ನವದೆಹಲಿ: ಪ್ರದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಪಿತೂರಿ ಪ್ರಕರಣ ಸಂಬಂಧ ಇಂದು ಜಮ್ಮು ಮತ್ತು ಕಾಶ್ಮೀರದ 32 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ.
ಕೇಂದ್ರಾಡಳಿತ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಈ ದಾಳಿ ಸಾಗಿದ್ದು, 2022ರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೊರೆತ ನಿರ್ದಿಷ್ಟ ಮಾಹಿತಿ ಮೇರೆಗೆ ಎನ್ಐಎ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಶೋಧವು 2022ರ ಪ್ರಕರಣದ ಭಯೋತ್ಪಾದಕ ಪಿತೂರಿಗೆ ಸಂಬಂಧಿಸಿದ್ದು, ಅನೇಕ ಭಯೋತ್ಪಾದನಾ ಸಂಘಟನೆಯ ಕಾರ್ಯಕರ್ತರ ವಿರುದ್ಧ ಶೋಧ ಸಾಗಿದೆ. ಈ ಶೋಧದ ಮೂಲಕ ಜಮ್ಮು ಪ್ರಾಂತ್ಯದಲ್ಲಿನ ಭಯೋತ್ಪಾದಕರ ನೆಟ್ವರ್ಕ್ ಅನ್ನು ಹತ್ತಿಕ್ಕುವ ಗುರಿ ಹೊಂದಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸಾಮರಸ್ಯ ಮತ್ತು ಶಾಂತಿ ಕದಡುವ ಉದ್ದೇಶದಿಂದ ನಿಷೇಧಿತ ಭಯೋತ್ಪಾದಕ ಸಂಘಟನೆ ಸ್ಥಳೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದು, ಅದನ್ನು ಕೊನೆಗೊಳಿಸುವ ಉದ್ದೇಶ ತನಿಖಾ ಸಂಸ್ಥೆಯಾದ್ದಾಗಿದೆ.
ಕಳೆದ ವರ್ಷ ಮೇ 11ರಂದು ಎನ್ಐಎ, ಈ ಪ್ರಕರಣ ಸಂಬಂಧ ಜಮ್ಮು ಪ್ರಾಂತ್ಯದಲ್ಲಿ ಆರು ಕಡೆ ಶೋಧ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಟಿಕಿ ಬಾಂಬ್‌ಗಳು, ಐಇಡಿಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾತ್ಮಕ ದಾಳಿಗಳನ್ನು ನಡೆಸಲು ನಿಷೇಧಿತ ಗುಂಪು ಶಾಖೆಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿತ್ತು.
ಈ ಶೋಧದಲ್ಲಿ ಡಿಜಿಟಲ್ ಸಾಧನಗಳು, ದಾಖಲೆಗಳು ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. 2022ರ ಜೂನ್ 21ರಂದು ಇಲ್ಲಿನ ಭಯೋತ್ಪಾದಕ ನೆಟ್ವರ್ಕ್ ಕಾರ್ಯಾಚರಣೆ ಹತ್ತಿಕ್ಕಲು ಎನ್ಐಎ ಸುಮೋಟೋ ಕೇಸ್ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: CRPF ಸಿಬ್ಬಂದಿ ಬಂಧಿಸಿದ NIA
ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: ಎನ್ಐಎ, ಐಬಿಯಿಂದ ಯೂಟ್ಯೂಬರ್ ಜ್ಯೋತಿ ತೀವ್ರ ವಿಚಾರಣೆ