ನವದೆಹಲಿ: ಭಾರತದ ಜನಸಂಖ್ಯೆ 2025ರಲ್ಲಿ 146 ಕೋಟಿ ತಲುಪುವ ಅಂದಾಜು ಮಾಡಲಾಗಿದ್ದು, ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಿ ಮುಂದುವರೆದಿದೆ ಎಂದು ವಿಶ್ವಸಂಸ್ಥೆ (ಯುಎನ್) ಜನಸಂಖ್ಯಾ ವರದಿ ತಿಳಿಸಿದೆ. ಆದರೆ, ದೇಶದ ಒಟ್ಟು ಫಲವತ್ತತೆ ದರ ಬದಲಿ (Replacement Rate) ದರಕ್ಕಿಂತ ಕಡಿಮೆಯಾಗಿದೆ ಎಂದು ಎಚ್ಚರಿಸಿದೆ.
ಯುಎನ್‌ಎಫ್‌ಪಿಎಯ 2025ರ ವಿಶ್ವ ಜನಸಂಖ್ಯಾ ಸ್ಥಿತಿ ವರದಿ 'ದಿ ರಿಯಲ್ ಫರ್ಟಿಲಿಟಿ ಕ್ರೈಸಿಸ್', ಫಲವತ್ತತೆ ಕಡಿಮೆಯಾಗುವ ಕುರಿತು ಆತಂಕಪಡುವುದಕ್ಕಿಂತ ಸಂತಾನೋತ್ಪತ್ತಿ ಗುರಿಗಳನ್ನು ಪರಿಹರಿಸುವತ್ತ ನಾವು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದೆ. ಇಂದೂ ಕೂಡಾ ಲಕ್ಷಾಂತರ ಜನರಿಗೆ ತಮ್ಮ ನಿಜವಾದ ಫಲವತ್ತತೆ ಗುರಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ನಿಜವಾದ ಬಿಕ್ಕಟ್ಟು. ಇದು ಕಡಿಮೆ ಜನಸಂಖ್ಯೆ ಅಥವಾ ಅಧಿಕ ಜನಸಂಖ್ಯೆಯ ಕುರಿತ ಪ್ರಶ್ನೆಯಲ್ಲ. ಸಂತಾನೋತ್ಪತ್ತಿ ವಿಚಾರಗಳಾದ ಲೈಂಗಿಕತೆ, ಗರ್ಭ ನಿರೋಧಕತೆ ಹಾಗು ಕುಟುಂಬವನ್ನು ಪ್ರಾರಂಭಿಸುವ ಕುರಿತು ಮುಕ್ತ, ಮಾಹಿತಿಪೂರ್ಣ ಆಯ್ಕೆಗಳನ್ನು ಮಾಡಲು ಜನರು ಸಾಮರ್ಥ್ಯ ಹೊಂದಿರಬೇಕು ಎಂದಿದೆ.

ಫಲವತ್ತತೆ ದರ 1.9ಕ್ಕೆ ಕುಸಿತ: ಭಾರತದ ಒಟ್ಟು ಫಲವತ್ತತೆ ದರ ಪ್ರತಿ ಮಹಿಳೆಗೆ 1.9 ಜನನಗಳಿಗೆ ಕುಸಿದಿದೆ. ಇದು 2.1ರ ಬದಲಿ ಮಟ್ಟಕ್ಕಿಂತ ಕಡಿಮೆ ಎಂದು ವರದಿ ಹೇಳುತ್ತದೆ. ಸರಾಸರಿಯಾಗಿ, ಭಾರತೀಯ ಮಹಿಳೆಯರು ಅಗತ್ಯಕ್ಕಿಂತ ಕಡಿಮೆ ಮಕ್ಕಳನ್ನು ಹೊಂದುತ್ತಿದ್ದಾರೆ ಎಂಬುದು ಇದರ ಅರ್ಥ.
