ETV Bharat / bharat

ದೃಷ್ಟಿ ದೋಷದಿಂದ 1 ಮೀಟರ್ ವರೆಗೆ ಮಾತ್ರ ನೋಡಲು ಸಾಧ್ಯ: NEETನಲ್ಲಿ ರ‍್ಯಾಂಕ್ ಗಳಿಸಿ ಮೆಡಿಕಲ್​ ಸೀಟ್​ ಪಡೆದ ಯುವತಿ

ದೃಷ್ಟಿ ದೋಷದಿಂದ ಬಳಲುತ್ತಿರುವ ಯುವತಿ ನೀಟ್​ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ.

MOTIVATIONAL STORY OF AVANTHI
NEETನಲ್ಲಿ ರ‍್ಯಾಂಕ್ ಗಳಿಸಿ ಮೆಡಿಕಲ್​ ಸೀಟ್​ ಪಡೆದ ಯುವತಿ (EENADU)
author img

By ETV Bharat Karnataka Team

Published : September 26, 2025 at 3:39 PM IST

2 Min Read
Choose ETV Bharat

ಕುಮುರಂ ಭೀಮ್ ಆಸಿಫಾಬಾದ್(ತೆಲಂಗಾಣ): ದೃಷ್ಟಿ ದೋಷದಿಂದ ಬಳಲುತ್ತಿರುವ ಯುವತಿ ತನ್ನ ದೃಢಸಂಕಲ್ಪದಿಂದ ನೀಟ್​ ಪರೀಕ್ಷೆಯಲ್ಲಿ 2671ನೇ ರ‍್ಯಾಂಕ್ ಗಳಿಸಿ ಇದೀಗ ಪಿಡಬ್ಲ್ಯೂಡಿ ಕೋಟಾದಡಿ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಕುಮುರಂ​ ಭೀಮ್ ಆಸಿಫಾಬಾದ್ ಜಿಲ್ಲೆಯ ಕೌತಾಲ ಮಂಡಲದ ಗುರುದುಪೇಟೆಯ ಅವಂತಿ ವೈದ್ಯಕೀಯ ಸೀಟು ಪಡೆದ ಯುವತಿ. ಅವಂತಿ ಅವರ ತಂದೆ ಸಂತೋಷ್ ದರ್ಜಿಯಾಗಿದ್ದು, ತಾಯಿ ಕಲ್ಯಾಣಿ ಗೃಹಿಣಿಯಾಗಿದ್ದಾರೆ. ಇವರದ್ದು ಬಡ ಕುಟುಂಬ.

ಹುಟ್ಟಿದ ಒಂದು ವರ್ಷಕ್ಕೆ ಅವಂತಿಗೆ ಕೋನ್ ಡಿಸ್ಟ್ರೋಫಿ ಇರುವುದು ಪತ್ತೆಯಾಯಿತು. ಇದರಿಂದ ಅವಂತಿ ಒಂದು ಮೀಟರ್ ದೂರದವರೆಗೆ ಮಾತ್ರ ನೋಡಲು ಸಾಧ್ಯ. ಈ ದೃಷ್ಟಿ ದೋಷ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಬಳಿ ತೋರಿಸಿದ್ದೆವು. ಸಾವಿರ ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಬರುತ್ತದೆ ಎಂದು ವೈದ್ಯರು ಹೇಳಿದರು. ಈ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಗೊತ್ತಾಯಿತು. ಮಗಳ ಭವಿಷ್ಯ ಏನಾಗುತ್ತದೆ ಎಂಬ ಚಿಂತೆಯಿಲ್ಲದೆ ಒಂದು ದಿನವೂ ಕಳೆದಿಲ್ಲ ಎನ್ನುತ್ತಾರೆ ಅವಂತಿ ಪೋಷಕರು.

ನನಗೆ ಸೀಟು ಕೊಡಲು ನಿರಾಕರಿಸಿದರು: "ನನಗೆ ಬುದ್ಧಿ ಬಂದಾಗಿನಿಂದ ನೋಡುತ್ತಿರುವಂತೆ ಪ್ರತಿದಿನ ಸಂಬಂಧಿಕರು, ಸ್ನೇಹಿತರ ಅವಹೇಳನವಿಲ್ಲದೆ ಮುಗಿಯುತ್ತಿರಲಿಲ್ಲ. ನಾಲ್ಕನೇ ತರಗತಿಯವರೆಗೆ ಸ್ಥಳೀಯ ಶಾಲೆಯಲ್ಲೇ ನಾನು ವಿದ್ಯಾಭ್ಯಾಸ ಮಾಡಿದೆ. ಐದನೇ ತರಗತಿ ಪ್ರವೇಶಕ್ಕಾಗಿ ಗುರುಕುಲ ಪ್ರವೇಶ ಪರೀಕ್ಷೆ ಬರೆದು, ಸಿರ್ಪುರದ ಗುರುಕುಲ ಪಾಠ ಶಾಲೆಯಲ್ಲಿ ಸೀಟು ಪಡೆದೆ. ಆದರೆ ಅಲ್ಲಿನ ಪ್ರಾಂಶುಪಾಲರು ನನಗೆ ಸೀಟು ಕೊಡಲು ನಿರಾಕರಿಸಿದರು" ಎಂದು ಅವಂತಿ ತನಗಾದ ನೋವನ್ನು ತೋಡಿಕೊಂಡರು.

