ETV Bharat / bharat

ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಡಿಜಿಪಿ ಪದಚ್ಯುತಿಗೆ ಹರಿಯಾಣ ಸರ್ಕಾರಕ್ಕೆ ಮಹಾಪಂಚಾಯತ್ 48 ಗಂಟೆಗಳ ಗಡುವು

ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಹರಿಯಾಣ ಮತ್ತು ಚಂಡೀಗಢದ ವಾಲ್ಮೀಕಿ ಸಮುದಾಯದ ನೌಕರರು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ.

Chandigarh Mahapanchayat for Justice in Case of IPS Y Puran Singh Death IAS Amneet P Kumar
ವೈ.ಪುರಣ್ ಕುಮಾರ್, ಮಹಾಪಂಚಾಯತ್‌ ಸಭೆಯ ಸಂದರ್ಭ (ETV Bharat)
author img

By ETV Bharat Karnataka Team

Published : October 13, 2025 at 2:03 PM IST

3 Min Read
Choose ETV Bharat

ಚಂಡೀಗಢ: ಹರಿಯಾಣ ಐಪಿಎಸ್ ಅಧಿಕಾರಿ ವೈ.ಪುರಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿಪಿ) ಶತ್ರುಜೀತ್ ಕಪೂರ್ ಅವರನ್ನು ವಜಾಗೊಳಿಸಲು ಪರಿಶಿಷ್ಟ ಜಾತಿಗಳ ಸಮಿತಿಯು (ಮಹಾಪಂಚಾಯತ್‌) ಭಾನುವಾರದಿಂದ 48 ಗಂಟೆಗಳ ಕಾಲಾವಕಾಶ ನೀಡಿದೆ.

ಭಾನುವಾರ ಇಲ್ಲಿನ ಗುರು ರವಿದಾಸ್ ಗುರುದ್ವಾರದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ಹೊರಡಿಸಲಾಗಿದೆ. ಪರಿಶಿಷ್ಟ ಜಾತಿ ಸಮುದಾಯದ 31 ಸದಸ್ಯರ ಸಮಿತಿಯು ಮಹಾಪಂಚಾಯತ್ ಸಭೆಯ ಮುಂದಾಳತ್ವ ವಹಿಸಿತ್ತು. ಸಭೆಯ ಸ್ಥಳದಲ್ಲಿ ಭಾರಿ ಪೊಲೀಸ್ ನಿಯೋಜನೆಯ ನಡುವೆಯೂ ಸರ್ಕಾರಕ್ಕೆ 48 ಗಂಟೆಗಳ ಅಂತಿಮ ಎಚ್ಚರಿಕೆ ರವಾನಿಸಲಾಗಿದೆ.

ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು 48 ಗಂಟೆಗಳ ಒಳಗೆ ತೆಗೆದುಹಾಕದಿದ್ದರೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಗಡುವು ನೀಡಿದ್ದಾರೆ. ಇಲ್ಲದಿದ್ದರೆ 48 ಗಂಟೆಗಳ ಬಳಿಕ, ಹರಿಯಾಣ ಮತ್ತು ಚಂಡೀಗಢ ಆಡಳಿತದಲ್ಲಿರುವ ಸುಮಾರು 5 ಲಕ್ಷ ವಾಲ್ಮೀಕಿ ಸಮುದಾಯದ ನೌಕರರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಲಾಗಿದೆ.

Chandigarh Mahapanchayat for Justice in Case of IPS Y Puran Singh Death IAS Amneet P Kumar
ಮಹಾಪಂಚಾಯತ್‌ ಸಭೆ (ETV Bharat)