ಯುವಶಕ್ತಿ: ಇದರ ನಡುವೆ, ಜನನ ಪ್ರಮಾಣ ನಿಧಾನವಾಗುತ್ತಿದ್ದರೂ ದೇಶದ ಯುವ ಜನಸಂಖ್ಯೆ ಗಮನಾರ್ಹವಾಗಿ ಉಳಿದಿದೆ ಎಂಬುದು ಸಮಾಧಾನಕರ ಸಂಗತಿ. ಒಟ್ಟು ಜನಸಂಖ್ಯೆಯಲ್ಲಿ 0-14ರ ವಯಸ್ಸಿನವರ ವ್ಯಾಪ್ತಿಯಲ್ಲಿ ಶೇ. 24, 10-19ರಲ್ಲಿ ಶೇ.17 ಮತ್ತು 10-24ರಲ್ಲಿ ಶೇ. 26ರಷ್ಟು ಯುವ ಜನಸಂಖ್ಯೆ ಇದೆ.
ಭಾರತದ ಒಟ್ಟು ಜನಸಂಖ್ಯೆಯ ಶೇ.68ರಷ್ಟು ಜನರು ಕೆಲಸ ಮಾಡುವ ವಯಸ್ಸಿನವರು(15-64) ಎಂಬುದು ಗಮನಾರ್ಹ. ಇದು ಸಾಕಷ್ಟು ಉದ್ಯೋಗ ಮತ್ತು ಸರ್ಕಾರದ ನೀತಿಗಳ ಬೆಂಬಲದೊಂದಿಗೆ ಹೊಂದಿಕೆಯಾದರೆ ಸಂಭಾವ್ಯ ಜನಸಂಖ್ಯಾ ಲಾಭಾಂಶವನ್ನು (Demographic Dividend) ಒದಗಿಸುತ್ತದೆ.

ಇನ್ನು, ವಯಸ್ಸಾದವರ ಜನಸಂಖ್ಯೆ (65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಸ್ತುತ ಶೇ 7ರಷ್ಟಿದೆ. ಜೀವಿತಾವಧಿ ಸುಧಾರಿಸಿದಂತೆ ಮುಂದಿನ ದಶಕಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆ ಇದೆ. 2025ರ ಹೊತ್ತಿಗೆ ಜನನ ಸಮಯದಲ್ಲಿ ಜೀವಿತಾವಧಿ ಪುರುಷರಿಗೆ 71 ಮತ್ತು ಮಹಿಳೆಯರಿಗೆ 74 ವರ್ಷಗಳು ಎಂಬುದು ಒಂದು ಅಂದಾಜು.
ವಿಶ್ವಸಂಸ್ಥೆಯ ಅಂದಾಜಿನಂತೆ, ಭಾರತದ ಪ್ರಸ್ತುತ ಜನಸಂಖ್ಯೆ 1,463.9 ಮಿಲಿಯನ್ (ಸುಮಾರು 146 ಕೋಟಿ). ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಸಂಖ್ಯೆ ಮುಂದಿನ 40 ವರ್ಷಗಳ ನಂತರ ಸುಮಾರು 1.7 ಶತಕೋಟಿಗೆ ಬೆಳೆಯುವ ನಿರೀಕ್ಷೆ ಇದೆ.
1960ರಲ್ಲಿ ಭಾರತದ ಜನಸಂಖ್ಯೆ ಸುಮಾರು 436 ಮಿಲಿಯನ್ ಆಗಿದ್ದಾಗ, ಮಹಿಳೆ (ಸರಾಸರಿ) ಸುಮಾರು 6 ಮಕ್ಕಳನ್ನು ಹೊಂದುತ್ತಿದ್ದರು. ಆಗ ಮಹಿಳೆ ತಮ್ಮ ದೇಹ ಮತ್ತು ಬದುಕಿನ ಮೇಲೆ ಇಂದಿನಂತೆ ಕಡಿಮೆ ನಿಯಂತ್ರಣ ಹೊಂದಿದ್ದಳು. ಪ್ರತಿ 4ರಲ್ಲಿ 1ಕ್ಕಿಂತ ಕಡಿಮೆ ಮಹಿಳೆಯರು ಕೆಲವು ರೀತಿಯ ಗರ್ಭನಿರೋಧಕಗಳನ್ನು ಬಳಸುತ್ತಿದ್ದರು. ಪ್ರತಿ 2ರಲ್ಲಿ ಒಬ್ಬರಿಗಿಂತಲೂ ಕಡಿಮೆ ಮಹಿಳೆಯರು ಪ್ರಾಥಮಿಕ ಶಾಲೆಗೆ ಹೋದವರಿದ್ದರು ಎಂದು 2020ರ ವಿಶ್ವಬ್ಯಾಂಕ್ ದತ್ತಾಂಶ ತಿಳಿಸಿದೆ.
