ನವದೆಹಲಿ: ಭಾರತದಲ್ಲಿ ನವೆಂಬರ್ 12ರಿಂದ ಡಿಸೆಂಬರ್ 16ರವರೆಗೆ ವಿವಾಹಗಳ ಸೀಸನ್ ಇದ್ದು, ಈ ಅವಧಿಯಲ್ಲಿ 48 ಲಕ್ಷ ಮದುವೆಗಳು ನಡೆಯಲಿದ್ದು, ಸುಮಾರು 6 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷ ದಾಖಲಾದ 35 ಲಕ್ಷ ಮದುವೆ ಹಾಗೂ 4.25 ಲಕ್ಷ ಕೋಟಿ ರೂ. ವಹಿವಾಟಿಗೆ ಹೋಲಿಸಿದರೆ ಶೇ 41ರಷ್ಟು ಏರಿಕೆಯಾಗಿದೆ. ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ನಡೆಸಿದ ಅಧ್ಯಯನದಲ್ಲಿ ಈ ಎಲ್ಲ ಮಾಹಿತಿಗಳು ತಿಳಿದು ಬಂದಿವೆ.
ಹಿಂದಿನ ವರ್ಷ ವಿವಾಹದ 11 ಶುಭ ಮುಹೂರ್ತಗಳಿದ್ದರೆ, ಈ ವರ್ಷ 18 ಶುಭ ಮುಹೂರ್ತಗಳು ಬಂದಿವೆ. ಇದು ವ್ಯವಹಾರದ ಬೆಳವಣಿಗೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ದೆಹಲಿ ಮಹಾನಗರ ಒಂದರಲ್ಲಿಯೇ ಈ ವರ್ಷ 4.5 ಲಕ್ಷ ಮದುವೆಗಳು ಜರುಗಲಿದ್ದು, 1.5 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಯುವ ನಿರೀಕ್ಷೆಯಿದೆ ಎಂದು ಸಿಎಐಟಿ ಸಂಗ್ರಹಿಸಿದ ಅಂದಾಜುಗಳು ತೋರಿಸಿವೆ.
ಈ ಸೀಸನ್ನಲ್ಲಿ 3 ಲಕ್ಷ ರೂ. ವೆಚ್ಚದ 10 ಲಕ್ಷ ಮದುವೆಗಳು, 6 ಲಕ್ಷ ವೆಚ್ಚದ 10 ಲಕ್ಷ ಮದುವೆಗಳು, 10 ಲಕ್ಷ ವೆಚ್ಚದ 10 ಲಕ್ಷ ಮದುವೆಗಳು, 15 ಲಕ್ಷ ರೂ. ವೆಚ್ಚದ 10 ಲಕ್ಷ ಮದುವೆಗಳು, 25 ಲಕ್ಷ ರೂ. ವೆಚ್ಚದ 7 ಲಕ್ಷ ಮದುವೆಗಳು, 50 ಲಕ್ಷ ರೂ. ವೆಚ್ಚದ 50 ಸಾವಿರ ಮದುವೆಗಳು ಮತ್ತು 1 ಕೋಟಿ ರೂ. ವೆಚ್ಚದ 50 ಸಾವಿರ ಮದುವೆಗಳು ನಡೆಯುವ ನಿರೀಕ್ಷೆಯಿದೆ.
ವಿವಾಹ ಮುಹೂರ್ತಗಳ ಬಗ್ಗೆ ಮಾತನಾಡಿದ ಸಿಎಐಟಿಯ ವೇದ ಮತ್ತು ಆಧ್ಯಾತ್ಮಿಕ ಸಮಿತಿಯ ಸಂಚಾಲಕ ಆಚಾರ್ಯ ದುರ್ಗೇಶ್ ತಾರೆ, "ಈ ಋತುವಿನ ಶುಭ ವಿವಾಹ ದಿನಾಂಕಗಳು ನವೆಂಬರ್ 12, 13, 17, 18, 22, 23, 25, 26, 28 ಮತ್ತು 29 ಮತ್ತು ಡಿಸೆಂಬರ್ 4, 5, 9, 10, 11, 14, 15 ಮತ್ತು 16 ಆಗಿವೆ" ಎಂದರು. ಈ ಅವಧಿಯ ನಂತರ, ಜನವರಿ ಮಧ್ಯದಿಂದ ಮಾರ್ಚ್ 2025 ರವರೆಗಿನ ಅವಧಿಯ ಮತ್ತೊಂದು ಮದುವೆ ಸೀಸನ್ ಆರಂಭವಾಗುವ ಮುನ್ನ ಸುಮಾರು ಒಂದು ತಿಂಗಳ ವಿರಾಮವಿರುತ್ತದೆ" ಎಂದು ಅವರು ತಿಳಿಸಿದರು.