"ನನ್ನ ಚಿಕ್ಕಪ್ಪ ಮಹೇಶ್ ಚೆನ್ನೈನಲ್ಲಿರುವ ಶಂಕರ್ ನೇತ್ರಾಲಯದಿಂದ ನಾನು ಇತರ ಮಕ್ಕಳಂತೆ ವಿದ್ಯಾಭ್ಯಾಸ ಪಡೆಯಬಹುದು ಎಂದು ಪತ್ರ ತಂದರು. ಆದರೆ, ಪ್ರಾಂಶುಪಾಲರು ಒಪ್ಪಲಿಲ್ಲ. ಆದ್ದರಿಂದ ನನ್ನ ಚಿಕ್ಕಿಪ್ಪ ಆರ್‌ಟಿಐ ಅರ್ಜಿ ಸಲ್ಲಿಸಿದರು. ಅದಕ್ಕೆ ಉತ್ತರಿಸಲು ಸಾಧ್ಯವಾಗದೆ, ಅವರು ನನಗೆ ಪ್ರವೇಶ ನೀಡಿದರು. ಅಂದಿನಿಂದ ಇಂತಹ ಘಟನೆಗಳು ನನ್ನ ಜೀವನದ ಭಾಗವಾದವು. ಇಷ್ಟು ಕಷ್ಟಪಟ್ಟು ಗುರುಕುಲ ಪಾಠ ಶಾಲೆಗೆ ಸೇರಿದ ನಂತರ, ನನ್ನ ಸಹಪಾಠಿಗಳ ನಿಂದನೆ ಮತ್ತು ಶಿಕ್ಷಕರ ತಾರತಮ್ಯದಿಂದಾಗಿ ನಾನು ಕಣ್ಣೀರಿಡುತ್ತಿದ್ದೆ. ಏನೇ ಆದರೂ ಹಿಂದೇಟು ಹಾಕಬಾರದು ಎಂದು ನಾನು ನಿರ್ಧರಿಸಿದೆ" ಎನ್ನುತ್ತಾರೆ ಅವಂತಿ.

ಗುರಿ ನಿರ್ಧಾರ ಆಗಿದ್ದು ಅಲ್ಲೇ: ಇವಳು ವಿದ್ಯಾಭ್ಯಾಸ ಮಾಡಿ ಏನು ಸಾಧಿಸುತ್ತಾಳೆ. ಅವಳಿಗೆ ಭವಿಷ್ಯವಿದೆಯೇ? ಎಂದು ಹೇಳುತ್ತಿದ್ದರು. ಅವಂತಿ ಓದಿನಲ್ಲಿ ತನ್ನ ಪ್ರತಿಭೆ ತೋರಿಸಿ ಅವಮಾನಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದರು.

"ನಾನು 8ನೇ ತರಗತಿಯಲ್ಲಿ ಕರೀಂನಗರ ಸಿಒಇ ಗುರುಕುಲ ಶಾಲೆ ಪ್ರವೇಶ ಪರೀಕ್ಷೆ ಬರೆದೆ. ನನಗೆ ಸೀಟು ಸಿಕ್ಕಿತು. ಅಲ್ಲೇ ನಾನು ವೈದ್ಯೆಯಾಗಬೇಕೆಂದು ಗುರಿಗೆ ಅಡಿಪಾಯ ಬಿತ್ತು. ಅದಕ್ಕನುಗುಣವಾಗಿ ಅಧ್ಯಾಪಕರು ನನಗೆ ಪ್ರೋತ್ಸಾಹಿಸಿದರು. ನಾನು 10ನೇ ತರಗತಿಯಲ್ಲಿ 9.5 ಸಿಜಿಪಿಎ ಸಾಧಿಸಿದೆ. ನನ್ನ ಇಂಟರ್‌(ಪಿಯುಸಿ) ಮೊದಲ ವರ್ಷದಿಂದ ವಾರಾಂತ್ಯದಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದೆ. ಅದು ಕಷ್ಟವೆನಿಸಿದರೂ, ಗುರಿಯನ್ನು ತಲುಪುವ ನನ್ನ ದೃಢನಿಶ್ಚಯಕ್ಕೆ ಹೋಲಿಸಿದರೆ ಅದು ಏನೂ ಅಲ್ಲ. ನೀಟ್‌ನಲ್ಲಿ 2671ನೇ ರ‍್ಯಾಂಕ್ ಪಡೆದೆ. ನನಗೆ ಪಿಡಬ್ಲ್ಯೂಡಿ ಕೋಟಾದಡಿಯಲ್ಲಿ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಈ ಪ್ರಯಾಣದಲ್ಲಿ ನನ್ನ ಪೋಷಕರು ಮತ್ತು ಚಿಕ್ಕಪ್ಪ ನನಗೆ ಕೊಟ್ಟ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ಅವಂತಿ ತನ್ನ ಯಶೋಗಾಥೆಯನ್ನು ವಿವರಿಸಿದರು.

ಇದನ್ನೂ ಓದಿ: NEET ಪಾಸಾದ ಬೆಂಗಳೂರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ!: ಭವಿಷ್ಯದ ವೈದ್ಯನಾಗುವ ಕನಸು ನನಸು

ಇದನ್ನೂ ಓದಿ: 20 ಕಿಮೀ ಗುಡ್ಡಗಾಡು ಇಳಿದು ಪಯಣ: 60 ಕಿಮೀ ದೋಣಿ ಸಂಚಾರ; ಕಷ್ಟಪಟ್ಟು ಓದಿ NEET ಪಾಸ್​ ಮಾಡಿದ ಬುಡಕಟ್ಟು ವಿದ್ಯಾರ್ಥಿನಿ!!