ಈ ಮಧ್ಯೆ, ಕುಮಾರ್ ಅವರ ಕುಟುಂಬವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನಿರಾಕರಿಸಿದೆ. ಹೀಗಾಗಿ, ಕಳೆದ ಆರು ದಿನಗಳ ಬಳಿಕವೂ ಕೂಡ ಅವರ ಪೋಸ್ಟ್​ ಮಾರ್ಟಮ್​ ನಡೆದಿಲ್ಲ. ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ರೋಹ್ಟಕ್ ಎಸ್​​ಪಿ ನರೇಂದ್ರ ಬಿಜಾರ್ನಿಯಾ ಮತ್ತು ಡಿಜಿಪಿ ಶತ್ರುಜೀತ್ ಕಪೂರ್ ವಿರುದ್ಧ ಮೃತ ಐಪಿಎಸ್ ಅಧಿಕಾರಿಯ ಪತ್ನಿ ಮತ್ತು ಐಎಎಸ್ ಅಧಿಕಾರಿ ಅಮ್ನೀತ್ ಪಿ.ಕುಮಾರ್ ಅವರು, ಚಂಡೀಗಢ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಬೆಂಬಲ: ಹರಿಯಾಣ ರಾಜ್ಯಪಾಲ ಪ್ರೊ. ಆಶಿಮ್ ಕುಮಾರ್ ಘೋಷ್ ಕುಮಾರ್ ಅವರು ಮೃತ ಅಧಿಕಾರಿಯ ಕುಟುಂಬವನ್ನು ಭೇಟಿ ಮಾಡಿ, ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಅಮ್ನೀತ್ ಅವರಿಗೆ ನ್ಯಾಯಪರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಹರಿಯಾಣದ ಅಧಿಕಾರಿಯು ಸಾಮಾಜಿಕ ಪೂರ್ವಾಗ್ರಹಗಳು ಮತ್ತು ಅಸಮಾನತೆಗಳ ವಿರುದ್ಧ ಹೋರಾಡುತ್ತಾ ತಮ್ಮ ಜೀವನವನ್ನು ಕೊನೆಗೊಳಿಸಿದರು. ಜನರ ನೋವು, ಯಾತನೆಯನ್ನು ನಿವಾರಿಸುವ ಜವಾಬ್ದಾರಿಯನ್ನು ಸಂವಿಧಾನವು ಕೊಟ್ಟವರಿಗೆ ನಾವು ಅಧಿಕಾರ ನೀಡುವಲ್ಲಿ ವಿಫಲರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಖರ್ಗೆ ತಮ್ಮ ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ನನ್ನ ಹೃದಯವನ್ನು ತೀವ್ರವಾಗಿ ನೋಯಿಸಿದೆ. ನನ್ನ ಜೀವನದ ಸುದೀರ್ಘ ಅನುಭವದಲ್ಲಿ, ನಾನು ಅನೇಕ ಘಟನೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಪಕ್ಷಪಾತ ಮತ್ತು ತಾರತಮ್ಯದಿಂದ ಉಂಟಾದ ಈ ದುರಂತ ಘಟನೆಯು ನನಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಎಲ್ಲಾ ಒಡನಾಡಿಗಳಿಗೆ ಅಪಾರ ನೋವನ್ನುಂಟುಮಾಡಿದೆ. ದುಃಖದ ಈ ಸಮಯದಲ್ಲಿ, ನಾವೆಲ್ಲರೂ ನಿಮ್ಮೊಂದಿಗೆ ನಿಲ್ಲುತ್ತೇವೆ. ನಿಮಗೂ ಸಹ ಬಹಳ ತಾಳ್ಮೆ ಮತ್ತು ಧೈರ್ಯ ಅಗತ್ಯ ಎಂದು ಖರ್ಗೆ ತಮ್ಮ ಪತ್ರದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು.

2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವೈ.ಪುರಣ್ ಕುಮಾರ್ (52) ಅಕ್ಟೋಬರ್ 7ರಂದು ಚಂಡೀಗಢದ ತಮ್ಮ ಸೆಕ್ಟರ್ 11ರ ಮನೆಯ ನೆಲಮಾಳಿಗೆಯಲ್ಲಿರುವ ಕೋಣೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇತ್ತೀಚೆಗೆ ಅವರನ್ನು ರೋಹ್ಟಕ್‌ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿತ್ತು.

ಹರಿಯಾಣ ಸರ್ಕಾರಿ ನಿಯೋಗದೊಂದಿಗೆ ಜಪಾನ್​​ ಪ್ರವಾಸಕ್ಕೆ ತೆರಳಿದ್ದ ಪುರಣ್ ಕುಮಾರ್ ಅವರ ಪತ್ನಿ ಅಮ್ನೀತ್ ಪಿ.ಕುಮಾರ್ ಮಾಹಿತಿ ತಿಳಿದ ತಕ್ಷಣ ಅಲ್ಲಿಂದ ಚಂಡೀಗಢಕ್ಕೆ ಧಾವಿಸಿದ್ದರು. ತಮ್ಮ ಪತಿಯ ಸಾವಿಗೆ ಉನ್ನತ ಅಧಿಕಾರಿಗಳ ವ್ಯವಸ್ಥಿತ ಕಿರುಕುಳವೇ ಕಾರಣ ಎಂದು ತಮ್ಮ ದೂರಿನಲ್ಲಿ ಅವರು ಆರೋಪಿಸಿದ್ದಾರೆ.

ಪುರಣ್ ಕುಮಾರ್ ಬರೆದಿದ್ದಾರೆ ಎನ್ನಲಾದ ಡೆತ್​ ನೋಟ್​ನಲ್ಲಿ ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಸೇರಿದಂತೆ 8 ಮಂದಿ ಹಿರಿಯ ಅಧಿಕಾರಿಗಳ ಮೇಲೆ ಜಾತಿ ಆಧಾರಿತ ತಾರತಮ್ಯ, ಉದ್ದೇಶಿತ ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಮತ್ತು ದೌರ್ಜನ್ಯದ ಕುರಿತಂತೆ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ: ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