"ಪ್ರಧಾನಿ ನರೇಂದ್ರ ಮೋದಿಯವರ 'ವೋಕಲ್ ಫಾರ್ ಲೋಕಲ್' ಮತ್ತು 'ಆತ್ಮನಿರ್ಭರ ಭಾರತ್' (ಸ್ವಾವಲಂಬಿ ಭಾರತ) ದೃಷ್ಟಿಕೋನದ ಯಶಸ್ಸನ್ನು ಪ್ರತಿಬಿಂಬಿಸುವ, ವಿದೇಶಿ ಸರಕುಗಳಿಗಿಂತ ಭಾರತೀಯ ಉತ್ಪನ್ನಗಳನ್ನು ಹೆಚ್ಚಾಗಿ ಆಯ್ಕೆ ಮಾಡುವ ಮೂಲಕ ಗ್ರಾಹಕರ ಖರೀದಿ ನಡವಳಿಕೆಯಲ್ಲಿನ ಬದಲಾವಣೆಯನ್ನು ಅಧ್ಯಯನವು ಎತ್ತಿ ತೋರಿಸಿದೆ" ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ಹೇಳಿದ್ದಾರೆ.
ಮದುವೆಯ ಖರ್ಚುಗಳನ್ನು ಸರಕು ಮತ್ತು ಸೇವೆಗಳ ನಡುವೆ ವಿಂಗಡಿಸಲಾಗಿದೆ. ಸರಕು ವೆಚ್ಚಗಳಲ್ಲಿ ಆಭರಣಗಳು (15 ಪ್ರತಿಶತ), ಬಟ್ಟೆ (10 ಪ್ರತಿಶತ), ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳು (5 ಪ್ರತಿಶತ), ಒಣ ಹಣ್ಣುಗಳು, ಸಿಹಿತಿಂಡಿಗಳು ಮತ್ತು ತಿಂಡಿಗಳು (5 ಪ್ರತಿಶತ), ದಿನಸಿ ಮತ್ತು ತರಕಾರಿಗಳು (5 ಪ್ರತಿಶತ), ಉಡುಗೊರೆ ವಸ್ತುಗಳು (4 ಪ್ರತಿಶತ) ಮತ್ತು ಇತರ ಸರಕುಗಳು (6 ಪ್ರತಿಶತ) ಸೇರಿವೆ.
ಇನ್ನು ಸೇವಾ ವೆಚ್ಚಗಳಲ್ಲಿ ಔತಣಕೂಟ ಸಭಾಂಗಣಗಳು, ಹೋಟೆಲ್ಗಳು ಮತ್ತು ಸ್ಥಳಗಳು (5 ಪ್ರತಿಶತ), ಅಡುಗೆ ಸೇವೆಗಳು (10 ಪ್ರತಿಶತ), ಈವೆಂಟ್ ಮ್ಯಾನೇಜಮೆಂಟ್, ಟೆಂಟ್ ಅಲಂಕಾರ ಹೂವಿನ ಅಲಂಕಾರಗಳು, ಸಾರಿಗೆ ಮತ್ತು ಕ್ಯಾಬ್ ಸೇವೆಗಳು (3 ಪ್ರತಿಶತ), ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ (2 ಪ್ರತಿಶತ), ಸಂಗೀತ ಮತ್ತು ಬೆಳಕಿನಂತಹ ಇತರ ಸೇವೆಗಳು ಸೇರಿವೆ.
ಇದನ್ನೂ ಓದಿ: ಪಂಜಾಬ್ನಲ್ಲಿ 85 ಲಕ್ಷ ಟನ್ ಭತ್ತ ಖರೀದಿಸಿದ ಕೇಂದ್ರ: ರೈತರಿಗೆ 19,800 ಕೋಟಿ ರೂ. ಪಾವತಿ