ಆದರೆ, ಮಂದಿನ ದಶಕಗಳಲ್ಲಿ ಶೈಕ್ಷಣಿಕ ಸಾಧನೆ ಗಮನಾರ್ಹವಾಗಿ ಸುಧಾರಿಸಿತು. ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಪ್ರವೇಶ ಅಭಿವೃದ್ಧಿ ಹೊಂದಿತು. ಹೆಚ್ಚಿನ ಮಹಿಳೆಯರು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಧಾರಗಳಲ್ಲಿ ಗಟ್ಟಿ ಧ್ವನಿ ಎತ್ತಿದರು. ಇವೆಲ್ಲದರ ಪರಿಣಾಮವೇ ಭಾರತದಲ್ಲಿ ಸದ್ಯ ಸರಾಸರಿ ಪ್ರಮಾಣದಲ್ಲಿ ನೋಡಿದರೆ, ಓರ್ವ ಮಹಿಳೆ ಸುಮಾರು ಇಬ್ಬರು ಮಕ್ಕಳನ್ನು ಹೊಂದುತ್ತಿದ್ದಾಳೆ.

"ಭಾರತ ಫಲವತ್ತತೆ ದರಗಳನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 1970ರಲ್ಲಿ ಪ್ರತಿ ಮಹಿಳೆ ಸುಮಾರು ಐದು ಮಕ್ಕಳನ್ನು ಹೊಂದುತ್ತಿದ್ದು, ಇಂದು ಸುಮಾರು ಎರಡು ಮಕ್ಕಳವರೆಗೆ ಸುಧಾರಿಸಿದೆ. ಇದಕ್ಕೆ ಸುಧಾರಿತ ಶಿಕ್ಷಣ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು ಕಾರಣ" ಎಂದು UNFPA ಭಾರತದ ಪ್ರತಿನಿಧಿ ಆಂಡ್ರಿಯಾ ಎಂ.ವೋಜ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಇಂದು ತಾಯಂದಿರ ಮರಣದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಲಕ್ಷಾಂತರ ತಾಯಂದಿರು ಮಕ್ಕಳನ್ನು ಬೆಳೆಸುತ್ತಿದ್ದಾರೆ ಮತ್ತು ಸಮುದಾಯಗಳನ್ನು ನಿರ್ಮಿಸುತ್ತಿದ್ದಾರೆ. ಹೀಗಿದ್ದರೂ ವಿವಿಧ ಜಾತಿಗಳು ಮತ್ತು ಆದಾಯ ಗುಂಪುಗಳಲ್ಲಿ ಅಸಮಾನತೆಗಳು ಮುಂದುವರೆದಿವೆ. ಪ್ರತಿಯೊಬ್ಬರೂ ತಿಳುವಳಿಕೆಯುಳ್ಳ ಸಂತಾನೋತ್ಪತ್ತಿ ಆಯ್ಕೆಗಳನ್ನು ಮಾಡಲು ಸ್ವಾತಂತ್ರ್ಯ ಮತ್ತು ವ್ಯವಸ್ಥೆಗಳಿದ್ದಾಗ ನಿಜವಾದ ಜನಸಂಖ್ಯಾ ಲಾಭಾಂಶ ಸಿಗುತ್ತದೆ. ಸಂತಾನೋತ್ಪತ್ತಿಯ ಹಕ್ಕುಗಳು ಮತ್ತು ಆರ್ಥಿಕ ಸಮೃದ್ಧಿ ಹೇಗೆ ಒಟ್ಟಾಗಿ ಮುನ್ನಡೆಯಬಹುದು ಎಂಬುದನ್ನು ತೋರಿಸಲು ಭಾರತಕ್ಕೆ ಅದ್ಭುತ ಅವಕಾಶವಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸತತ 14ನೇ ವರ್ಷ ಜಪಾನ್ ಜನಸಂಖ್ಯೆ ಇಳಿಮುಖ; ಕಾರ್ಮಿಕರ ಕೊರತೆ ತೀವ್ರ - JAPAN POPULATION