ಗಾಜಿಯಾಬಾದ್(ಉತ್ತರ ಪ್ರದೇಶ): ಭಾರತ ವಿರುದ್ಧದ ಸಶಸ್ತ್ರ ಸಂಘರ್ಷದಲ್ಲಿ ಟರ್ಕಿ ದೇಶ ಪಾಕಿಸ್ತಾನಕ್ಕೆ ಡ್ರೋನ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ನೀಡಿ ಬೆಂಬಲಿಸಿತ್ತು. ಇದಾದ ನಂತರ, ಟರ್ಕಿ ವಿರುದ್ಧ ಭಾರತದಲ್ಲಿ ಆಕ್ರೋಶ ಕೇಳಿಬರುತ್ತಿದೆ. ಇದೀಗ ಹಣ್ಣಿನ ವ್ಯಾಪಾರಿಗಳು ಟರ್ಕಿಶ್ ಸರಕುಗಳನ್ನು, ಅದರಲ್ಲೂ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸೇಬುಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸುವ ಯಾವುದೇ ದೇಶವೇ ಆದರೂ ಇಲ್ಲಿ ಬಹಿಷ್ಕಾರದ ಬಿಸಿ ಎದುರಿಸಲೇಬೇಕಾಗುತ್ತದೆ ಎಂದು ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾರತದ ಮೇಲೆ ದಾಳಿ ಮಾಡಲು ಟರ್ಕಿ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ನೀಡಿತು. ಅದಕ್ಕಾಗಿ ನಾವು ಟರ್ಕಿಶ್ ಹಣ್ಣುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ" ಎಂದು ಓರ್ವ ಹಣ್ಣಿನ ಮಾರಾಟಗಾರ ಹೇಳಿದರು.
ಭಾರತ ವಾರ್ಷಿಕವಾಗಿ ಟರ್ಕಿಯಿಂದ 1,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸೇಬುಗಳಂತಹ ಹಣ್ಣುಗಳ ಗಮನಾರ್ಹ ಪಾಲಿದೆ.
ಈ ಹಿಂದೆ ಬೇಡಿಕೆ ಇಡಲಾದ ಕೆಲವು ಸರಕುಗಳು ಬರುತ್ತಿವೆ. ಆದರೆ ಹೊಸ ಬೇಡಿಕೆಗಳನ್ನು ನಾವು ನೀಡುವುದಿಲ್ಲ ಎಂದು ಮಾರಾಟಗಾರರು ಹೇಳಿದ್ದಾರೆ. "ಇನ್ನು ಮುಂದೆ ಟರ್ಕಿಶ್ ಹಣ್ಣುಗಳನ್ನು ಖರೀದಿಸುವುದನ್ನೇ ನಿಲ್ಲಿಸುತ್ತೇವೆ. ಭಯೋತ್ಪಾದನೆಯನ್ನು ಬೆಂಬಲಿಸುವ ಯಾವುದೇ ದೇಶವನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಪರಿಗಣಿಸುವುದಿಲ್ಲ" ಎಂದು ಮತ್ತೊಬ್ಬ ವ್ಯಾಪಾರಿ ತಿಳಿಸಿದರು.
ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಹಾಯ ಮಾಡಲು ಟರ್ಕಿ ಭಾರತದ ಹಣ ಬಳಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಾಗಾಗಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ಟರ್ಕಿಶ್ ಉತ್ಪನ್ನಗಳ ಮಾರಾಟ ನಿಲ್ಲಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
"ನಾವು ಟರ್ಕಿಯ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದೇವೆ. ಸೇಬುಗಳನ್ನು ಹೊರತುಪಡಿಸಿ, ಟರ್ಕಿಯಿಂದ ಹಲವಾರು ಇತರ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ. ಟರ್ಕಿ ಭಾರತದಲ್ಲಿ ಉತ್ತಮ ವ್ಯಾಪಾರ ಮಾಡುತ್ತಿತ್ತು. ಆದರೆ ಈಗ ನಾವು ಅವರೊಂದಿಗೆ ಎಲ್ಲಾ ರೀತಿಯ ವ್ಯಾಪಾರವನ್ನು ಕೊನೆಗೊಳಿಸಿದ್ದೇವೆ. ಭವಿಷ್ಯದಲ್ಲಿ ನಾವು ಟರ್ಕಿಯಿಂದ ಏನನ್ನೂ ಆಮದು ಮಾಡಿಕೊಳ್ಳುವುದಿಲ್ಲ" ಎಂದು ಸ್ಥಳೀಯ ಹಣ್ಣಿನ ವ್ಯಾಪಾರಿ ಶಾದಾಬ್ ಖಾನ್ ಹೇಳಿದರು.
"ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿರುವ ವಿಚಾರ ನಮಗೆ ಮಾಧ್ಯಮದ ಮೂಲಕ ಗೊತ್ತಾಯಿತು. ಭಾರತದಲ್ಲಿ ಟರ್ಕಿಯ ಸೇಬು ವ್ಯಾಪಾರ ಸುಮಾರು 1,200-1,400 ಕೋಟಿ ರೂ.ಗಳಷ್ಟಿದ್ದು, ಇನ್ನೂ 2-3 ರೀತಿಯ ಹಣ್ಣುಗಳನ್ನು ಸಹ ಆಮದು ಮಾಡಿಕೊಳ್ಳಲಾಗಿದೆ. ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ, ನಾವು ಅದರೊಂದಿಗಿನ ಎಲ್ಲಾ ವ್ಯವಹಾರ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿದ್ದೇವೆ. ಭಾರತದೊಂದಿಗಿನ ವ್ಯಾಪಾರದಿಂದ ಯಾವುದೇ ದೇಶವು ಲಾಭ ಪಡೆಯುವುದನ್ನು ಮತ್ತು ನಂತರ ಅದನ್ನು ನಮ್ಮ ವಿರುದ್ಧ ಬಳಸುವುದನ್ನು ನಾವು ಬಯಸುವುದಿಲ್ಲ" ಎಂಬುದು ವ್ಯಾಪಾರಿಗಳ ಅಂಬೋಣ.
"ನಾವು ಈಗ ಟರ್ಕಿಯಿಂದ ಆಮದು ಮಾಡಿಕೊಳ್ಳುವ ಎಲ್ಲಾ ಹಣ್ಣುಗಳನ್ನು ಬಹಿಷ್ಕರಿಸುತ್ತಿದ್ದೇವೆ ಮತ್ತು ಅವರೊಂದಿಗೆ ಯಾವುದೇ ವ್ಯವಹಾರದಲ್ಲಿ ತೊಡಗುವುದಿಲ್ಲ" ಎಂದು ಹಣ್ಣಿನ ಮಾರಾಟಗಾರ ನೂರ್ ಮೊಹಮ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಮೇಲಿನ ದಾಳಿಗೆ ಪಾಕಿಸ್ತಾನಕ್ಕೆ ಚೀನಾದ ಕ್ಷಿಪಣಿಗಳು, ಟರ್ಕಿಯ ಡ್ರೋನ್ಗಳ ರವಾನೆ - OPERATION SINDOOR