ಭಾರತಕ್ಕೆ ಅವರನ್ನು ಕರೆತರುವ ಪ್ರಕ್ರಿಯೆಯನ್ನು ವಿಳಂಬಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಮೆಹುಲ್ ಚೋಕ್ಸಿ, ಅವರ ಸೋದರಳಿಯ ಮತ್ತು ಕುಟುಂಬ ಸದಸ್ಯರು ಹಾಗೂ ಉದ್ಯೋಗಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಇತರರ ಮೇಲೆ ಎರಡೂ ತನಿಖಾ ಸಂಸ್ಥೆಗಳು 2018 ರಲ್ಲಿ ಮುಂಬೈನ PNBಯ ಬ್ರಾಡಿ ಹೌಸ್ ಶಾಖೆಯಲ್ಲಿ ಸಾಲ ವಂಚನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದವು.
ಚೋಕ್ಸಿ ಮತ್ತು ಅವರ ಸಂಸ್ಥೆಯಾದ ಗೀತಾಂಜಲಿ ಜೆಮ್ಸ್ ಮತ್ತು ಇತರರು ಕೆಲವು ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿದ್ದರು ಎಂದು ಇಡಿ ಆರೋಪಿಸಿದೆ. ಇಡಿ ಚೋಕ್ಸಿ ವಿರುದ್ಧ ಇಲ್ಲಿಯವರೆಗೆ ಮೂರು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. ಸಿಬಿಐ ಕೂಡ ಅವರ ವಿರುದ್ಧ ಇದೇ ರೀತಿಯ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಇದನ್ನು ಓದಿ: 30 ದಿನದೊಳಗೆ ಸ್ವಇಚ್ಛೆಯಿಂದ ದೇಶ ಬಿಟ್ಟು ತೊಲಗಿ: ಅಕ್ರಮ ವಲಸಿಗರಿಗೆ ಅಮೆರಿಕ ಮತ್ತೊಮ್ಮೆ ಎಚ್ಚರಿಕೆ